Advertisement

ಗ್ರೀಕ್‌: ನೂರಾರು ಸಮಸ್ಯೆ ಮಧ್ಯೆಯೂ ಗೆದ್ದ ಸಂಭ್ರಮ

02:52 PM May 01, 2020 | sudhir |

ಮಣಿಪಾಲ: ಯುರೋಪ್‌ ಖಂಡದಲ್ಲಿ ಆರ್ಥಿಕವಾಗಿ ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಅತೀ ಹೆಚ್ಚು ಸವಾಲಗಳನ್ನು ಎದುರಿಸಿದ ರಾಷ್ಟ್ರವೆಂದರೆ ಅದು ಗ್ರೀಕ್‌. ಮೊದಲೇ ಸಮಸ್ಯೆಗಳ ಕೂಪದಲ್ಲಿ ಸಿಲುಕಿದ ಗ್ರೀಕ್‌ ಕೋವಿಡ್‌-19 ನಿಂದ ಮತ್ತಷ್ಟು ಕುಸಿಯಲಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು.

Advertisement

ಆದರೆ ಅಚ್ಚರಿ ಎಂಬಂತೆ ಇಡೀ ಪರಿಸ್ಥಿತಿಯನ್ನು ಜಾಣ್ಮೆಯಿಂದ ಗೆದ್ದ ಗ್ರೀಕ್‌, ದೇಶವನ್ನು ಪಿಡುಗಿನ ಬಾಯಿಂದ ಬಚಾವು ಮಾಡಿದೆ. ಹಾಗಾದರೆ ಅದು ಹೇಗೆ ಎಂಬುದೇ ಕುತೂಹಲದ ಸಂಗತಿ. ಸುಮಾರು 1.7 ಕೋಟಿಯಷ್ಟು ಜನಸಂಖ್ಯೆಯನ್ನು ಒಳಗೊಂಡಿರುವ ಗ್ರೀಕ್‌ನಲ್ಲಿ ಇದುವರೆಗೂ ಸೋಂಕಿಗೆ ಬಲಿಯಾಗಿರುವುದು 138 ಮಂದಿ ಮಾತ್ರ. ಇತರೆ ಯುರೋಪ್‌ ದೇಶಗಳ ಸೋಂಕಿತರ ಪ್ರಮಾಣ ಮತ್ತು ಬಲಿಯಾದವರ ಅಂಕಿ-ಅಂಶದೊಂದಿಗೆ ತುಲನೆ ಮಾಡಿದರೆ ಗ್ರೀಕ್‌ನಲ್ಲಿ ಸಂಭವಿಸಿದ ಸಾವು ಕಡಿಮೆ. ಇದಕ್ಕೆ ಮುಖ್ಯ ಕಾರಣ ಲಾಕ್‌ಡೌನ್‌ ನಿಯಮ.

ಫೆ.27ರಂದು ಪ್ರಮುಖ ನಗರ ಥೆಸ್ಸಾಲೊನಿಕಿಯಲ್ಲಿ ಮೊದಲ ಸೋಂಕು ಪ್ರಕರಣ ಪತ್ತೆಯಾಗುತ್ತಿದ್ದಂತೆಎಲ್ಲ ಪ್ರಮುಖ ಸಮಾರಂಭಗಳು, ಸಾಮೂಹಿಕ ಸಭೆಗಳನ್ನು ರದ್ದು ಪಡಿಸಿತು. ಆ ಬಳಿಕ ಮಾರ್ಚ್‌ 11 ರಂದು ಶಾಲಾ-ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಿತು. ದೇಶಾದ್ಯಂತ ಅನಗತ್ಯ ಪ್ರಯಾಣ, ಕೆಫೆಗಳು, ರೆಸ್ಟೋರೆಂಟ್‌ಗಳು, ಗ್ರಂಥಾಲಯಗಳು ಮತ್ತು ವಸ್ತು ಸಂಗ್ರಹಾಲಯಗಳೂ ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳ ಪ್ರವೇಶಾತಿಯನ್ನು ನಿಷೇಧಿಸಿತು. ಆ ಮೂಲಕ ಪ್ರಾರಂಭಿಕ ಹಂತದಲ್ಲೇ ಸೋಂಕು ನಿಯಂತ್ರಿಸತೊಡಗಿತು.

ವಿದೇಶದಿಂದ ದೇಶಕ್ಕೆ ಬಂದಿಳಿದವರನ್ನು ಪತ್ತೆ ಹಚ್ಚಿ 15 ದಿನಗಳ ಕಡ್ಡಾಯ ಕ್ವಾರಂಟೇನ್‌ಗೆ ಕಳಿಸಿತು. ಆ ನಿಯಮ ಪಾಲಿಸದವರಿಗೆ ಸುಮಾರು 4.5 ಲಕ್ಷ ರೂ ದಂಡ ವಿಧಿಸತೊಡಗಿತು. ಇಲ್ಲಿನ ನಿಯಮ ಎಷ್ಟು ಕಠಿನವಾಗಿತ್ತೆಂದರೆ ನಾಯಿಯನ್ನು ಹೊರಗೆ ಕರೆತರಲೂ ಅನುಮತಿ ಬೇಕು ಎನ್ನಲಾಗಿತ್ತು.

ಪ್ರಾರಂಭಿಕ ಹಂತದಿಂದಲೇ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚುವರಿ ಆದ್ಯತೆ ನೀಡಿತ್ತು. ಮುಂಜಾಗ್ರತ ಕ್ರಮವಾಗಿ ತೀವ್ರ ನಿಗಾ ಘಟಕಗಳಲ್ಲಿ ಶೇ.70ರಷ್ಟು ಹಾಸಿಗೆ ವ್ಯವಸ್ಥೆಯನ್ನು ಹೆಚ್ಚಿಸಿತ್ತು. ಸುಮಾರು 3,337 ಹೆಚ್ಚುವರಿ ಆಸ್ಪತ್ರೆಯ ಸಿಬಂದಿಯನ್ನು ನೂತನವಾಗಿ ನೇಮಕ ಮಾಡಿತು. ಹೊಸದಾಗಿ 2,500 ಆಸ್ಪತ್ರೆ ನೌಕರರ ಹುದ್ದೆಗಳನ್ನು ತೆರೆಯಿತು. ಅಗತ್ಯವಿದ್ದಲ್ಲಿ ಮುಂದೆಯೂ 942 ಹೆಚ್ಚುವರಿ ವೈದ್ಯರನ್ನು ನೇಮಿಸಿಕೊಳ್ಳುವುದಾಗಿ ಸರಕಾರ ಹೇಳಿದೆ.

Advertisement

ನೆರವಾದ ಸಾಮಾಜಿಕ ಅಂತರ ನಿಯಮ
ಸುಮಾರು 69,833 ಜನರನ್ನು ಸೋಂಕು ಮಾದರಿ ಪರೀಕ್ಷೆಗೆ ಒಳಪಡಿಸಿದ ಗ್ರೀಕ್‌ ನಿರಂತರವಾಗಿ ಪರೀಕ್ಷೆ ವಿಧಾನವನ್ನು ಅನುಸರಿಸಿದೆ. ಜತೆಗೆ ಲಾಕ್‌ಡೌನ್‌ ನಿಯಮಗಳ ಪಾಲನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೋಂಕಿನ ಪ್ರಮಾಣ ತಗ್ಗಲು ನೆರವಾಯಿತು ಎನ್ನುತ್ತಾರೆ ಪರಿಣಿತರು.

ಪೂರ್ವ ಸಿದ್ಧತೆಯ ಫಲ
ನಾವು ಪೂರ್ವಭಾವಿಯಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರ ಪರಿಶ್ರಮದ ಫಲದು ಎನ್ನುತ್ತದೆ ಸರಕಾರ. ಆರ್ಥಿಕವಾಗಿ ಹಿಂದುಳಿದರೂ ಪರವಾಗಿಲ್ಲ. ದೇಶದ ಪ್ರಜೆಗಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದಲೇ ಸರಕಾರ ಕಾರ್ಯ ನಿರ್ವಹಿಸಿತು.

ಬೆಲ್ಜಿಯಂ ಅಷ್ಟೇ ಪ್ರಮಾಣ ಜನಸಂಖ್ಯೆಯ ಗ್ರೀಕ್‌ ಕೋವಿಡ್‌-19 ವಿರುದ್ಧ ಕಾರ್ಯಾಚರಿಸಿದ ಪರಿ ನಿಜಕ್ಕೂ ಅಭಿನಂದನೀಯವಾದದ್ದು. ಅದೇ ಬೆಲ್ಜಿಯಂ 47,334 ಪ್ರಕರಣ ಮತ್ತು 7,331 ಸಾವು ಗಳನ್ನು ವರದಿ ಮಾಡಿದೆ. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ಹೆಲೆನಿಕ್‌ ಅಬ್ಸರ್ವೇಟರಿಯ ನಿರ್ದೇಶಕ ಕೆವಿನ್‌ ಫೆದರ್‌ಸ್ಟೋನ್‌ ಹೇಳುವಂತೆ, “ಕೋವಿಡ್‌-19 ಅಪಾಯವನ್ನು ಹತ್ತಿಕ್ಕಿ ಮುಂದುವರೆದಿದೆ “ಎಂದು ದೇಶದ ಕಾರ್ಯವೈಖರಿಯನ್ನು ಶ್ಲಾ ಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಲಾಕ್‌ಡೌನ್‌ ಆಗಿದ್ದ ದೇಶ ಕ್ರಮೇಣವಾಗಿ ನಿಯಮಗಳನ್ನು ಸಡಿಲಗೊಳಿಸುತ್ತಿದ್ದು, ಸಹಜ ಸ್ಥಿತಿಯತ್ತ ಮರಳಲು ಯೋಜನೆಯನ್ನು ರೂಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next