ಹೊಸದಿಲ್ಲಿ: ದೇಶದಲ್ಲಿ ರೈಲುಗಳನ್ನು ಹಳಿ ತಪ್ಪಿಸುವ ಸಂಚು ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ರೈಲನ್ನು ಹಳಿ ತಪ್ಪಿಸಲು ನಡೆಸಿದ ಪ್ರಯತ್ನ ಮತ್ತು ಗುಜರಾತ್‌ನಲ್ಲಿ ಹಳಿಯ 40ಕ್ಕೂ ಅಧಿಕ ನಟ್ ಬೋಲ್ಟ್‌ಗಳನ್ನು ಸಡಿಲಗೊಳಿಸಿದ್ದು ರೈಲ್ವೇ ಸಿಬಂದಿಯೇ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಈ ಸಂಬಂಧ ಪೊಲೀಸರು ನಾಲ್ವರು ರೈಲ್ವೆ ಸಿಬಂದಿಯನ್ನು ಬಂಧಿಸಿದ್ದಾರೆ. ಸೂರತ್‌ನ ರೈಲು ಹಳಿಯ ಫಿಶ್‌ಪ್ಲೇಟ್‌ತೆಗೆದು ಬೇರೊಂದು ಹಳಿ ಮೇಲಿರಿಸಿ, ನಟ್ ಬೋಲ್ಟ್ ಗಳನ್ನು ಸಡಿಲಗೊಳಿಸಿದ್ದ ಪ್ರಕರಣದಲ್ಲಿ ಸುಭಾಷ್ ಪೋದ್ದಾರ್, ಮನೀಶ್ , ಶುಭಂ ಜೈಸ್ವಾಲ್ ಎಂಬ ಮೂವರು ಸಿಬಂದಿಯನ್ನು ಬಂಧಿಸಲಾಗಿದೆ. ಈ ಮೂವರು ರೈಲ್ವೇ ಇಲಾಖೆಯ ನಿರ್ವಹಣೆ ವಿಭಾಗ ದಲ್ಲಿ ಟ್ರ್ಯಾಕ್‌ಮನ್‌ಗಳಾಗಿದ್ದರು. ನಟ್ ಬೋಲ್ಟ್ ಸಡಿಲಗೊಳಿಸಿ, ಬಳಿಕ ತಾವೇ ಅದನ್ನು ಅಧಿಕಾರಿಗಳಿಗೆ ತಿಳಿಸುವ ಮೂಲಕ ಅಪಘಾತ ತಪ್ಪಿಸಿದ ಕೀರ್ತಿಯ ಜತೆಗೆ ಸಮ್ಮಾನವೂ ಸಿಗುತ್ತದೆ ಎಂಬ ಕಾರಣದಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ ತಮ್ಮ ಕಾರ್ಯಕ್ಷಮತೆಯನ್ನು ಮೆಚ್ಚಿ ತಮ್ಮನ್ನೇ ದಿನವೂ ರಾತ್ರಿ ಪಾಳಿಗೆ ನೇಮಿಸುತ್ತಾರೆ. ಇದರಿಂದ ಮರುದಿನ ರಜೆ ಪಡೆಯಲು ಸಹಾಯ ವಾಗುತ್ತದೆ ಎಂಬ ಉದ್ದೇಶವನ್ನೂ ಈ ಮೂವರು ಹೊಂದಿದ್ದರು ಎನ್ನಲಾಗಿದೆ.
ಕರ್ನಾಟಕಕ್ಕೆ ಬರುತ್ತಿದ್ದ ಯೋಧರಿದ್ದ ವಿಶೇಷ ರೈಲು ಹಾದುಹೋಗುವ ಹಳಿಗಳ ಮೇಲೆ ಮಧ್ಯಪ್ರದೇಶದಲ್ಲಿ ಸ್ಫೋಟಕವಿರಿಸಿದ ಪ್ರಕರಣ ಸಂಬಂಧಿಸಿ ಸಬೀರ್ ಎಂಬ ರೈಲ್ವೇ ಸಿಬಂದಿಯನ್ನು ಬಂಧಿಸಲಾಗಿದೆ. ಹಳಿ ಗಸ್ತು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆತ ಅಪಾಯಕಾರಿ ಅಲ್ಲದ 10 ಸ್ಫೋಟಕಗಳನ್ನು ಹಳಿ ಮೇಲೆ ಇರಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಕ್ಕಿಬಿದ್ದದ್ದು ಹೇಗೆ ? ಸೆ. 21ರಂದು ಸೂರತ್ ಜಿಲ್ಲೆಯ ರೈಲು ಹಳಿಯಲ್ಲಿ ದುಷ್ಕರ್ಮಿಗಳು ನಟ್ -ಬೋಲ್ಟ್ ತೆಗೆದು, ಫಿಶ್‌ಪ್ಲೇಟ್ ಬಿಚ್ಚಿ ಇಟ್ಟಿದ್ದಾರೆಂದು ಟ್ರ್ಯಾಕ್‌ಮನ್‌ಗಳು ಬೆಳಗ್ಗೆ 5.30ರ ಸಮಯದಲ್ಲಿ ವೀಡಿಯೋ ಒಂದನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದರು. ಈ ವಿಷಯವನ್ನು ಅಧಿಕಾರಿಗಳಿಗೆ ಪೊಲೀಸರು ತಿಳಿಸುವ ಸಂದರ್ಭದಲ್ಲಿ ಘಟನೆ ವರದಿಯಾಗುವುದಕ್ಕೆ ಸ್ವಲ್ಪವೇ ಸಮಯಕ್ಕೆ ಮುನ್ನ ರೈಲೊಂದು ಅದೇ ಹಳಿಯಲ್ಲಿ ಚಲಿಸಿರುವ ಬಗ್ಗೆ ತಿಳಿಸಿದರು. ರೈಲು ಚಲಿಸಿದ ಸಮಯಕ್ಕೂ ವೀಡಿಯೋ ಕಳುಹಿಸಿದ ಸಮಯಕ್ಕೂ ತೀರಾ ಅಂತರ ಇರಲಿಲ್ಲ. ಅಷ್ಟು ಕಿರು ಅವಧಿಯಲ್ಲಿ ಬೋಲ್ಟ್‌ಗಳನ್ನು ಸಡಿಲಗೊಳಿಸಿವುದು ಅಸಾಧ್ಯವೆನಿಸಿದ ಕಾರಣ ಪೊಲೀಸರಿಗೆ ಅನುಮಾನ ಹುಟ್ಟಿಕೊಂಡಿತ್ತು. ಬಳಿಕ ಸಿಬಂದಿಯ ಮೊಬೈಲ್ ಪರೀಕ್ಷಿಸಿದಾಗ ತಡ ರಾತ್ರಿ 2.56ರಿಂದ 4.57ರ ಅವಧಿಯಲ್ಲಿ ವೀಡಿಯೋ ಸೆರೆ ಹಿಡಿದಿರುವುದು ಪತ್ತೆಯಾಗಿತ್ತು. ವಿಚಾರಣೆ ನಡೆಸಿದಾಗ ಮೂವರು ಸಿಕ್ಕಿಬಿದ್ದಿದ್ದಾರೆ.
ದೇಶದಲ್ಲಿ ರೈಲುಗಳನ್ನು ಹಳಿ ತಪ್ಪಿಸುವ ಸಂಚು ಪ್ರಕರಣಗಳಿಗೆ ಸಂಬಂಧಿಸಿ ಎಲ್ಲ ರಾಜ್ಯ ಸರಕಾರಗಳು, ಡಿಜಿಪಿಗಳು, ಗೃಹ ಕಾರ್ಯದರ್ಶಿ ಗಳೊಂದಿಗೆ ಮಾತುಕತೆ ನಡೆಸಲಾಗು ತ್ತಿದೆ. ತನಿಖೆಗಳಲ್ಲಿ ಎನ್‌ಐಎ ಕೂಡ ಭಾಗಿ ಯಾಗಿದೆ. ಇಂಥ ಕೃತ್ಯಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. ಇದು ನಮ್ಮ ಸಂಕಲ್ಪ.
– ಅಶ್ವಿನಿ ವೈಷ್ಣವ್, ರೈಲ್ವೇ ಸಚಿವ