Advertisement

ಸುಸ್ಥಿರ ಅಭಿವೃದ್ಧಿ  ಹಸಿರು ಬಜೆಟ್‌ಗೆ ಪ್ರಸ್ತಾವನೆ?

05:22 PM Feb 15, 2021 | Team Udayavani |

ಶಿರಸಿ: ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ,ಸಂವರ್ಧನೆ ಮತ್ತು ಸುಸ್ಥಿರ ಬಳಕೆ, ರಾಜ್ಯದ ಸುಸ್ಥಿರ ಅಭಿವೃದ್ಧಿಗೆ ಅಡಿಪಾಯವಾಗಬಲ್ಲ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮುಂಬರುವ ಮುಂಗಡ ಪತ್ರದಲ್ಲಿ ಈ ಉದ್ದೇಶಗಳನ್ನು ಸಾಧಿಸಬಲ್ಲ ಕೆಲವು ಅಮೂಲ್ಯ ಹಸಿರು ಯೋಜನೆಗಳನ್ನು ಜಾರಿಗೆ ತರುವಂತೆ ಶಿಫಾರಸು ಸಲ್ಲಿಸಲಾಗುತ್ತಿದೆ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನತ ಹೆಗಡೆ ಅಶೀಸರ ತಿಳಿಸಿದ್ದಾರೆ.

Advertisement

ನೈಸರ್ಗಿಕ ಸಂಪನ್ಮೂಲಗಳ ವಾಣಿಜ್ಯಕ್ಕೆ ಬಳಕೆಯ ಲಾಭದಲ್ಲಿನ ಪಾಲನ್ನು ತಳಮಟ್ಟದಲ್ಲಿ ಅವನ್ನು ಸಂರಕ್ಷಿಸುತ್ತಿರುವ ಸಮುದಾಯಗಳಿಗೂ ನೀಡಬೇಕು. ಮಲೆನಾಡು, ಕರಾವಳಿ ಹಾಗೂ ಬಯಲುನಾಡಿನ ಒಟ್ಟು 10 ಗ್ರಾಪಂನಲ್ಲಿನ ಜೀವವೈವಿಧ್ಯ ನಿರ್ವಹಣೆ ಸಮಿತಿಗಳ ಮೂಲಕ ಮಾದರಿ ಲಾಭಾಂಶ ಹಂಚಿಕೆ ಯೋಜನೆ ಜಾರಿಗೆ ತರಬೇಕು. ಇದು ರಾಷ್ಟ್ರಕ್ಕೆ ಮಾದರಿಯಾಗಿ, ರಾಜ್ಯಕ್ಕೆ ಒಳ್ಳೆಯ ಹೆಸರು  ತಂದುಕೊಡಬಲ್ಲದು.

ರಾಜ್ಯ ಜೀವವೈವಿಧ್ಯ ಮಂಡಳಿ ಮೂಲಕ ಈ ಕೆಳಗಿನ ಮಹತ್ವದ ಜೀವವೈವಿಧ್ಯ-ವನ ಯೋಜನೆಗಳನ್ನು ಅನುಷ್ಠಾನ ಮಾಡಬೇಕು. ಹಾಸನದ ಗೆಂಡೆಕಟ್ಟೆಯಲ್ಲಿ ರಾಷ್ಟ್ರಮಟ್ಟದ ಜೀವವೈವಿಧ್ಯ ವನ, ತುಮಕೂರಿನಲ್ಲಿ, ಲಿಂ| ಶಿವಕುಮಾರ ಸ್ವಾಮಿಗಳ ನೆನಪಿನಲ್ಲಿ ಒಂದು ನೂರು ಎಕರೆ ಪ್ರದೇಶದಲ್ಲಿ ಸ್ಮೃತಿ ವನ, ಮುಕ್ತರಾಗಿರುವ ವಿಶ್ವೇಶ ತೀರ್ಥ ಪೇಜಾವರ ಶ್ರೀಗಳ ನೆನಪಿನಲ್ಲಿ ಸ್ಮೃತಿ ವನ ಉಡುಪಿ ಜಿಲ್ಲೆಯಲ್ಲಿ ನಿರ್ಮಿಸಬೇಕು. ಕೆರೆ ಪುನಶ್ಚೇತನ ಯೋಜನೆ: ರಾಜ್ಯಾದ್ಯಂತ ನೂರು ಸಣ್ಣ ಕೆರೆಗಳನ್ನು ಆಯ್ಕೆ ಮಾಡಿ, ಅವುಗಳ ಹೂಳೆತ್ತಿ, ಮಾಲಿನ್ಯ ಮುಕ್ತ ಮಾಡಿ, ಸುತ್ತಲೂ ಹಸಿರು-ವಲಯ (ಬಫರ್‌) ನಿರ್ಮಿಸಿ, ಅವುಗಳನ್ನು ಸ್ಥಳೀಯರ ಸಹಭಾಗಿತ್ವದೊಂದಿಗೆ ನಿರ್ವಹಿಸಿ ಮಾದರಿ ಕೆರೆ ಪುನಶ್ಚೇತನ ಯೋಜನೆಯನ್ನು ಜಾರಿಗೆ ತರಬೇಕು.

ಕರಾವಳಿ ಹಸಿರು ಕವಚ ಯೋಜನೆ: ಸಮುದ್ರ ತೀರದಲ್ಲಿ ಸ್ಥಳೀಯ ಪ್ರಭೇದಗಳ ಗಿಡ-ಮರಗಳನ್ನು ಬೆಳೆಸಿ ಹಸಿರು ತಡೆಗೋಡೆ ನಿರ್ಮಾಣ ಮಾಡಿ, ಸಮುದ್ರ ಕೊರೆತವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಕರಾವಳಿ ಹಸಿರು ಕವಚ ಯೋಜನೆ ಜಾರಿ ಮಾಡಬೇಕು. ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಯಲುನಾಡಿನ ಎಲ್ಲ ಜಿಲ್ಲೆಗಳಲ್ಲಿ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಸಾವಿರ ಗಿಡನೆಟ್ಟು ಸಾಮೂಹಿಕ ಗ್ರಾಮ ಕಾಡು ಬೆಳೆಸುವ ವೃಕ್ಷಕೋಟಿ ಯೋಜನೆ ಜಾರಿಮಾಡಬೇಕು.

ನದಿಮೂಲ-ರಾಮಪತ್ರೆಜಡ್ಡಿ ಸಂರಕ್ಷಣಾ ಯೋಜನೆ: ರಾಜ್ಯದ ಮಲೆನಾಡು ಹಾಗೂ ಕರಾವಳಿಯಲ್ಲಿ ಒತ್ತಡಕ್ಕೆ ಸಿಲುಕಿರುವ ನದಿಮೂಲಗಳನ್ನು ಹಾಗೂ ಈ ಪ್ರದೇಶಗಳಲ್ಲಿರುವ ಅಮೂಲ್ಯ ಜೌಗು ದೇಶಗಳಾದ 10 ರಾಮಪತ್ರೆ-ಜಡ್ಡಿಗಳನ್ನು ಸಂರಕ್ಷಿಸುವ ಸೂಕ್ತ ಯೋಜನೆ ಜಾರಿಗೆ ತರಬೇಕು.

Advertisement

ದೇವರ-ಕಾಡು ಸಂರಕ್ಷಣಾ ಯೋಜನೆ: ಅರಣ್ಯ ಇಲಾಖೆಯಲ್ಲಿ ಈಗಾಗಲೇ ಯಶಸ್ವಿಯಾಗಿರುವ ಕಾನು ಸಂರಕ್ಷಣಾ ಯೋಜನೆಯನ್ನು ಮಲೆನಾಡು ಹಾಗೂ ಕರಾವಳಿ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಿ, ಅಲ್ಲಿರುವ ಅಪೂರ್ಣ ಕಾನು, ದೇವರಕಾಡು ಪ್ರದೇಶಗಳನ್ನು ಸಂರಕ್ಷಿಸುವ ಯೋಜನೆ ಜಾರಿಗೆ ತರಬೇಕು.

ಕಾಡುಪ್ರಾಣಿಗಳ ಹಾವಳಿ ತಡೆಗೆ ಸೌರ ವಿದ್ಯುತ್‌ ಬೇಲಿ: ಮಲೆನಾಡು ಹಾಗೂ ಕರಾವಳಿ ರೈತರ ಹೊಲ-ತೋಟಗಳಿಗೆ ಕಾಡುಪ್ರಾಣಿಗಳು ನುಗ್ಗಿ ಬೆಳೆ ನಾಶ ಮಾಡುವುದನ್ನು ತಡೆಯಲು, ಸುಸ್ಥಿರ ವಿಧಾನವೆಂದು ನಿರೂಪಿತವಾಗಿರುವ ಸೌರವಿದ್ಯುತ್‌ ಬೇಲಿ ನಿರ್ಮಿಸಿಕೊಳ್ಳಲು, ಇದರ ವೆಚ್ಚದ ಶೇ.75 ರಷ್ಟು ಸಹಾಯಧನ ರೈತರಿಗೆ ನೀಡುವ ಯೋಜನೆ ಜಾರಿಗೆ ತರಬೇಕು.

ಔಷಧ ಮೂಲಿಕಾ ಸಂರಕ್ಷಿತ ಪ್ರದೇಶ ಸಂರಕ್ಷಣೆ ಯೋಜನೆ: ಅರಣ್ಯ ಇಲಾಖೆಯು ರಾಷ್ಟ್ರಕ್ಕೆ ಮಾದರಿಯಾಗಿ ಗುರುತಿಸಿ, ಸಂರಕ್ಷಿಸುತ್ತಿರುವ ಔಷಧ  ಮೂಲಿಕಾ ಸಂರಕ್ಷಿತ ಪ್ರದೇಶಗಳ ಬಹು ಅಮೂಲ್ಯ ಸಸ್ಯಪ್ರಭೇದಗಳ ಭಂಡಾರವಾಗಿದೆ. ಈ ಪ್ರದೇಶಗಳನ್ನು ಸೂಕ್ತ ವಿಧಾನಗಳ ಮೂಲಕ ಸಂರಕ್ಷಿಸಿ ನಿರ್ವಹಿಸುವ ಯೋಜನೆ ವಿಸ್ತರಿಸಬೇಕು. ಬಿದಿರು ಮಿಶನ್‌ ಹಾಗೂ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಜಿಪಂ ಮೂಲಕ ಜಾರಿ ಮಾಡಬೇಕು.

ಬಯೋಗ್ಯಾಸ್‌ ಉತ್ಪಾದನಾ ಘಟಕ ಯೋಜನೆ: ನಗರಗಳ ಹಸಿತ್ಯಾಜ್ಯ ವಿಲೇವಾರಿಗೆ ಬಯೋಗ್ಯಾಸ್‌ ಘಟಕವು ಅತ್ಯಂತ ಕಡಿಮೆ ವೆಚ್ಚದ, ಸರಳ ಹಾಗೂ ಪರಿಸರಕ್ಕೆ ಪೂರಕವಾದ ಒಂದು ಮಾರ್ಗವಾಗಿದೆ. ಇದರಿಂದ ತ್ಯಾಜ್ಯದ ಸಮಸ್ಯೆಯೂ ತಗ್ಗಿ, ಅಡುಗೆಗೆ ಬಳಸಲು ಇಂಧನವೂ ದೊರಕುತ್ತದೆ. ಆದ್ದರಿಂದ, ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳು ಹಾಗೂ ನಗರ ಪಾಲಿಕೆಗಳಲ್ಲಿ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್‌ ತಯಾರಿಸುವ ಘಟಕಗಳನ್ನುಖಾಸಗಿ, ಸಾರ್ವಜನಿಕ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಸ್ಥಾಪಿಸಿ, ನಿರ್ವಹಿಸುವ ಸೂಕ್ತ ಯೋಜನೆ ಜಾರಿ ಮಾಡಬೇಕು.

ಜೇನು ಸಾಕಣೆ ಪ್ರೋತ್ಸಾಹ ಯೋಜನೆ: ಜೇನು ಸಾಕಣೆಯಲ್ಲಿ ತೊಡಗಿಸಿಕೊಂಡಿರುವ ರೈತರು ಹಾಗೂ ರೈತ ಸಮುದಾಯಗಳು, ಸಂಸ್ಥೆಗಳಿಗೆ, ಸಹಾಯಹಸ್ತ ನೀಡಲು ಸರಳಿಕೃತ ಜೇನು ಸಾಕಣೆ ಪ್ರೋತ್ಸಾಹ ಯೋಜನೆ ಜಾರಿಮಾಡಿ ರಾಜ್ಯದ ಕನಿಷ್ಠ ಐವತ್ತು ಸಾವಿರ ರೈತರನ್ನು ಈ ಯೋಜನಾ ವ್ಯಾಪ್ತಿಗೆ ತರಬೇಕು.

ಸಾಂಬಾರು-ವೃಕ್ಷ ಯೋಜನೆ: ರೈತರಿಗೆ ಶೇ.50 ಸಹಾಯಧನ ನೀಡಿ, ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆಯಿರುವ ಹಾಗೂ ಆ ಪ್ರದೇಶಕ್ಕೆ ಸೂಕ್ತ ಸಾಂಬಾರ್‌ ಬೆಳೆ ವೃಕ್ಷಗಳು ಹಾಗೂ ಔಷಧ  ಮೂಲಿಕೆಗಳನ್ನು ಬೆಳೆಸಲು ಪ್ರೋತ್ಸಾಹ ನೀಡುವ ಯೋಜನೆ ಜಾರಿ ಮಾಡಬೇಕು.

ಸೋಲಾರ್‌ ಘಟಕ ಸಹಾಯ ಯೋಜನೆ: ರಾಜ್ಯದ ಸುಮಾರು 1 ಲಕ್ಷ ರೈತ ಕುಟುಂಬಗಳಿಗೆ ದೀಪ ಮತ್ತು ನೀರು ಕಾಯಿಸುವ ಉದ್ದೇಶದ ಸೋಲಾರ್‌ ಘಟಕ ಸ್ಥಾಪಿಸಲು ಅನುಕೂಲವಾಗುವಂತೆ, ಕನಿಷ್ಠ ಶೇ.50 ರಷ್ಟು ಸಹಾಯಧನ ನೀಡುವ ಸುಸ್ಥಿರ ಇಂಧನ ಅಭಿವೃದ್ಧಿ ಯೋಜನೆ ಜಾರಿಗೆ ತರಬೇಕು. ದೇಶೀ ಜಾನುವಾರು ತಳಿ ಸಂರಕ್ಷಣೆ ಅಭಿವೃದ್ಧಿ ಹಾಗೂ ರಾಜ್ಯದ ಅಮೃತ ಮಹಲ್‌ ಕಾವಲ್‌ಗ‌ಳ ಅಭಿವೃದ್ಧಿ ಉದ್ದೇಶದಿಂದ ಪಶು ಸಂಗೋಪನಾ ಇಲಾಖೆ ಮೂಲಕ 10 ಅಮೃತ ಮಹಲ ಕಾವಲ್‌ಗ‌ಳ ತಲಾ 100 ಎಕರೆ ಪ್ರದೇಶದಲ್ಲಿ ಒಟ್ಟು 1000 ಎಕರೆ ಪ್ರದೇಶದಲ್ಲಿ ಮಾದರಿ ಹಸಿರು ಮೇವು ವೃಕ್ಷಗಳನ್ನು ಬೆಳೆಸುವ ಯೋಜನೆ ಜಾರಿ ಮಾಡಬೇಕು. ಕೃಷಿ ಇಲಾಖೆ ಮೂಲಕ ಪ್ರತಿ ಜಿಲ್ಲೆಯಲ್ಲಿ 100 ರೈತರಿಗೆ ಬೇಳೆಕಾಳು, ಸಿರಿಧಾನ್ಯ ಮುಂತಾದ ವೈವಿಧ್ಯಮಯ ಕೃಷಿ ಬೆಳೆ ಪ್ರೋತ್ಸಾಹಿಸಲು ಮಾದರಿಕೃಷಿ ವೈವಿಧ್ಯ ಯೋಜನೆ ಜಾರಿ ಮಾಡಬೇಕು.

ಈಗಾಗಲೇ ಮೀನುಗಾರಿಕಾ ಇಲಾಖೆ ಮೂಲಕ ಅಪರೂಪದ ಮೀನು ವೈವಿಧ್ಯ ತಳಿ ಇರುವ 26 ಮತ್ಸಧಾಮ ಗುರುತಿಸಲಾಗಿದೆ. ಈ ಮತ್ಸಧಾಮಗಳ ಸಂರಕ್ಷಣೆ ಅಭಿವೃದ್ಧಿಗೆ ವಿಶೇಷ ಯೋಜನೆ ಜಾರಿ ಮಾಡಬೇಕು ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next