Advertisement
ಮರೆಯಲಾಗದ ಮಹಾನುಭಾವರು…
Related Articles
Advertisement
ಪ್ರವೀಣ್ ಗೋಡ್ಖಿಂಡಿ, ಖ್ಯಾತ ಕೊಳಲುವಾದಕ
.
ಶಿಕ್ಷಕಿ ಕೈತುತ್ತು ತಿಂದು ಬೆಳೆದೆವು :
1962ರಲ್ಲಿ ಚೆನ್ನೈಯ ಈಶ್ವರಿ ಪ್ರಸಾದ್ ದತ್ತಾತ್ರೇಯ ಆಥೋì ಸೆಂಟರ್‌ಗೆ ನನ್ನನ್ನು 2ನೇ ತರಗತಿಗೆ ಸೇರಿಸಿದ್ದರು. ಅಲ್ಲಿ ನಮಗೆ ಸೂಕ್ತ ರೀತಿಯ ವ್ಯವಸ್ಥೆ ಇರಲಿಲ್ಲ. ಅದರಲ್ಲೂ ಊಟಕ್ಕೆ ಸಾಕಷ್ಟು ಸಮಸ್ಯೆ ಇತ್ತು. ಈ ಸಂದರ್ಭದಲ್ಲಿ ನಮ್ಮ ಸಮಸ್ಯೆಯನ್ನು ಅರಿತು ಅಲ್ಲಿ ನಮಗೆ ಬೋಧಿಸುತ್ತಿದ್ದ ಕಾವೇರಿ ಎಂಬ ಶಿಕ್ಷಕಿ ನಿತ್ಯವೂ ತಮ್ಮ ಮನೆಯಿಂದ ಊಟ ತಂದು, ಬಿಡುವಿನ ಸಮಯದಲ್ಲಿ ನಮ್ಮನ್ನು ಪಕ್ಕಕ್ಕೆ ಕರೆದು ಅವರೇ ಕೈತುತ್ತು ನೀಡುತ್ತಿದ್ದರು. ನಾನು ಮತ್ತು ಮಾಲತಿ ಹೊಳ್ಳ(ಕ್ರೀಡಾಪಟು) ಇಬ್ಬರು ಅಲ್ಲಿಯೇ ವ್ಯಾಸಂಗ ಮಾಡಿದೆವು.
ಕಾವೇರಿ ಶಿಕ್ಷಕರು ನಮಗೆ ನೀಡಿದ ಶಿಕ್ಷಣ ಇಡೀ ಜೀವನಕ್ಕೆ ಬುನಾದಿಯಾಗಿದೆ. ಅವರು ಸದ್ಯ ಬೆಂಗಳೂರಿನಲ್ಲೇ ಇದ್ದಾರೆ. ಆಗಿಂದಾಗ್ಗೆ ಅವರನ್ನು ಭೇಟಿ ಮಾಡುತ್ತಿರುತ್ತೇವೆ. ನಾನು 2ನೇ ತರಗತಿ ಯಲ್ಲಿದ್ದಾಗ ಕಾವೇರಿ ಶಿಕ್ಷಕಿ ನೀಡಿದ ಭೋಜನ ಇಡೀ ಜೀವನಕ್ಕೆ ಶಕ್ತಿ, ಧೈರ್ಯ ವಿಶ್ವಾಸ ತುಂಬಿದೆ. ಹಸಿವಿನಿಂದ ಮುಕ್ತಿ ನೀಡಿದ್ದು ಒಂದು ಕಡೆಯಾದರೆ, ಶಿಕ್ಷಣಕ್ಕೆ ಅದೇ ರೀತಿಯಲ್ಲಿ ಪ್ರೋತ್ಸಾಹ ನೀಡಿ, ನಮ್ಮನ್ನು ಬೆಳೆಸಿದ್ದರು. ಕಾವೇರಿ ಶಿಕ್ಷಕಿ ನಮ್ಮ ಜೀವನದಲ್ಲಿ ಎಂದೂ ಮರೆಯಲಾಗದ ಶಿಕ್ಷಕಿ.- ಪ್ರೊ| ಎಂ.ಕೆ.ಶ್ರೀಧರ್, ಶಿಕ್ಷಣ ತಜ್ಞ
.
ಭಾಳ ಹೊಡದ್ನೇನ ಬಸಣ್ಣ: ದೊಡ್ಡ ವ್ಯಕ್ತಿ ಅಕ್ಕಿ ಹೋಗು :
ಅನ್ನಪ್ಪಾ ಅಂತ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಟೀಚರ್ ಇದ್ದರು. ಒನ್ನೇತ್ತದಿಂದ ಏಳನೆತ್ತಾ ತನಕ ಕಲಿಸಿದ್ರು. ನಾವು ಸಾಲಿ ತಪ್ಪಿಸಿ ದನಾ ಕಾಯಾಕ ಹೋಗಾರು. ಅವರ ಕೈಯಾಗ ಸಿಕ್ರ ಬೆನ್ನು ಹುರಿ ಬಾಯುವಂಗ ಹೊಡ್ಯಾರು. ಮಧ್ಯಾಹ್ನ ಇತಿಹಾಸ ಹೇಳಾರು. ನಾವು ತಪ್ಪಿಸಿ ಅಡ್ಯಾಡ್ತಿದ್ವಿ.
ಒಂದಿನ ಸಮಾಜ ವಿಜ್ಞಾನ ಪಾಠ ಮಾಡುವಾಗ ಯುಎನ್‌ಒ ಬಗ್ಗೆ ಹೇಳಾಕತ್ತಿದ್ರು, ಯುಎನ್‌ಒದಾಗ ಜಗತ್ತಿನ ಎಲ್ಲ ದೇಶದ ಮೀಟಿಂಗ್ ಅಕ್ಕಾವು. ಮುಂದ ನೀವು ಯಾರರ ಅಮೆರಿಕಾಕ ಹೋದ್ರ ಯುಎನ್‌ಒ ನೋಡಬೌದು ಅಂತ ಹೇಳಿದ್ರು. ಅದನ್ನ ನಿಂಗಪ್ಪ ಅಂತ ನನ್ ಕ್ಲಾಸ್‌ಮೇಟ್ ನಮ್ ಮಾಸ್ತರ್ ಏನ್ ಸುಳ್ ಹೇಳ್ತಾರಲೇ. ನಾವು ನೆಟ್ಟಗ ಬಿಜಾಪುರ ನೋಡಿಲ್ಲ. ಯುಎನ್‌ಒ ನೋಡ್ತಿರಿ ಅಂತ ಹೇಳ್ತಾರು ಅಂದಾ. ಅದು ಅವರಿಗೆ ಗೊತ್ತಾಗಿ, ನನ್ನ ಕರದು ಏನಪಾ ಬಸಣ್ಣಾ ಯುಎನ್‌ಒ ಬಗ್ಗೆ ಏನೇನೋ ಮಾತ್ಯಾಡಿದ್ರಿ ಅಂತ ಅಂದ್ರು. ನಾನು ಹೂನ್ರಿ ಅಂದೆ, ನೋಡು ತಮ್ಮಾ ಮುಂದ ಯಾರ ಹಣೇಬರಾ ಹೆಂಗಿರತೈತೊ ಗೊತ್ತಿಲ್ಲ. ನೀ ಶಾಣ್ಯಾ ಅದಿ, ಚಂದಗಿ ಓದು, ದೊಡ್ಡ ಮನಷ್ಯಾ ಅಕ್ಕಿ ಅಂದ್ರು. ನೀ ಸಾಲಿ ಕಲೀಲಿಲ್ಲ ಅಂದ್ರ ನಿಮ್ಮ ಅಪ್ಪಾ ಅವ್ವಾ ನಂಗೇನಂದಾರು. ನಾ ನಿನ್ನ ಗುರು. ನನ್ ಆಶೀರ್ವಾದ ಇತ್ತಂದ್ರ ಮುಂದ ನೀ ದೊಡ್ಡ ಮನಸ್ಯಾ ಅಕ್ಕಿ ಅಂದಿದ್ರು. ನಾ ಫಸ್ಟ್ ಟೈಮ್ ಎಂಎಲ್‌ಸಿ ಆದಾಗ ಉರಿಗಿ ಹೋದಾಗ ಅವರ ಕಾಲಿಗಿ ಬಿದ್ದು ನಮಸ್ಕಾರ ಮಾಡಿದೆ. ನನ್ನ ತಬ್ಕೊಂಡು ಕಣ್ಣೀರು ಹಾಕಿದ್ರು. 1984 ರಾಗ ನಾನು ನನ್ ಹೆಂಡ್ತಿ ಅಮೆರಿಕಾಕ ಹೋಗಿದ್ವಿ. ಅವಾಗ ನಮ್ನ ಯುಎನ್‌ಒಕ ಕರಕೊಂಡು ಹೋಗಿದ್ರು. ಅಲ್ಲಿಂದ ವಾಪಸ್ ಬಂದ ಮ್ಯಾಲ ಸೀದಾ ಮಾಸ್ತರ್ ಮನಿಗಿ ಹೋಗಿ ಯುಎನ್‌ಒ ನೋಡಿ ಬನ್ನಿರಿ ಅಂದೆ. ನಾ ಹೇಳಿದ್ನಿಲ್ಲೊ.. ನನ್ ಮಾತು ಖರೆ ಐತೊ. ಈಗ ಬಿಜಾಪುರ ನೋಡು ಹೋಗು ಅಂದ್ರು. ನೀ ಇನ್ನೊ ದೊಡ್ಡ ವ್ಯಕ್ತಿ ಅಕ್ಕಿ ಹೋಗು ಅಂದ್ರು. -ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ.
.
ಇವನು ನನ್ನ ಶಿಷ್ಯ ನಾಡಿಗ್… :
ಅದು 1992, ಅಕ್ಟೋಬರ್ ಮೊದಲ ವಾರ. ನಾನು ಶಿವಮೊಗ್ಗದ ಡಿ.ವಿ.ಎಸ್. ಪದವಿ ಕಾಲೇಜಿನ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿ. ನೋಟಿಸ್ ಬೋರ್ಡಿನಲ್ಲಿ ಸಾಹಿತ್ಯ ಸ್ಪರ್ಧೆ ಯೊಂದರ ಪ್ರಕಟನೆ, ಬೆಂಗಳೂರಿನ ಕ್ರೈÓr… ಕಾಲೇಜು ಕನ್ನಡ ಸಂಘದ ದ. ರಾ. ಬೇಂದ್ರೆ ಕವನ ಸ್ಪರ್ಧೆ ಮತ್ತು ಅನಕೃ ಲೇಖನ ಸ್ಪರ್ಧೆ ವಿವರಗಳು. ನೋಡಿದವನೇ ನೇರವಾಗಿ ಓಡಿಹೋದುದು ಕನ್ನಡ ಮೇಷ್ಟ್ರು ಸತ್ಯನಾರಾಯಣ ರಾವ್ ಅಣತಿ ಅವರ ಬಳಿಗೆ. ಓಹ್, ಕವಿತೆ ಬರೀತಿಯೇನಯ್ಯ ನಾಡಿಗ್? ಕಳಿಸು ಬಿಡಬೇಡ ಅಂದರು. ಕವನ ಮತ್ತು ತಲೆದಂಡ ನಾಟಕದ ಪ್ರಾಯೋಗಿಕ ವಿಮಶಾì ಲೇಖನ ಕಳಿಸಿದೆ ಅಷ್ಟೆ. ಅದೇ ಬಾಳಿನ ಮುಖ್ಯ ತಿರುವು. ಸತ್ಯನಾ ರಾಯಣ ರಾವ್ ಅಣತಿ ಸರ್ ಮತ್ತು ನೋಟಿಸ್ ಬೋರ್ಡ್‌ನ ಆ ಪ್ರಕಟನೆ ನನ್ನೊಳಗೆ ಸಂಚಲನವನ್ನು ಉಂಟು ಮಾಡಿತ್ತು. ನನಗೆ ಬಹುಮಾನ ಬಂದಾಗ ಪರಿಚಿತರಿಗೆಲ್ಲ- “ಇವನು ನನ್ನ ಶಿಷ್ಯ ನಾಡಿಗ್’ ಅಂತ ಖುಷಿಯಿಂದ ಹೇಳ್ತಾ ಇದ್ರು. ಬಾಳಿನ ಕಡು ಕಷ್ಟದ ಕಾಲದಲ್ಲಿ ಕೈ ಹಿಡಿದವರು ಅಣತಿ ಸರ್. ಸರ್‌ಗೆ ಈಗ ಭರ್ತಿ 85. ಫೋನ್ ಮಾಡಿದರೆ ಅದೇ ಮಾತು ಪ್ರಶ್ನೆ… ನಾಡಿಗ್ ಏನು ಬರೆದೆ ಅಷ್ಟೆ. “ಅಲೆ ತಾಕಿದರೆ ದಡ’ ಕವನ ಸಂಕಲನವನ್ನು ಅವರಿಗೆ ಅರ್ಪಣೆ ಮಾಡಿ ಕೂತಿದ್ದೇನೆ. -ವಾಸುದೇವ ನಾಡಿಗ್, ಕವಿ, ಶಿಕ್ಷಕ
.
ಶಿಕ್ಷಕರ ದಿನಾಚರಣೆ ಯಂದು ಸಾಕಷ್ಟು ಮಂದಿ ಶಿಕ್ಷಕರು ನೆನಪಿಗೆ ಬರುತ್ತಾರೆ. ಎಲ್ಲರೂ ಒಂದಲ್ಲ, ಒಂದು ರೀತಿಯಲ್ಲಿ ಪ್ರಭಾವ ಬೀರಿರುತ್ತಾರೆ. ಅದರಲ್ಲಿ ವಿಜಯಲಕ್ಷ್ಮೀ ಟೀಚರ್ ಪ್ರಮುಖರು. ಜೀವನದ ಮೌಲ್ಯ ಕಲಿಸಿದ ವಿಜಯಲಕ್ಷ್ಮೀ ಟೀಚರ್ ನನ್ನ ಗುರು, ನನ್ನ ಹೆಮ್ಮೆ.-ಪುನೀತ್ ರಾಜ್‌ಕುಮಾರ್, ನಟ
.
ನನ್ನ ಜೀವನದಲ್ಲಿ ನೆನಪಿನಲ್ಲಿ ಉಳಿಯುವಂಥ ಅನೇಕ ಶಿಕ್ಷಕರಿದ್ದಾರೆ. ಅವರಲ್ಲಿ ಮೊದಲಿಗೆ ಬರುವ ಹೆಸರು ಅಂದ್ರೆ ಸುನೀತಾ ಮಿಸ್ ಮತ್ತು ಥೆರೇಸಾ ಮಿಸ್. ನನಗೆ ಮೊಟ್ಟ ಮೊದಲು ಸ್ಕೂಲ್ ವಾತಾವರಣವನ್ನು ಪರಿಚಯಿಸಿ, ಮೊದಲು ಅಕ್ಷರ ಹೇಳಿಕೊಟ್ಟವರು ಇವರು. ಹಾಗಾಗಿ ಇಂದಿಗೂ “ಶಿಕ್ಷಕರ ದಿನ’ ಅಂದ್ರೆ, ಈ ಇಬ್ಬರು ಟೀಚರ್ ಹೆಸರು ಮೊದಲು ನೆನಪಿಗೆ ಬರುತ್ತದೆ. ನನ್ನ ಹೈಯರ್ ಎಜುಕೇಶನ್ ಸಮಯದಲ್ಲಿ ಬಾಬು ಸರ್ ಮತ್ತು ಪ್ರಶಾಂತ್ ಸರ್ ಎಂಬ ಇಬ್ಬರು ಟೀಚರ್ ನನ್ನ ಮೇಲೆ ತುಂಬ ಪರಿಣಾಮ ಬೀರಿದ್ದರು. -ಅದಿತಿ ಪ್ರಭುದೇವ, ನಟಿ
ಗಣಿತದ ಮೇಷ್ಟ್ರಿಗೆ ಪ್ರಣಾಮ :
ಶಿಕ್ಷಕರ ದಿನ ಬಂದಾಗ ಕಣ್ಮುಂದೆ ಬರುವ ಆಕೃತಿ ನಮ್ಮ ಗಣಿತ ಮೇಷ್ಟ್ರು ಜೋಷಿ ಅವರದು. ನನಗೆ ಸೂತ್ರ, ಪ್ರಮೇಯಗಳ ರುಚಿ ಹತ್ತಿಸಿದ ಪುಣ್ಯಾತ್ಮ. ಪಿಯುಸಿಯಲ್ಲಿ ಚಂದ್ರಶೇಖರ್ ಬೆಲ್ಲದ್ ಗಣಿತಕ್ಕೆ ಮತ್ತಷ್ಟು ಸಿಹಿ ಲೇಪಿಸಿದರು. ತಮ್ಮದೇ ಸರಳ ಶೈಲಿಯಲ್ಲಿ ಗಣಿತವನ್ನು ನಮ್ಮೊಳಗೆ ಸರಾಗವಾಗಿ ಇಳಿಸುತ್ತ, ಬದುಕಿನ ಭಾಗವಾಗಿಸಿದ ಇವರ ಚಾಕಚಕ್ಯತೆಗೆ ಇಂದಿಗೂ ಬೆರಗಾಗುತ್ತೇನೆ. -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಶಿಕ್ಷಕರೇ ದಾರಿದೀಪ :
ಕಾಲೇಜಿನಲ್ಲಿದ್ದಾಗ ಕ್ರೀಡೆಗೆ ಹೆಚ್ಚು ಪ್ರಾಮುಖ್ಯ ನೀಡುತ್ತಿದ್ದೆ. ಆಗ ಪ್ರಾಧ್ಯಾಪಕರೊಬ್ಬರು ಹೇಳಿದ ಕಿವಿಮಾತು ಸಾಕಷ್ಟು ಕಲಿಸಿತು. “ಎಲ್ಲದಕ್ಕೂ ನಿರ್ದಿಷ್ಟ ಸಮಯ ಮೀಸಲಿಡಬೇಕು ಮತ್ತು ಅದನ್ನು ಜೀವನದಲ್ಲಿ ಪಾಲಿಸಬೇಕು’ ಎಂಬ ಕಿವಿಮಾತನ್ನು ಅವರು ಹೇಳಿದ್ದರು. ಸಮಯ ಪಾಲನೆ ಇಂದಿಗೂ ಶಿಸ್ತಿಗೆ ದಾರಿಯಾಗಿದೆ. ಗುರುಗಳು ನೀಡಿದ ಮಾರ್ಗದರ್ಶನ ಎಂದಿಗೂ ಮರೆಯಲು ಸಾಧ್ಯವಿಲ್ಲ.-ನ್ಯಾ| ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ
ಶ್ರದ್ಧೆ, ಪ್ರಾಮಾಣಿಕತೆ, ವಿಶ್ವಾಸಗಳ ಪಾಠ :
ಮಂಗಳೂರಿನಲ್ಲಿ ನಮ್ಮ ಕುಟುಂಬದ ಹೊಟೇಲ್ ಇತ್ತು. ನನ್ನ ದೊಡ್ಡಪ್ಪ ಅಲ್ಲಿ ನನ್ನನ್ನು ಶಾಲೆಗೆ ಸೇರಿಸಿದರು. ವೆಂಕಟರಮಣಚಾರಿ ಒಂದನೇ ಕ್ಲಾಸಿಗೆ ಟೀಚರ್. ಅವರು ಹೊಸ ವಿಧಾನದಲ್ಲಿ “ಅ’ ಬರೆಯಲು ಕಲಿಸಿಕೊಟ್ಟರು. ನನ್ನ ಮೊದಲ ಗುರು ಗಳಾದ ಅವರು ಹೇಳಿದ ಮಾತು, “ಧೈರ್ಯದಿಂದ ಇರು. ಆದರೆ ಶ್ರದ್ಧೆ, ಪ್ರಾಮಾಣಿಕತೆ ಮತ್ತು ವಿಶ್ವಾಸ ಬೆಳೆಸಿಕೊಂಡು ಹೋಗು’. ಇದನ್ನು ನಾನು ಎಂದೂ ಮರೆಯಲಿಲ್ಲ.-ಬಿ.ವಿ. ಆಚಾರ್ಯ, ಮಾಜಿ ಅಡ್ವೋಕೇಟ್ ಜನರಲ್
ಅವರಿಬ್ಬರ ಪ್ರೀತಿ, ವಿಶ್ವಾಸ ಅವಿಸ್ಮರಣೀಯ :
ಶಿಕ್ಷಕರ ದಿನಾಚರಣೆ ಎಂದಾಗ ನೆನಪಿಗೆ ಬರುವುದು ಕಮಲಿನಿ ಟೀಚರ್, ಮಂಜು ನಾಥ್ ಮೇಷ್ಟ್ರು. ಎಲ್ ಕೆಜಿ ಯಲ್ಲಿದ್ದಾಗ ಕಮಲಿನಿ ಟೀಚರ್ ತುಂಬಾಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದರು, ಸ್ವಂತ ಅಮ್ಮನಂತೆ ನೋಡುತ್ತಿದ್ದರು. ಮಂಜು ನಾಥ್ ಹೈಸ್ಕೂಲ್ ಮೇಷ್ಟು. ಹೈಸ್ಕೂಲ್ ಮಕ್ಕಳ ಜತೆಗೆ ಶಿಕ್ಷ ಕರು ಅಷ್ಟು ಸ್ನೇಹಶೀಲರಾಗಿ ರುವುದು ಕಡಿಮೆ. ಆದರೆ ಮಂಜುನಾಥ್ ಸರ್ ಅಂಥ ವಿಶಿಷ್ಟ ಗುಣ ಹೊಂದಿದ್ದರು. -ರಕ್ಷಿತ್ ಶೆಟ್ಟಿ, ನಟ, ನಿರ್ದೇಶಕ