Advertisement

ಶೀಘ್ರವೇ “ಹಸಿರು ಕಟ್ಟಡ ನೀತಿ’ಜಾರಿ

10:14 AM Jun 25, 2019 | Team Udayavani |

ಮಂಗಳೂರು: ಮಂಗಳೂರು ಸಹಿತ ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿ “ಮಳೆ ನೀರು ಕೊಯ್ಲು’ ವ್ಯವಸ್ಥೆಗೆ ಉತ್ತೇಜನ ನೀಡುವ ಸರಕಾರದ “ಹಸಿರು ಕಟ್ಟಡ ನೀತಿ’ (ಗ್ರೀನ್‌ ಬಿಲ್ಡಿಂಗ್‌ ಪಾಲಿಸಿ)ಯನ್ನು ಕೆಲವೇ ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದು ನಗರಾಭಿವೃದ್ಧಿ ಖಾತೆ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಅವರು, ಮುಂಬರುವ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿ ಹೊಸ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವಾಗ ಕಡ್ಡಾಯವಾಗಿ ಹಸಿರು ಕಟ್ಟಡ ನೀತಿ ಅನುಸರಿಸಬೇಕಿದೆ. ಕರಡು ನೀತಿ ಪ್ರಕಟಿಸಿದ್ದು, ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದರು.

ಹೊಸ ನೀತಿ ಅನ್ವಯ ಹೊಸ ಮನೆ ಅಥವಾ ಕಟ್ಟಡ ನಿರ್ಮಿಸುವಾಗ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ಕಡ್ಡಾಯ. ಕಸ ನಿರ್ವಹಣೆಗೆ ಹೊಸ ಸೂತ್ರ ಜಾರಿಗೊಳಿಸಿ ಸ್ವತ್ಛತೆಗೆ ವಿಶೇಷ ಆದ್ಯತೆ ಮತ್ತು ಸೋಲಾರ್‌ ಅಳವಡಿಕೆಗೆ ಪ್ರಾಶಸ್ತ ನೀಡಲಾಗುವುದು. ಗಿಡ ನೆಡುವ ಬಗ್ಗೆಯೂ ಸೂಕ್ತ ಕಾನೂನು ಜಾರಿ ಮಾಡಲಾಗುವುದು. ನಿಯಮಗಳನ್ನು ಅನುಸರಿಸುವವರಿಗೆ ತೆರಿಗೆ ವಿನಾಯಿತಿಯಂತಹ ಪ್ರೋತ್ಸಾಹಕ ಕ್ರಮ ಮತ್ತು ಪಾಲಿಸದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವ ಪ್ರಸ್ತಾವವಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆಯೂ ಸೂಕ್ತ ಕಾನೂನು ತರಲಾಗುವುದು ಎಂದರು.  ಮನೆ ಕಟ್ಟಲು ಪರವಾನಿಗೆ ಸಿಗಬೇಕಾದರೆ ಮಳೆಕೊಯ್ಲು ಕಡ್ಡಾಯ ಆಗಿರಬೇಕು ಎಂದರು.

ಅಕ್ರಮ ವಿರುದ್ಧ ಕಠಿನ ಕ್ರಮ
ಗೋಹತ್ಯೆ ನಿಷೇಧದ ಬಗ್ಗೆ ನೈಜ ಕಾಳಜಿ ಇದ್ದಲ್ಲಿ ಸೂಕ್ತ ಕಾನೂನನ್ನು ಕೇಂದ್ರ ಸರಕಾರ ಜಾರಿಗೊಳಿಸಲಿ. ದೇಶ ಕಾನೂನು ರೀತ್ಯಾ ನಡೆಯಬೇಕು; ಭಯ-ಬಲಗಳಿಂದ ನಡೆಯಬಾರದು. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಆದರೂ ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗೋ ಸಾಗಾಟ ಕೂಡ ಇದರಡಿ ಸೇರಿದೆ ಎಂದು ಹೇಳಿದರು.

ಮಂಗಳೂರು ಪಾಲಿಕೆಯಲ್ಲಿ ಆನ್‌ಲೈನ್‌ ವ್ಯವಸ್ಥೆ ಸಹಿತ ವಿವಿಧ ಸೌಲಭ್ಯ ನೀಡುವ ಹಿನ್ನೆಲೆಯಲ್ಲಿ ಜುಲೈ ಮೊದಲ ವಾರದಲ್ಲಿ ನಗರಾಭಿವೃದ್ಧಿ ಇಲಾಖೆಯ ಎಲ್ಲ ಅಧಿಕಾರಿಗಳು ಸಭೆ ನಡೆಸಲಿದ್ದಾರೆ ಎಂದರು.

Advertisement

ಎಸ್‌ಐಟಿ ತನಿಖೆ
ಐಎಂಎ ವಂಚನೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಎಸ್‌ಐಟಿ ತನಿಖೆ ನಡೆಯುತ್ತಿದೆ. ಜನಸಾಮಾನ್ಯರಿಗೆ ನ್ಯಾಯ ಸಿಗುವ ಕೆಲಸವನ್ನದು ಮಾಡಲಿದೆ. ಅದೇ ಸಂಸ್ಥೆಯ ಶಾಲೆಯಲ್ಲಿ ಸುಮಾರು 1,800 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅವರಿಗೆ ಮತ್ತು ಸಿಬಂದಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಗಳ ಜತೆಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಗ್ರಾ.ಪಂ. ಆಧಾರ್‌ ತಿದ್ದುಪಡಿ ಸರಿಪಡಿಸಲು ಕ್ರಮ
ಗ್ರಾ.ಪಂ.ನಲ್ಲಿ ಆಧಾರ್‌ ತಿದ್ದುಪಡಿ ಪ್ರಸ್ತುತ ಸ್ಥಗಿತವಾದ ಬಗ್ಗೆ ಪ್ರಶ್ನೆಗೆ ಉತ್ತರಿಸಿ, ಆಧಾರ್‌ ತಿದ್ದುಪಡಿ ಗ್ರಾಮ ಮಟ್ಟದಲ್ಲಿ ಇರುವಾಗ ಜನರಿಗೆ ಉಪಯೋಗವಾಗುತ್ತಿತ್ತು. ಸದ್ಯ ತಿದ್ದುಪಡಿ ಸ್ಥಗಿತವಾಗಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು ಮತ್ತು ಸಚಿವರ ಜತೆಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಖಾದರ್‌ ಹೇಳಿದರು.

ಅಭಿಯಾನಕ್ಕೆ ಸರಕಾರದ ಸಾಥ್‌
“ಉದಯವಾಣಿ’ಯು ದ.ಕ.ಜಿ.ಪಂ. ಸಹಯೋಗದಲ್ಲಿ ಮಳೆಕೊಯ್ಲು ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಪೂರಕವಾಗಿ ಕಳೆದ ವಾರ ಮಾಹಿತಿ ಶಿಬಿರ ಆಯೋಜಿಸಿತ್ತು. ಆ ಕಾರ್ಯಕ್ರಮದಲ್ಲಿ ಸಚಿವ ಖಾದರ್‌, ಮಳೆ ನೀರು ಕೊಯ್ಲು ವ್ಯವಸ್ಥೆ ಉತ್ತೇಜಿಸಲು ಮತ್ತು ಕಟ್ಟುನಿಟ್ಟಾಗಿ ರಾಜ್ಯದೆಲ್ಲೆಡೆ ಜಾರಿಗೊಳಿಸಲು “ಹಸಿರು ಕಟ್ಟಡ ನೀತಿ’ ಜಾರಿಗೊಳಿಸುವುದಾಗಿ ಹೇಳಿದ್ದರು. ಸಚಿವರ ಘೋಷಣೆ ಶೀಘ್ರದಲ್ಲೇ ಹೊಸ ನೀತಿಯನ್ನು ಜಾರಿಗೊಳಿಸಲು ಸರಕಾರ ಮುಂದಾಗಿರುವುದು ಶ್ಲಾಘನೀಯ. ಮಳೆಕೊಯ್ಲು ಬಗ್ಗೆ “ಉದಯವಾಣಿ’ ಕೈಗೆತ್ತಿಕೊಂಡಿರುವ ಜಲ ಸಂರಕ್ಷಣ ಅಭಿಯಾನಕ್ಕೆ ಉತ್ತೇಜನ ಮತ್ತು ಸ್ಪಂದನೆ ಸರಕಾರದ ಕಡೆಯಿಂದಲೂ ಸಿಗುತ್ತಿರುವುದು ಗಮನಾರ್ಹ. ಅಭಿಯಾನದಿಂದ ಪ್ರೇರಿತರಾಗಿ ಹಲವರು ತಮ್ಮ ಮನೆ-ಕಟ್ಟಡಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next