Advertisement

ಗ್ರೀಕ್‌ ಕತೆ: ಅವಳ ಅಸೂಯೆಯಿಂದ ಇವಳು ದೇವತೆಯಾದಳು!

12:24 PM Mar 07, 2020 | mahesh |

ಗ್ರೀಕ್‌ ಪುರಾಣ ಕತೆಯಲ್ಲಿ ಬರುವ ಆಪ್ರೋಡೈಟ್‌ ದೇವತೆಗೆ ಪ್ರೇಮದೇವತೆ ಎಂದೇ ಹೆಸರು. ಬಹಳ ಚೆಲುವೆ ಅವಳು. ಅವಳಿಗೊಬ್ಬ ಮಗನಿದ್ದ ಇರೋಸ್‌ ಅಂತ. ಪ್ರೇಮಜೋಡಿಗಳನ್ನು ಮಾಡುವ ಅಮ್ಮನ ಕೆಲಸದಲ್ಲಿ ಆಕೆಗೆ ಸಹಕರಿಸುತ್ತ ಇದ್ದ. ಹೊಂಬಣ್ಣದ ಮೈಯ ಅವನು ಚೆಲುವ. ಅವನ ಕೈಯಲ್ಲಿ ಚಿನ್ನದ ಬಿಲ್ಲುಬಾಣಗಳಿದ್ದವು. ಪುಟ್ಟ ರೆಕ್ಕೆಗಳೂ ಇದ್ದವು. ಅವನು ಯಾರಿಗೆ ಬಾಣ ಬಿಡುತ್ತಾನೋ, ಅವರು ತಕ್ಷಣ ಪ್ರೇಮದಲ್ಲಿ ಮುಳುಗಿಬಿಡುತ್ತಿದ್ದರು.

Advertisement

ಒಂದು ದಿನ ಅಪ್ರೋಡೈಟ್‌ಗೆ ಭೂಮಿ ಮೇಲಿರುವ ಸುಂದರಿ ರಾಜಕುಮಾರಿ ಸೈಕೀ (Psyche) ಎಂಬಾಕೆಯ ರೂಪ ಲಾವಣ್ಯ ಕಂಡು ಬಹಳ ಅಸೂಯೆಯಾಯಿತು. ಈ ರಾಜಕುಮಾರಿಯು ಜಗತ್ತಿನ ಕುರೂಪಿ ಯುವಕನ ಪ್ರೇಮಪಾಶದಲ್ಲಿ ಬೀಳುವಂತೆ ಮಾಡಬೇಕು ಎಂದು ಬಗೆದು, ತನ್ನ ಮಗನಿಗೆ ಆಪ್ರೋಡೈಟ್‌ ಸೂಚಿಸಿದಳು. ಅಮ್ಮನ ಆಜ್ಞೆಯನ್ನು ಶಿರಸಾವಹಿಸಿ ಇರೋಸ್‌ ತನ್ನ ಚಿನ್ನದ ಬಿಲ್ಲುಬಾಣಗಳನ್ನು ಹಿಡಿದುಕೊಂಡು ಹೊರಟ. ಆದರೆ ಸೈಕೀಯ ಸೌಂದರ್ಯ ನೋಡಿದ ಕೂಡಲೇ ಅವನೇ ದಂಗಾಗಿಬಿಟ್ಟ. ಎಂಥ ಅದ್ಭುತ ಸುಂದರಿ ಈಕೆ…ಎನ್ನುತ್ತಾ ಮನಸೋತ. ಅವಳ ಪ್ರೇಮಪಾಶದಲ್ಲಿ ಬಿದ್ದ. ಅದಾಗಿ ಪ್ರತೀ ರಾತ್ರಿ ಅಮ್ಮನ ಕಣ್ಣುತಪ್ಪಿಸಿ ಸೈಕೀಯನ್ನು ಭೇಟಿಯಾಗಲು ಅವನು ಹೋಗುತ್ತಿದ್ದ. ಅಮ್ಮನಿಗೆ ಹೆದರುತ್ತ ಆಕೆಯ ಕಣ್ಣುತಪ್ಪಿಸಲು ಯಾವಾಗಲೂ ಕತ್ತಲೆಯಲ್ಲಿಯೇ ಇರಲು ಬಯಸುತ್ತಿದ್ದ.

ಒಂದು ರಾತ್ರಿ ಸೈಕೀಯಗೆ ತನ್ನ ಇನಿಯನ ಮುಖ ನೋಡಬೇಕು ಎಂದು ಬಹಳ ಆಸೆಯಾಯಿತು. ಒಂದು ಹಣತೆ ಹೊತ್ತಿಸಿ ಅವನ ಹೊಂಬಣ್ಣದ ಮುಖವನ್ನು ನೋಡಲು ಪ್ರಯತ್ನಿಸಿದಳು. ಆದರೆ ಅವಳ ಕೈ ಯಾಕೋ ನಡುಗಿ, ಹಣತೆಯ ಬಿಸಿ ಎಣ್ಣೆ ಇರೋಸ್‌ ಮೇಲೆ ಬಿತ್ತು. ಅವನಿಗೆ ಎಚ್ಚರವಾದಾಗ ಬಹಳ ಸಿಟ್ಟುಬಂತು. ಹೆದರಿಕೆಯೂ ಆಯಿತು. ಆದರೇನು, ಅವನು ದೇವತೆ ತಾನೇ. ತಕ್ಷಣ ಮಾಯವಾಗಿ ಅಲ್ಲಿಂದ ಹೊರಟೇ ಹೋದ.

ಆದರೆ, ಇಬ್ಬರ ಎದೆಯಲ್ಲಿಯೂ ಪ್ರೇಮದೀಪ ಉರಿಯುತ್ತಿತ್ತಲ್ಲ. ದೇವತೆಗಳ ಮುಖಂಡ ಝೀಯಸ್‌ಗೆ ಈ ಪ್ರೇಮದ ವಿಷಯ ಗೊತ್ತಾಯಿತು. ಅವರಿಬ್ಬರನ್ನೂ ಒಂದು ಮಾಡುವ ಉದ್ದೇಶದಿಂದ ಸೈಕೀಯನ್ನು ಕರೆದುಕೊಂಡು ಅವನು ಗ್ರೀಕ್‌ ದೇವತೆಗಳ ಆವಾಸಸ್ಥಾನವಾದ ಒಲಿಂಪಸ್‌ ಪರ್ವತಕ್ಕೆ ಹೋದನು. ಮನುಷ್ಯರ ಆತ್ಮದ ಪ್ರತೀಕ ಎಂಬ ಪಟ್ಟವನ್ನು ಆಕೆಗೆ ಕಟ್ಟಿದನು. ಹೀಗೆ ಆಕೆ ದೇವತೆಯಾದಳು.
ರೋಮನ್ನರು ಗ್ರೀಕ್‌ ದೇವರನ್ನು ಸ್ವೀಕರಿಸುವಾಗ ಇರೋಸ್‌ನನ್ನು ಕ್ಯುಪಿಡ್‌ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಗ್ರೀಕರು ನೀಡಿದಷ್ಟು ಮಹತ್ವವನ್ನು ರೋಮನ್ನರು ಕ್ಯುಪಿಡ್‌ ದೇವತೆಗೆ ನೀಡುವುದಿಲ್ಲ. ಪ್ರೇಮವು ಕುರುಡು ಎಂಬ ಕಾರಣಕ್ಕೋ ಏನೋ, ಕ್ಯುಪಿಡ್‌ ದೇವತೆಯು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ರೀತಿಯಲ್ಲಿ ಇರುತ್ತಾನೆ ಹಾಗೂ ಪುಟ್ಟ ಎರಡು ರೆಕ್ಕೆಗಳಿರುವ ದುಂಡಾದ ಮಗುವಿನ ರೂಪ ಆತನಿಗೆ ಇದೆ ಎಂದು ನಂಬುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next