Advertisement

ದುರಾಸೆಯೇ ಭ್ರಷ್ಟಾಚಾರದ ಮೂಲ

11:04 AM Sep 17, 2017 | Team Udayavani |

ದಾವಣಗೆರೆ: ಪ್ರಸ್ತುತ ಮಾನವೀಯ ಮೌಲ್ಯ ಮರೆತಿರುವುದರಿಂದಲೇ ಸಮಾಜ ಅಧೋಗತಿ ತಲುಪಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಶನಿವಾರ ಜನ ಸಂಗ್ರಾಮ ಪರಿಷತ್‌ನ 3ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಲ್ಲಿರುವ ದುರಾಸೆಯೇ ಭ್ರಷ್ಟಾಚಾರಕ್ಕೆ ಮೂಲ ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಹಿರಿಯರು ಪಾಲಿಸುತ್ತಿದ್ದ ಮಾನವೀಯ ಮೌಲ್ಯಗಳ ಕಣ್ಮರೆಯಿಂದಾಗಿ ಸಮಾಜ ದುಸ್ಥಿತಿಯಲ್ಲಿದೆ ಎಂದರು.

ಇಂದು ಮಾನವೀಯ ಮೌಲ್ಯಗಳ ಕುಸಿತ ಕಾಣುತ್ತಿದ್ದೇವೆ. ಅದರಲ್ಲಿ ತೃಪ್ತಿಯೂ ಒಂದು. ಮನುಷ್ಯನ ಹಣದಾಹ ಮಿತಿಮೀರಿದೆ. ಎಷ್ಟು ಹಣ ಸಂಪಾದಿಸಿದರೂ ತೃಪ್ತಿ ಸಿಗುತ್ತಿಲ್ಲ. ಅತೃಪ್ತ ಮನಸ್ಸು ಭ್ರಷ್ಟಾಚಾರಕ್ಕೆಡೆ ಮಾಡಿಕೊಟ್ಟಿದೆ. ಜತೆಗೆ ಮಾನವೀಯತೆ ಕಾಣೆಯಾಗಿದೆ. ಪಠ್ಯದಲ್ಲಿ ನೀತಿಪಾಠವೂ ಇಲ್ಲವಾಗಿದೆ. ಹಾಗಾಗಿಯೇ ಮೌಲ್ಯ ಎಂಬುದೀಗ ರೂಪಾಯಿ ಆಗಿ ಪರಿವರ್ತನೆ ಆಗಿದೆ. ದುರಾಸೆಗೆ ಕಡಿವಾಣ ಹಾಕದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ಆಡಳಿತ ವ್ಯವಸ್ಥೆಯಲ್ಲಿ ನಡೆದ ಎಲ್ಲ ಹಗರಣ ಬಯಲಿಗೆ ಬರುವುದಿಲ್ಲ. ಹತ್ತರಲ್ಲಿ ಒಂದೋ ಎರಡೋ ಹಗರಣ ಮಾತ್ರ ಬೆಳಕಿಗೆ ಬರಬಹುದು. 1950ರಲ್ಲಿ 50 ಲಕ್ಷ ರೂ.ಗಳ ಜೀಪ್‌ ಹಗರಣ ಬಯಲಿಗೆ ಬಂತು. 80ರ ದಶಕದಲ್ಲಿ 64 ಕೋಟಿ ಬೋಫೋರ್ಸ್‌ ಹಗರಣ ಬಹುದೊಡ್ಡ ಸುದ್ದಿಯಾಯಿತು. ನಂತರ 2010ರಲ್ಲಿ ಕಾಮನವೆಲ್ತ್‌ ಗೇಮ್‌ ನಲ್ಲಿ 70 ಸಾವಿರ ಕೋಟಿ, ಅದೇವರ್ಷ 1.76 ಲಕ್ಷ ಕೋಟಿ ರೂ. 2ಜಿ ಹಗರಣ ನಡೆದಿರುವುದು ಬಯಲಾಯಿತು. ಇದಾದ ನಂತರ 1.86 ಲಕ್ಷ ಕೋಟಿ ರೂ. ಕಲ್ಲಿದ್ದಲು ಹಗರಣ ಬೆಳಕಿಗೆ ಬಂತು. ಇಷ್ಟೆಲ್ಲಾ ಹಗರಣ ನಡೆಸುವವರು ಕುಡಿಯುವ ನೀರಿಗಾಗಿ ರಾಜ್ಯಗಳಿಗೆ ಕೊಟ್ಟಿರುವ ಅನುದಾನ ಕೇವಲ 56 ಸಾವಿರ ಕೋಟಿ. ಈ ಅಂಕಿ-ಅಂಶ ಬೇರ್ಯಾರು ಹೇಳಿದ್ದಲ್ಲ ಸಿಎಜಿ ವರದಿ ಎಂದು ತಿಳಿಸಿದರು.

ಆರೂವರೆ ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕದ ಸಮಗ್ರ ಅಭಿವೃದ್ಧಿ, ಸರ್ಕಾರಿ ನೌಕರರ ವೇತನ ಎಲ್ಲ ವೆಚ್ಚ ಒಳಗೊಂಡ 2017-18ನೇ ಸಾಲಿನ ಬಜೆಟ್‌ ಮೊತ್ತ 1.80 ಲಕ್ಷ ಕೋಟಿ ರೂ.ನಷ್ಟಿದೆ. ಅಷ್ಟೇ ಮೊತ್ತದ ಹಗರಣವೊಂದು ನಡೆದರೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ನ್ಯಾ. ಸಂತೋಷ ಹೆಗ್ಡೆ ಪ್ರಶ್ನಿಸಿದರು.

Advertisement

ಈ ಹಿಂದೆ ತಾವು ಲೋಕಾಯುಕ್ತ ಸಂಸ್ಥೆ ನ್ಯಾಯಮೂರ್ತಿಯಾಗಿದ್ದಾಗ ರಾಜ್ಯದ ಸಂಪತ್ತು ಲೂಟಿ ಮಾಡುತ್ತಿದ್ದ ವರದಿ ಸಲ್ಲಿಸಿದೆ. ರಾಷ್ಟ್ರದ ಸಂಪತ್ತನ್ನು ಬೆರಳೆಣಿಕೆ ಮಂದಿ ದೋಚುತ್ತಿದ್ದರು. ಮೆಟ್ರಿಕ್‌ ಟನ್‌ ಅದಿರಿಗೆ ಸರ್ಕಾರಕ್ಕೆ ಬರುತ್ತಿದ್ದ ಆದಾಯ ಕೇವಲ 27 ರೂಪಾಯಿ. ಆದರೆ, ಅಷ್ಟೇ ಪ್ರಮಾಣದ ಅದಿರು 6-7 ಸಾವಿರ ರೂ.ಗಳಿಗೆ ರಫ್ತಾಗುತ್ತಿತ್ತು. ಲೂಟಿ ಎಷ್ಟರ ಮಟ್ಟಿಗೆ ನಡೆದಿದೆ ಎಂದರೆ, ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡು, ಬೆಲೆಕೇರಿ ಬಳಿ ದಾಸ್ತಾನಿಟ್ಟಿದ್ದ ಅದಿರನ್ನೇ ನಾಪತ್ತೆ ಮಾಡಲಾಯಿತು. ಇಷ್ಟರ ಮಟ್ಟಿಗೆ ದುರಾಸೆ ವ್ಯಾಪಿಸಿದೆ. ಹಾಗಾಗಿ ಮೊದಲು ದುರಾಸೆಗೆ
ಕಡಿವಾಣ ಹಾಕಬೇಕಿದೆ ಎಂದರು.

 ಪ್ರಾಮಾಣಿಕರನ್ನು ಹುಚ್ಚ ಎಂಬುದಾಗಿ ಕರೆಯುತ್ತಿರುವ ಈ ಕಾಲದಲ್ಲಿ ಮನಸ್ಸುಗಳ ಬದಲಾಯಿಸಬೇಕಿದೆ. ಈ ಕಾರ್ಯ ದಿಢೀರನೇ ಆಗುವಂತದ್ದಲ್ಲ. ಈ ಮಹತ್ವದ ಕೆಲಸದಲ್ಲಿ ಯುವ ಸಮೂಹ ಕೈ ಜೋಡಿಸಬೇಕಿದೆ. ಹಾಗಾಗಿಯೇ ತಾವು ಈ ವಯಸ್ಸಿನಲ್ಲೂ 943 ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದೇನೆ ಎಂದರು.

ದುರಾಸೆಗೆ ಕಡಿವಾಣ ಹಾಕಿ, ಇರುವ ಸಂಪಾದನೆಯಲ್ಲೇ ತೃಪ್ತಿ ಹೊಂದಿ. ಮಾನವೀಯತೆ ಅಳವಡಿಸಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಮನವಿ ಮಾಡಿದರು.

ಜನ ಸಂಗ್ರಾಮ ಪರಿಷತ್‌ನ ಗೌರವಾಧ್ಯಕ್ಷ ಎಸ್‌.ಆರ್‌. ಹಿರೇಮಠ್ , ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್‌, ಡಾ| ಮಾಲಿಪಾಟೀಲ್‌, ಪತ್ರಕರ್ತ ಎಸ್‌. ಆರ್‌. ಆರಾಧ್ಯ, ರವಿಕೃಷ್ಣಾ ರೆಡ್ಡಿ, ಅನೀಷ್‌ ಪಾಷ ಇತರರು ವೇದಿಕೆಯಲ್ಲಿದ್ದರು.

ಜನ ಸಂಗ್ರಾಮ ಪರಿಷತ್‌ನ ಜಿಲ್ಲಾ ಸಂಚಾಲಕ ಶಿವನಕೆರೆ ಬಸವಲಿಂಗಪ್ಪ ಸ್ವಾಗತಿಸಿದರು. ಪರಿಷತ್‌ನ ರಾಜ್ಯಾಧ್ಯಕ್ಷ ರಾಘವೇಂದ್ರ ಕುಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಜನ ಸಂಗ್ರಾಮ ಪರಿಷತ್‌ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು. ರೈತ ಸಂಘದ ಬಲ್ಲೂರು ರವಿಕುಮಾರ್‌ ನಿರೂಪಿಸಿದರು. ಐರಣಿ ಚಂದ್ರು ಮತ್ತು ಸಂಗಡಿಗರು ಜಾಗೃತಿ ಗೀತೆ ಹಾಡಿದರು.

ಕಾಲ ಬೇಕಿದೆ
 ದೇಶಕ್ಕೆ ಮಾರಕವಾಗುವ ನಿರ್ಧಾರ ಕೈಗೊಳ್ಳುವ ಆಡಳಿತ ವ್ಯವಸ್ಥೆ ವಿರುದ್ಧ ಜನ ಸಂಗ್ರಾಮ ಪರಿಷತ್‌ನಿಂದ ವ್ಯಾಪಕ ರಾಜಕೀಯ ಹೋರಾಟ ರೂಪುಗೊಳ್ಳಬೇಕಿದೆ. ಗಂಭೀರ ಸಮಸ್ಯೆ, ಶಿಕ್ಷಣ ಸುಧಾರಣೆ, ಕೃಷಿ ಸಂಕಟ, ಭ್ರಷ್ಟಾಚಾರ ತಡೆ ಬಗ್ಗೆ ಸುದೀರ್ಘ‌ ಚರ್ಚೆ ನಡೆಯಬೇಕಿದೆ. ಇದೇ ನಿಜವಾದ ರಾಷ್ಟ್ರ ನಿರ್ಮಾಣದ ಸಂಕಲ್ಪ. ಬದಲಾವಣೆ ಏಕಾಏಕಿ ಆಗದು. ಅದಕ್ಕೆ ಕಾಲ ಬೇಕಿದೆ. ಈ ಮಹತ್ತರ ಕಾರ್ಯಕ್ಕೆ ಮಹಿಳೆಯರು-ಯುವಕರು ಕೈ ಜೋಡಿಸಬೇಕಿದೆ.
 ಎಸ್‌.ಆರ್‌.ಹಿರೇಮಠ್ , ಜನ ಸಂಗ್ರಾಮ ಪರಿಷತ್‌ ಗೌರವಾಧ್ಯಕ್ಷರು

ಬದಲಾದ ದಾವಣಗೆರೆ
30 ವರ್ಷಗಳ ಹಿಂದೆ ಕಾರ್ಮಿಕರ ಹೋರಾಟದ ನೆಲವಾಗಿದ್ದ ದಾವಣಗೆರೆ ಈಗ ಸಂಪೂರ್ಣ ಬದಲಾಗಿದೆ. ಕೆಲವರ ಸ್ವಾರ್ಥ-ಸ್ವಹಿತಾಸಕ್ತಿಗೆ ಈ ನಗರಿ ಬಲಿಯಾಗುತ್ತಿರುವುದನ್ನು ಪ್ರಶ್ನಿಸಬೇಕಿದೆ. ನೊಂದವರು, ಅಸಹಾಯಕರಿಗೆ ಲೋಕಾಯುಕ್ತ ಸಂಸ್ಥೆಯಿಂದ ಈ ಹಿಂದೆ ನ್ಯಾಯ ದೊರೆಯುತ್ತಿತ್ತು. ಇದಕ್ಕೆ ಕಾರಣ ಆಗ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ವೆಂಕಟಾಚಲ ಹಾಗೂ ಸಂತೋಷ ಹೆಗ್ಡೆಯವರು. ಈ ರಾಜ್ಯ ಉಭಯ ನ್ಯಾಯಮೂರ್ತಿಗಳಿಗೆ ಕೃತಜ್ಞತೆ ಸಲ್ಲಿಸಬೇಕು.
ರವಿಕೃಷ್ಣಾ ರೆಡ್ಡಿ

ವೈರುಧ್ಯ ಪರಿಸ್ಥಿತಿ
ಗಾಂಧಿ ಹೆಸರಲ್ಲಿ ಯೋಜನೆ ಅನುಷ್ಠಾನಗೊಳಿಸುವ ಆಡಳಿತ ನಡೆಸುವವರು ಮಹಾತ್ಮ ಗಾಂಧೀಜಿ ಅನುಸರಿಸಿದ ಜೀವನ ಮಾರ್ಗ ಮರೆಯುತ್ತಿದ್ದಾರೆ. ಈ ದೇಶದ ಬಹುದೊಡ್ಡ ಸಾರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಇಷ್ಟು ವರ್ಷವಾದರೂ ಇನ್ನೂ ಸಾಮಾನ್ಯ ಪ್ರಯಾಣಿಕರಿಗೆ ಸಮರ್ಪಕ ಸೇವೆ ಕಲ್ಪಿಸಲಾಗುತ್ತಿಲ್ಲ. ಆದರೆ, ಯಾವುದೋ 2 ನಗರಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ 1.10 ಲಕ್ಷ ಕೋಟಿ ರೂ. ವೆಚ್ಚದ ಬುಲೆಟ್‌ ಟ್ರೈನ್‌ ಆರಂಭಿಸಲು ಈ ದೇಶದ ಪ್ರಧಾನಿ ಉತ್ಸಾಹ ತೋರುತ್ತಾರೆ. ಇಂಥಹ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ನಾವಿದ್ದೇವೆ.
ಎಸ್‌.ಆರ್‌.ಆರಾಧ್ಯ, ಹಿರಿಯ ಪತ್ರಕರ್ತ.

Advertisement

Udayavani is now on Telegram. Click here to join our channel and stay updated with the latest news.

Next