Advertisement

ನೆಕ್ಕಿಲದ ಡಂಪಿಂಗ್‌ ಯಾರ್ಡ್‌ನಲ್ಲಿ  ಹಸಿರು ಬೆಳೆಸುವ ಕಾಯಕ

12:36 PM May 30, 2018 | Team Udayavani |

ಪುತ್ತೂರು : ಬನ್ನೂರು ಗ್ರಾಮದ ನೆಕ್ಕಿಲದಲ್ಲಿರುವ ಪುತ್ತೂರು ನಗರಸಭೆಯ ಡಂಪಿಂಗ್‌ ಯಾರ್ಡ್‌ನಲ್ಲಿ ನಗರಸಭೆ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಂಗಳವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

Advertisement

ಕಾರ್ಯಕ್ರಮದ ನೇತೃತ್ವ ವಹಿಸಿ ಗಿಡ ನೆಡುವ ಮೂಲಕ ಚಾಲನೆ ನೀಡಿದ ಪುತ್ತೂರು ಸಹಾಯಕ ಕಮಿಷನರ್‌ ಡಾ|ಎಚ್‌.ಕೆ. ಕೃಷ್ಣಮೂರ್ತಿ ಮಾತನಾಡಿ, ಪರಿಸರದ ಮಹತ್ವ ಎಲ್ಲರಿಗೂ ತಿಳಿದಿದೆ. ಇಂದು ಎಲ್ಲ ಕಡೆ ವಾತಾವರಣ ಉತ್ತಮವಾಗಿದ್ದರೆ ಅದಕ್ಕೆ ಕಾರಣ ಮರಗಳು. ಡಂಪಿಂಗ್‌ ಯಾರ್ಡ್‌ನ ಸುತ್ತ ಮರಗಳಿದ್ದರೆ ಹೊರಭಾಗಕ್ಕೆ ವಾಸನೆ ಹೋಗಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರೂ ವಿನಂತಿ ಮಾಡಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭರವಸೆ ನೀಡಿದಂತೆ ಒಂದು ವಾರದಲ್ಲಿ ಗಿಡಗಳನ್ನು ನೆಡುತ್ತಿರುವುದಕ್ಕೆ ಖುಷಿ ಇದೆ ಎಂದರು.

ಸಮೃದ್ಧವಾಗಿರಲಿ
ಗಿಡಗಳನ್ನು ಪೂರೈಸಿದ ಅರಣ್ಯ ಇಲಾಖೆ ಅಧಿ ಕಾರಿಗಳು ಹಾಗೂ ಸಹಕಾರ ನೀಡಿದ ನಗರಸಭೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಮರ ಬೆಳೆಯುವವರೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ನಗರಸಭೆ ಎಂಜಿನಿಯರ್‌ಗೆ ಸೂಚನೆ ನೀಡಿದರು. ಡಂಪಿಂಗ್‌ ಯಾರ್ಡ್‌ನ ಆವರಣದ ಒಳಗೆ ಜಾನುವಾರುಗಳು ಬರಲು ಸಾಧ್ಯವಿಲ್ಲದೇ ಇರುವು ದರಿಂದ ಮತ್ತು ಕಾವಲು ಸಿಬಂದಿ ಇರುವು ದರಿಂದ ಈ ಗಿಡಗಳು ಹೆಚ್ಚು ಸಮೃದ್ಧವಾಗಿ ಬೆಳೆಯಲಿವೆ ಎಂದರು.

ಗಿಡಗಳನ್ನು ಎಲ್ಲವನ್ನೂ ಜನರು ನಿರೀಕ್ಷೆ ಮಾಡಿದಷ್ಟು ನಿರ್ವಹಣೆ ಮಾಡಲು ಸಾಧ್ಯವಾಗದೇ ಇರಬಹುದು. ಆದರೆ ಸಾರ್ವಜನಿಕ ಬೇಡಿಕೆಗಳಿಗೆ ಹಂತ ಹಂತವಾಗಿ ಈಡೇರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಅವರು, ನಾವು ಮಾಡುವ ಕೆಲಸದಲ್ಲಿ ಖುಷಿ ಇರಬೇಕು. ಸಾರ್ವಜನಿಕರು ತಮ್ಮ ಭಾಗದಲ್ಲಿ 10 -20 ಗಿಡಗಳನ್ನು ನೆಟ್ಟರೆ ಪರಿಸರಕ್ಕೆ ಅದಕ್ಕಿಂತ ದೊಡ್ಡ ಕೊಡುಗೆ ಇಲ್ಲ ಎಂದು ಅಭಿಪ್ರಾಯಿಸಿದರು.

ಮಳೆಗಾಲ ಮುಗಿಯುವವರೆಗೆ ಅಲ್ಲಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದ ಎಸಿ ಎಚ್‌. ಕೆ. ಕೃಷ್ಣಮೂರ್ತಿ, ಜೂನ್‌ 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ತಾಲೂಕಿನಾದ್ಯಂತ ತಾಲೂಕು ಆಡಳಿತದ ವತಿಯಿಂದ ವನಮಹೋತ್ಸವ ಆಚರಿಸಲು ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಐಬಿಯಲ್ಲೂ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಿಡ ನೆಟ್ಟ ಬಳಿಕ ಅದರ ನಿರ್ವಹಣೆಗೂ ಆದ್ಯತೆಯನ್ನು ನಾವು ನೀಡುತ್ತೇವೆ. ಪುತ್ತೂರಿನಲ್ಲಿ ಅಧಿಕಾರಗಳ ಸಂಘವಿದೆ. ಅಲ್ಲಿ ಚರ್ಚೆಗಳನ್ನು ನಡೆಸುತ್ತೇವೆ ಮತ್ತು ಹೇಳುವುದಕ್ಕಿಂತ ಎಲ್ಲವನ್ನೂ ನಾವು ಮಾಡಿ ತೋರಿಸುತ್ತೇವೆ ಎಂದರು.

Advertisement

ತಹಶೀಲ್ದಾರ್‌ ಅನಂತಶಂಕರ್‌, ವಲಯ ಅರಣ್ಯಾ ಧಿಕಾರಿ ವಿ.ಪಿ. ಕಾರ್ಯಪ್ಪ, ತಾ| ಆರೋಗ್ಯಾಧಿಕಾರಿ ಅಶೋಕ್‌ ಕುಮಾರ್‌ ರೈ, ನಗರ ಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ನಗರ ಸಭಾ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್‌, ಎಂಜಿನಿಯರ್‌ ಅರುಣ್‌ ಕುಮಾರ್‌ ಉಪಸ್ಥಿತರಿದ್ದರು.

150 ಗಿಡ
ಅರಣ್ಯ ಇಲಾಖೆಯಿಂದ ಮಾವು, ಹಲಸು, ಹೊನ್ನೆ, ಮಾಗುವಾನಿ, ಬೇಂಗ, ಹೆಬ್ಬಲಸು ಸಹಿತ ವಿವಿಧ ಜಾತಿಗಳ ಸುಮಾರು 150 ಗಿಡಗಳನ್ನು ಈ ಸಂದರ್ಭದಲ್ಲಿ ನೆಡಲಾಯಿತು. ಇನ್ನಷ್ಟು ಗಿಡಗಳ ಬೇಡಿಕೆಯನ್ನು ಸಲ್ಲಿಸಲಾಗಿದ್ದು, ಅದನ್ನು ಪೂರೈಕೆ ಮಾಡುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next