ಕಾಸರಗೋಡು: ಕೇರಳದ ಸ್ವಂತ ಇಲೆಕ್ಟ್ರಿಕಲ್ ಆಟೋ ರಿಕ್ಷಾವಾದ ಗ್ರೀನ್ ಇ ಆಟೋ ರಿಕ್ಷಾ ಜೂನ್ ತಿಂಗಳಲ್ಲಿ ರಸ್ತೆಗಿಳಿಯಲಿದೆ.
ರಾಜ್ಯ ಉದ್ದಿಮೆ ಖಾತೆಯ ಆಶ್ರಯದಲ್ಲಿ ತಿರುವನಂತಪುರದಲ್ಲಿ ಕಾರ್ಯವೆಸಗುತ್ತಿರುವ ಸಾರ್ವಜನಿಕ ಸಂಸ್ಥೆಯಾದ ಕೇರಳ ಆಟೋಮೊಬೈಲ್ ಲಿಮಿಟೆಡ್ (ಕೆ.ಎ.ಎಲ್.) ಗ್ರೀನ್ – ಇ-ಆಟೋ ರಿಕ್ಷಾಗಳನ್ನು ನಿರ್ಮಿಸಿ ರಸ್ತೆಗಿಳಿಸಲಿದೆ.
ಕೇಂದ್ರದಲ್ಲಿ ಈಗಾಗಲೇ ಹಲವು ಇ-ಆಟೋ ರಿಕ್ಷಾಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ಪರಿಶೀಲನೆಗಾಗಿ ಆಟೋಮೋಟಿವ್ ರಿಸರ್ಚ್ ಅಸೋಸಿ ಯೇಶನ್ (ಎ.ಆರ್.ಎ.ಐ) ಗೆ ಸಲ್ಲಿಸಲಾಗಿದೆ. ಕೇಂದ್ರ ಉದ್ದಿಮೆ ಖಾತೆಯ ಎ.ಆರ್.ಎ.ಐ. ಅನುಮತಿ ಪತ್ರಲಭಿಸಿದಲ್ಲಿ ಮಾತ್ರವೇ ಇ-ಆಟೋಗಳಿಗೆ ಆರ್‌ಟಿಎ ಕಚೇರಿಗಳಲ್ಲಿ ನೋಂದಾವಣೆ ನಡೆಸಲು ಸಾಧ್ಯವಾಗಲಿದೆ. ಈಗ ಪರಿಶೀಲನೆಯಲ್ಲಿರುವ ಹಿನ್ನೆಲೆಯಲ್ಲಿ ಅದಕ್ಕೆ ಮುಂದಿನ ತಿಂಗಳು ಅನುಮತಿ ಲಭಿಸುವ ನಿರೀಕ್ಷೆ ಇದೆ. ಹಾಗೆ ನಡೆದಲ್ಲಿ ಮುಂದಿನ ಜೂನ್ ತಿಂಗಳಲ್ಲಿ ಇ-ಆಟೋ ರಿಕ್ಷಾಗಳನ್ನು ಕೇರಳದಲ್ಲಿ ರಸ್ತೆಗಿಳಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ಉದ್ದಿಮೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳು ಹೊರಬಿಡುವ ಹೊಗೆಯಿಂದಾಗಿ ಭಾರೀ ಪರಿಸರ ಮತ್ತು ವಾಯು ಮಾಲಿನ್ಯ ಸೃಷ್ಟಿಸುತ್ತದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಇ-ಆಟೋ ರಿಕ್ಷಾ ಪರೀಕ್ಷೆಯಲ್ಲಿ ಕೆ.ಎ.ಎಲ್. ತೊಡಗಿ ಅದರಲ್ಲಿ ಯಶಸ್ವಿಯಾಗಿದೆ.
ಇ-ಆಟೋ ರಿಕ್ಷಾಗಳಿಗೆ ಕೇಂದ್ರದ ಅಂಗೀಕಾರ ಲಭಿಸಿದ್ದಲ್ಲಿ ಕೇರಳದಲ್ಲಿ ಇನ್ನು ಕ್ರಮೇಣ ಪೆಟ್ರೋಲಿಯಂ ಇಂಧನ ಚಾಲಿತ ಆಟೋ ರಿಕ್ಷಾಗಳು ಇಲ್ಲವಾಗಿ ಇ – ಆಟೋ ರಿಕ್ಷಾಗಳನ್ನು ಪೂರ್ಣವಾಗಿ ಆವರಿಸಿ ಕೊಳ್ಳುವುದರಲ್ಲಿಸಂಶಯವಿಲ್ಲ
ನಾಲ್ಕು ಚಕ್ರಗಳ ನಾಲ್ವರು ಪ್ರಯಾಣಿಕರು ಸಂಚರಿಸಬಹುದಾದ ಇ-ಆಟೋ ರಿಕ್ಷಾವೊಂದಕ್ಕೆ 2.5 ಲಕ್ಷ ರೂ. ಬೆಲೆ ಇದೆ. ಕಿಲೋ ಮೀಟರ್‌ಗೆ 50 ಪೈಸೆಯಷ್ಟು ಮಾತ್ರವೇ ಖರ್ಚು ಉಂಟಾಗಲಿದೆ. ಮುಂದೆ ಮೂವರು ಕುಳಿತು ಸಂಚರಿಸಬಹುದಾಗಿರುವ ಆಟೋ ರಿಕ್ಷಾಗಳನ್ನು ನಿರ್ಮಿಸಿ ರಸ್ತೆಗಿಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.