ಆಲೂರು: ರೈತರು ಕುಟುಂಬದ ಚಿಕ್ಕಪುಟ್ಟ ನಿರ್ವಹಣೆಗೆಂದು ಹಸಿರು ಮೆಣಸಿನಕಾಯಿ ಬೆಳೆಯುತ್ತಾರೆ. ಬೆಲೆ ವಾರದಿಂದ ವಾರಕ್ಕೆ ಕುಸಿತ ಕಾಣುತ್ತಿರುವುದರಿಂದ ರೈತರು ಆತಂಕ್ಕೀಡಾಗಿದ್ದಾರೆ. ಶುಂಠಿ ಬೆಳೆಗೆ ಅಧಿಕ ವೆಚ್ಚ ಹಿನ್ನೆಲೆ, ಮಧ್ಯಮ ವರ್ಗದ ರೈತರು ಮೆಣಸಿನಕಾಯಿ ಬೆಳೆಯಲು ಆಸಕ್ತಿ ಹೊಂದುತ್ತಾರೆ. ಫೆಬ್ರವರಿಯಿಂದ ಕೃಷಿ ಚಟುವಟಿಕೆ ಪ್ರಾರಂಭ ಮಾಡುತ್ತಾರೆ.
3 ತಿಂಗಳ ಬೆಳೆ: ಒಂದು ಎಕರೆ ಭೂಮಿಯಲ್ಲಿ ಸುಮಾರು 10 ಸಾವಿರ ಗುಣಿ ನಾಟಿ ಮಾಡಬಹುದು. ನಾಟಿ ಮಾಡಿದ ಎರಡು ತಿಂಗಳ ನಂತರ ಕೊಯ್ಲು ಪ್ರಾರಂಭವಾಗುತ್ತದೆ. ಸಮಯಕ್ಕೆ ತಕ್ಕಂತೆ ಗೊಬ್ಬರ ನೀರು ಬಳಸಿಕೊಂಡು ಉಪಚರಿಸಿದರೆ, ಒಂದು ಗಿಡದಲ್ಲಿ ಮೂರ್ನಾಲ್ಕು ತಿಂಗಳಲ್ಲಿ ಸುಮಾರು ಹತ್ತು ಕೊಯ್ಲು ಕೊಯ್ಯಬಹುದು.
ದರ ಕುಸಿತ: ಎರಡು ತಿಂಗಳಿನಿಂದ ಮೆಣಸಿನಕಾಯಿ ಮಾರುಕಟ್ಟೆಗೆ ಬರಲಾರಂಭಿಸಿದೆ.ಪ್ರಾರಂಭದಲ್ಲಿ ಕ್ವಿಂಟಲ್‌ಗೆ ಹತ್ತು ಸಾವಿರ ರೂ. ಇತ್ತು. ಗುಣಮಟ್ಟದ ಮೆಣಸಿನಕಾಯಿ ಆಕಾಶ್ ತಳಿಗೆ ಪ್ರತಿ ಕೆಜಿಗೆ 100 ರೂ.ಗೆ ಮಾರಾಟವಾಗುತ್ತಿತ್ತು. ಇದೀಗ ಕ್ವಿಂಟಲ್‌ಗೆ ಮೂರುವರೆಯಿಂದ ನಾಲ್ಕು ಸಾವಿರ ರೂ.ಗೆ ಮಾರಾಟವಾಗುತ್ತಿದೆ.
ಎಕರೆಗೆ 60 ಸಾವಿರ ವೆಚ್ಚ: ಒಂದು ಎಕರೆ ಭೂಮಿಯಲ್ಲಿ ಬೆಳೆಯಲು ಸುಮಾರು 60 ಸಾವಿರ ರೂ. ಖರ್ಚಾಗುತ್ತದೆ. ಹತ್ತು ಕೊಯ್ಲು ಕೊಯ್ದರೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕಿದರೆ ಲಕ್ಷಾಂತರ ರೂ. ಅದಾಯ ಗಳಿಸಬಹುದಾಗಿದೆ.
Related Articles
ಮೆಣಸಿನಕಾಯಿ ಮೂರ್ನಾಲ್ಕು ತಿಂಗಳ ಬೆಳೆ. ಕೊಯ್ಲು ಮಾಡಿದ ನಂತರ ಗೊಬ್ಬರ ಹಾಕಿ ಕಾಪಾಡಿಕೊಂಡರೆ, ಅಲ್ಪ ಕಾಲದಲ್ಲಿ ಲಕ್ಷಾಂತರ ರೂ. ಆದಾಯ ಗಳಿಸಬಹುದು. ಅಧಿಕ ಮಳೆ, ಆಲಿಕಲ್ಲು ಮಳೆ ಸುರಿದರೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೆ ನಷ್ಟಕ್ಕೊಳಗಾಗಬೇಕಾಗುತ್ತದೆ ಎನ್ನುತ್ತಾರೆ ಮೋಹನ್.
ಬೆಂಬಲ ಬೆಲೆಗೆ ಒತ್ತಾಯ: ಮೂರ್ನಾಲ್ಕು ತಿಂಗಳು ಮೆಣಸಿನ ಗಿಡ ಬೆಳೆದು ಕೂಯ್ಲಿಗೆ ಬರುವಷ್ಟರೊಳಗೆ ಬೆಲೆ ಕಡಿಮೆಯಾ ಗುತ್ತದೆ. ಅದರ ಜೊತೆಗೆ ದಲ್ಲಾಳಿಗಳು ನಿಗದಿತ ಬೆಲೆ ನೀಡಲ್ಲ. ಎಲ್ಲಂದರಲ್ಲಿ ತೂಕದ ಯಂತ್ರ ಇಟ್ಟು ಬೇಕಾಬಿಟ್ಟಿ ಕೊಂಡು ರೈತರಿಗೆ ವಂಚಿಸುತ್ತಾರೆ. ಕಷ್ಟಪಟ್ಟು ಬೆಳೆದ ಬೆಳೆ ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಅದ್ದರಿಂದ ಆಲೂರಿನಲ್ಲಿ ಕೃಷಿ ಉತ್ಪನ್ನ ಉಪಮಾರುಕಟ್ಟೆ ತೆರೆದು ಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಿಸಬೇಕು
ಎಂದು ರೈತ ಮುಖಂಡ ಮರುಗೇಶ್ ಅಗ್ರಹಿಸಿದರು.
ನೇರ ಮಾರುಕಟ್ಟೆ ಅಗತ್ಯ
ರೈತರು ಮೆಣಸಿನ ಗಿಡ ಬೆಳೆ ಬೆಳೆಯಲು ಸಾಕಷ್ಟು ಖರ್ಚು ಬರಿಸಬೇಕಾಗಿದೆ. ಫಸಲು ಬಂದ ಸಂದರ್ಭದಲ್ಲಿ ಅದರ ಕೊಯ್ಲಿಗೂ ದುಬಾರಿ ಖರ್ಚು ಬರುತ್ತದೆ. ಫಸಲು ಬಂದ ಸಂದರ್ಭದಲ್ಲಿ ಅವುಗಳನ್ನು ದಲ್ಲಾಳಿಗಳ ಮೂಲಕವೇ ಮಾರಟ ಮಾಡುವ ಅನಿವಾರ್ಯತೆ ಇದೆ. ಅದ್ದರಿಂದ ಸರ್ಕಾರವೇ ಬೆಂಬಲ ಬೆಲೆ ಘೋಷಿಸಿ ನೇರ ಖರೀದಿ ಮಾಡಿದರೇ ಮಧ್ಯವರ್ತಿಗಳಿಂದ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಬಹುದಾಗಿದೆ. ತಾಲೂಕಿನಲ್ಲಿ ಮಾರುಕಟ್ಟೆ ತೆರೆದು ಒಂದೇ ಕಡೆ ವ್ಯಾಪಾರ ವಹಿವಾಟು ಮಾಡಿದರೇ ರೈತರಿಗೆ ಇನ್ನೂ ಸ್ವಲ್ಪ ಲಾಭವಾಗುತ್ತದೆ ಪ್ರಗತಿಪರ ರೈತ ಎಚ್.ಎಸ್.ಸತೀಶ್ ಹೇಳಿದರು.
● ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ