ತೇರದಾಳ: ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ನಿರಂತರವಾಗಿ ಪೋಷಿಸಿ, ಬೆಳೆಸಿದರೆ ಎಲ್ಲರ ಆರೋಗ್ಯ ಉತ್ತಮಗೊಳ್ಳುತ್ತದೆ. ವಿದ್ಯಾರ್ಥಿಗಳು ತಪ್ಪದೆ ಈ ಕಾರ್ಯ ಕರ್ತವ್ಯವೆಂದು ಮಾಡುವ ಮೂಲಕ ಪರಿಸರ ರಕ್ಷಿಸಬೇಕು ಎಂದು ಜಮಖಂಡಿ ಉಪವಿಭಾಗಾಧಿಕಾರಿ ಇಕ್ರಂ ಹೇಳಿದರು.
ಹಳಿಂಗಳಿ ಗ್ರಾಮದ ಅಹಿಂಸಾ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ‘ಹಸಿರು ಹಳಿಂಗಳಿ, ಸ್ವಚ್ಛ ಹಳಿಂಗಳಿ’ ಕಂದಾಯ ಇಲಾಖೆಯ ನೂತನ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಬೆಳೆಸಿ, ಉಳಿಸುವ ಅಭಿಯಾನಕ್ಕೆ ಶಾಲೆಯ ಮಕ್ಕಳಿಂದಲೇ ಇಂದು ಚಾಲನೆ ನೀಡುತ್ತಿದ್ದು, ನಾಗರಿಕರಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಅವಶ್ಯಕತೆ ಬಹಳಷ್ಟಿದೆ. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ರಸ್ತೆ ಬದಿಯ ಮರಗಳನ್ನು ಸಂರಕ್ಷಿಸಿ ಹಾಗೂ ಜಲಾವೃತ ಆಂದೋಲನದ ಮೂಲಕ ನೀರಿನ ಮೂಲಗಳನ್ನು ಸಂರಕ್ಷಿಸಿ, ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಗ್ರಾಮೀನ ಜನರು ಪ್ರತಿಯೊಬ್ಬರು ಶೌಚಾಲಯ ಬಳಸಿಕೊಳ್ಳುವುದರ ಮೂಲಕ ಸ್ವಚ್ಛ ಗ್ರಾಮದ ಆಂದೋಲನಕ್ಕೆ ಕೈಜೋಡಿಸಬೇಕೆಂದರು.
ಜಮಖಂಡಿ ತಾಪಂ ಇಒ ಅಶೋಕ ತೇಲಿ, ಕ್ಷೇತ್ರ ಶೀಕ್ಷಣಾಧಿಕಾರಿ ಎಂ.ಬಿ. ಮೊರಟಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಪರಪ್ಪ ಹಿಪ್ಪರಗಿ, ಜಿಪಂ ಸದಸ್ಯೆ ಲಲಿತಾ ನಂದೆಪ್ಪನವರ, ಜಿಪಂ ಮಾಜಿ ಅಧ್ಯಕ್ಷ ಬಿ.ಎ. ದೇಸಾಯಿ, ಅಹಿಂಸಾ ಸಂಸ್ಥೆ ಚೇರಮನ್ ಬಿ.ಆರ್. ಬಿ.ಪಾಟೀಲ, ತೇರದಾಳ ವಿಶೇಷ ತಹಶೀಲ್ದಾರ್ ಮೆಹಬೂಬಿ, ಶಿರಸ್ತೆದಾರ ಎಸ್.ಬಿ. ಕಾಂಬಳೆ, ವೃತ್ತ ನಿರೀಕ್ಷಕ ಶ್ರೀಕಾಂತ ಮಾಯನ್ನವರ, ಶಿಕ್ಷಣ ಸಂಯೋಜಕ ಎಸ್.ಬಿ. ಬುರ್ಲಿ, ಗ್ರಾಮಲೆಕ್ಕಾಧಿಕಾರಿ ನಾಗೇಶ ಲಮಾನಿ, ಪಿಡಿಒಗಳಾದ ಮಂಜುನಾಥ ಬಡಿಗೇರ, ಗಿರೀಶ ಕಡಕೋಳ, ಬಸಲಿಂಗ ವಾಲಿ, ಎನ್.ಎಸ್. ಪತ್ರಿ, ಬುದಗೆನ್ನವರ, ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಹಿರಿಯರು ಹಾಗೂ ಶಾಲಾ ಮಕ್ಕಳು ಇದ್ದರು.
ಬಿ.ಆರ್. ಕವಟಗೊಪ್ಪ ಸ್ವಾಗತಿಸಿದರು. ಎಸ್.ಎಂ. ನಂದೆಪ್ಪನವರ ನಿರೂಪಿಸಿದರು. ಬಿ.ಎನ್. ಪಡೆನ್ನವರ ವಂದಿಸಿದರು.