ಸೂಲಿಬೆಲೆ: ಹೊಸಕೋಟೆ ಕ್ಷೇತ್ರವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಜನರ ಆಶಯಗಳಿಗೆ ಸದಾ ಸ್ಪಂದಿಸಿ ಗ್ರಾಮಾಭಿವೃದ್ಧಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಸೂಲಿಬೆಲೆ ಹೋಬಳಿ ಈಸ್ತೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಚರಂಡಿ ಕಾಮಗಾರಿ 5 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಟ್ ದೀಪ ಹಾಗೂ ನರೇಗಾ ಯೋಜನೆ ಅನುದಾನದಲ್ಲಿ ಸಿಸಿ ಚರಂಡಿ ಕಾಮಗಾರಿ ನಡೆಯಲಿದೆ ಎಂದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಆದ್ಯತೆ ಮೇರೆಗೆ ಅನೇಕ ಗ್ರಾಮಗಳಲ್ಲಿ ಸರ್ಕಾರದ ಅನುದಾನ ಜೊತೆಯಲ್ಲಿ ವೈಯಕ್ತಿಕವಾಗಿ ಕೊಳವೆ ಬಾವಿ ಕೊರೆಸಿ ಕೊಡಲಾಗುತ್ತಿದೆ. ಸ್ಥಳೀಯ ಗ್ರಾಪಂನ ನರೇಗಾ ಅನುದಾನದಲ್ಲಿ ಚರಂಡಿ, ರಸ್ತೆ ಪ್ರಗತಿಯಲ್ಲಿದ್ದು, ಉತ್ತಮ ಗುಣಮಟ್ಟದ ಕಾಮಗಾರಿ ನಿರ್ವಹಿಸಲಾಗುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಯಾರೂ ಸಹ ರಾಜಕೀಯಕ್ಕೆ ಅವಕಾಶ ನೀಡಬಾರದು. ಸ್ಥಳೀಯ ಗ್ರಾಪಂಗಳಲ್ಲಿ ಅನೇಕ ರೀತಿಯ ಜನಪರ ಯೋಜನೆಗಳಿದ್ದು, ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಅಭಿವೃದ್ಧಿ ಕಾಮಗಾರಿಗೆ ಸಹಕಾರಿ: ಗ್ರಾಪಂ ಅಧ್ಯಕ್ಷ ಸಿ.ಮುರಳಿ ಮಾತನಾಡಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನಯಡಿ ಹೆಚ್ಚಿನ ಕಾಮಗಾರಿಗಳು ಪ್ರಗತಿಯಲ್ಲಿವೆ. 15ನೇ ಹಣಕಾಸು, ವರ್ಗ-1ರಲ್ಲಿಯೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಶಾಸಕರ ಅನುದಾನ ದೊರೆತಿರುವುದು ಮತ್ತಷ್ಟ ಅಭಿವೃದ್ಧಿ ಕಾಮಗಾರಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷೆ ಚಾಂದ್‌ಸುಲ್ತಾನ ಖಾದರ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ. ಸತೀಶಗೌಡ, ತಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ, ಬಿ.ವಿ. ರಾಜಶೇಖರಗೌಡ, ತಾಪಂ ಮಾಜಿ ಅದ್ಯಕ್ಷ ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಗೋಪಾಲ್, ಒಬಿಸಿ ಜಿಲ್ಲಾಧ್ಯಕ್ಷ ಸಿ.ಮುನಿಯಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅತ್ತಿಬೆಲೆ ನಾಗೇಶ್, ಅರಸನಹಳ್ಳಿ ಶಿವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಮುನಿಶಾಮಣ್ಣ, ಸದಸ್ಯ ರಮೇಶ್, ಬಿಂದು ದೇವೆಗೌಡ, ಚನ್ನಕೇಶವ, ರಾಮಾಂಜಿನಿ, ಎಚ್. ಎಂ. ಮೂರ್ತಿ, ಸಲೀಂ, ಸರೋಜಮ್ಮ ಜಯ ರಾಮ್, ತಾರಾ ಕೇಶವಮೂರ್ತಿ, ನಾಗ ವೇಣಿ ವೆಂಕಟೇಶ್, ಮಧು, ಕರಗಪ್ಪ, ಮುಖಂಡ ನಾರಾ ಯಣಪ್ಪ, ಹೊಸಹಳ್ಳಿ ಜಯ ರಾಮ್, ಲಕ್ಷ್ಮೀ ನಾರಾಯಣ್, ಹಿಂಡಿಗ ನಾಳ ನಾರಾಯಣ ಗೌಡ, ಹೊಸಹಳ್ಳಿ ರವಿ ಹಾಗೂ ಇತರರು ಇದ್ದರು.
2,800 ಮನೆ ಮಂಜೂರು: ಪ್ರತಿ ಗ್ರಾಮ ಪಂಚಾಯತ್‌ಗೂ 100 ಮನೆಗಳಂತೆ 28 ಗ್ರಾಮ ಪಂಚಾಯಿತಿಗಳಿಗೆ 2800 ಮನೆಗಳನ್ನು ಮಂಜೂರು ಮಾಡಲಾಗಿದ್ದು, ಅರ್ಹ ಫಲಾನು ಭವಿಗಳು ಇದರ ಪ್ರಯೋಜನ ಪಡೆಯ ಬಹುದಾಗಿದೆ. ಮುಂದಿನ ದಿನಗಳಲ್ಲಿ ನಿವೇಶನ ಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು.