Advertisement

ಹಸುರು ಸಂಕಲ್ಪ: 3.54 ಲಕ್ಷ ಗಿಡ ನಾಟಿ

10:50 PM Jun 04, 2019 | mahesh |

ಸುಳ್ಯ: ಹಸುರೀಕರಣದ ಸಂಕಲ್ಪದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಯ ಮೂರು ವಿಭಾಗದ ಸಸ್ಯ ಕ್ಷೇತ್ರದಲ್ಲಿ ಈ ಬಾರಿ 3.54 ಲಕ್ಷ ಗಿಡ ಬೆಳೆಸಲಾಗಿದ್ದು, ಹೆಮ್ಮರವಾಗಿ ಮೈ ತಳೆಯಲು ಸಿದ್ದಗೊಂಡಿವೆ.

Advertisement

ಸುಳ್ಯ ಅರಣ್ಯ ವಲಯದಲ್ಲಿ 1.44 ಲಕ್ಷ, ಸುಬ್ರಹ್ಮಣ್ಯ ವಲಯದಲ್ಲಿ 1 ಲಕ್ಷ, ಪಂಜ ವಲಯದಲ್ಲಿ 1.10 ಲಕ್ಷ ಗಿಡಗಳನ್ನು ಆಯಾ ಸಸ್ಯ ಕ್ಷೇತ್ರಗಳಲ್ಲಿ ಬೆಳೆಸಲಾಗಿದೆ. ಜನರಿಗೆ ಹಾಗೂ ನೆಡುತೋಪುಗಳಲ್ಲಿ ನೆಡಲು ಗಿಡ ಬೆಳೆಸಲಾಗುತ್ತದೆ. ಈ ಬಾರಿ ವಿವಿಧ ಜಾತಿಯ ಗಿಡಗಳು ಹಚ್ಚ ಹಸುರಿನಿಂದ ನಳನಳಿಸುತ್ತಿದ್ದು, ವಿತರಣೆಗೆ ಸಿದ್ಧವಾಗಿದೆ.  ಅರಣ್ಯ ಇಲಾಖೆಯ ವಿವಿಧ ಯೋಜನೆ ಮೂಲಕ ಗಿಡ ವಿತರಣೆ ಕಾರ್ಯ ವಿಶ್ವ ಪರಿಸರ ದಿನಾಚರಣೆ ಅನಂತರ ಚುರುಕು ಪಡೆಯಲಿದೆ.

ಸಾರ್ವಜನಿಕ ವಿತರಣೆಗೆ 1.25 ಲಕ್ಷ ಗಿಡ
ಸುಳ್ಯ ವಲಯದ ಮೇದಿನಡ್ಕ ಸಸ್ಯ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ವಿತರಣೆಗೆಂದು 42,500 ಗಿಡಗಳು, ಪಂಜದಲ್ಲಿ 50 ಸಾವಿರ, ಸುಬ್ರಹ್ಮಣ್ಯದಲ್ಲಿ 33 ಸಾವಿರ ಗಿಡಗಳನ್ನು ಬೆಳೆಸಲಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಸಹಿತ ವಿವಿಧ ಯೋಜನೆಗಳಡಿ ಪ್ರೋತ್ಸಾಹ ದರದಲ್ಲಿ ಗಿಡ ವಿತರಿಸಲಾಗುತ್ತದೆ. ಮಳೆಗಾಲ ಆರಂಭಗೊಂಡ ಮೇಲೆ ಸಂಘ-ಸಂಸ್ಥೆ, ಶಾಲೆಗಳ ಸಹಯೋಗದಲ್ಲಿ ವನಮಹೋತ್ಸವ ಮೊದಲಾದ ಚಟುವಟಿಕೆ ಹಮ್ಮಿಕೊಳ್ಳಲು ಅರಣ್ಯ ಇಲಾಖೆ ತಯಾರಿ ನಡೆಸಿದೆ.

ನೆಡುತೋಪುಗಳಲ್ಲಿ ನಾಟಿ ಮಾಡಲು ಮೂರು ವಲಯಗಳಲ್ಲಿ 2.29 ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ಮೇದಿನಡ್ಕ ಸಸ್ಯ ಕ್ಷೇತ್ರದಲ್ಲಿ 1,01,500 ಗಿಡಗಳು, ಪಂಜದಲ್ಲಿ 60 ಸಾವಿರ, ಸುಬ್ರಹ್ಮಣ್ಯದಲ್ಲಿ 66 ಸಾವಿರ ಗಿಡಗಳಿವೆ. ಇವುಗಳು ಮಾರಾಟಕ್ಕೆಂದು ನಾಟಿ ಮಾಡಿದ ಗಿಡಗಳಲ್ಲ. ಅರಣ್ಯ ಇಲಾಖೆಗೆ ಸೇರಿರುವ ನೆಡುತೋಪುಗಳಲ್ಲಿ ಇವುಗಳನ್ನು ಬೆಳೆಸಲಾಗುತ್ತದೆ.

ಯಾವೆಲ್ಲ ಗಿಡಗಳಿವೆ?
ಮೂರು ವಲಯದ ಸಸ್ಯ ಕ್ಷೇತ್ರದಲ್ಲಿ ಸಾಗುವಾನಿ, ಹುಣಸೆ, ಸ್ಟಾರ್‌ ಆಪಲ್‌, ಪುನರ್‌ಪುಳಿ, ಜಾರಿಗೆ ಹುಳಿ, ಕಹಿಬೇವು, ಶ್ರೀಗಂಧ, ಮಹಾಗನಿ, ನೆಲ್ಲಿ, ಕಿರಾಲ್‌ಬೋಗಿ, ರಾಂಪತ್ರೆ, ಉಂಡೆಹುಳಿ, ರೆಂಜೆ, ಹೊಂಗೆ, ಹೆಬ್ಬೇವು, ಅಂಟುವಾಳ, ಬಾದಾಮಿ, ನೇರಳೆ, ಹಲಸು, ಮಾವು ಮೊದಲಾದ 50ಕ್ಕೂ ಅಧಿಕ ಸಸ್ಯಗಳಿವೆ.

Advertisement

ಕಳೆದ ವರ್ಷ 2.27 ಲಕ್ಷ ಗಿಡಗಳು
ಕಳೆದ ಸಾಲಿನಲ್ಲಿ ಸುಬ್ರಹ್ಮಣ್ಯ ಉಪವಿಭಾಗದ ಮೂರು ವಲಯಗಳಲ್ಲಿ ಒಟ್ಟು 2,27,475 ಗಿಡಗಳನ್ನು ಬೆಳೆಸಲಾಗಿತ್ತು. ಸುಳ್ಯ ವಲಯದ ಮೇದಿನಡ್ಕ ಕೇಂದ್ರೀಯ ಸಸ್ಯ ಕ್ಷೇತ್ರದಲ್ಲಿ 81,575 ಗಿಡಗಳನ್ನು ಬೆಳೆದು, ನೆಡು ತೋಪುಗಳಲ್ಲಿ ನೆಡಲು 67,575 ಮತ್ತು ಸಾರ್ವಜನಿಕ ವಿತರಣೆಗೆ 14 ಸಾವಿರ ಗಿಡಗಳನ್ನು ಬಳಸಲಾಗಿತ್ತು. ಪಂಜ ವಲಯದಲ್ಲಿ 66,900 ಗಿಡಗಳನ್ನು ಬೆಳೆಸಿ, 14 ಸಾವಿರ ಸಾರ್ವಜನಿಕ ವಿತರಣೆಗೆ ಮತ್ತು 52,900 ನೆಡುತೋಪುಗಳಲ್ಲಿ ನೆಡಲಾಗಿತ್ತು. ಸುಬ್ರಹ್ಮಣ್ಯ ವಲಯದಲ್ಲಿ 79 ಸಾವಿರ ಗಿಡಗಳನ್ನು ಬೆಳೆಸಿ, 29 ಸಾವಿರ ಗಿಡ ಸಾರ್ವಜನಿಕರಿಗೆ ವಿತರಿಸಲಾಗಿತ್ತು.

ಗಿಡ ಸಿದ್ಧ
ಸುಳ್ಯ ವಲಯದ ಮೇದಿನಡ್ಕ ಸಸ್ಯ ಕ್ಷೇತ್ರದಲ್ಲಿ ಸಾರ್ವಜನಿಕ ವಿತರಣೆ ಮತ್ತು ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ನೆಡಲು ಗಿಡಗಳು ಸಿದ್ದವಾಗಿವೆ. ಈ ಬಾರಿ ಅರಣ್ಯ ಇಲಾಖೆಯ ವಿವಿಧ ಯೋಜನೆಗಳ ಮೂಲಕ ಹಸುರು ಸಂಪತ್ತು ವೃದ್ಧಿಗೆ ಆದ್ಯತೆ ನೀಡಲಾಗುವುದು.
– ಮಂಜುನಾಥ ಎನ್‌. ವಲಯ ಅರಣ್ಯಾಧಿಕಾರಿ ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next