Advertisement

ಬುದ್ಧಿಜೀವಿಗಳ ಮೌನ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಆತಂಕ

03:41 PM Jan 27, 2018 | Team Udayavani |

ಹೊಸಪೇಟೆ: ಬುದ್ಧಿಜೀವಿಗಳ ಮೌನ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಆತಂಕವಾಗಿದ್ದು, ಜಾಗತೀಕರಣ, ಖಾಸಗೀಕರಣ, ಜಾಗತಿಕ, ಏಕತೆ ಹಾಗೂ ಭಾಷಾ ಬಿಕ್ಕಟ್ಟನ್ನು ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ| ಮಲ್ಲಿಕಾ ಘಂಟಿ ಹೇಳಿದರು.

Advertisement

ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ಘಟಕವು 69ನೇ ಗಣರಾಜ್ಯೋತ್ಸವ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಪ್ರಜಾಪ್ರಭುತ್ವದ ಸಮಕಾಲೀನ ಬಿಕ್ಕಟ್ಟುಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬುದ್ಧಿಜೀವಿಗಳ ಮೌನ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಆತಂಕವಾಗಿದೆ. ಜಾಗತೀಕರಣ, ಖಾಸಗೀಕರಣಗಳ ಆಶಯ ಮಾರುಕಟ್ಟೆಯ
ಸೃಷ್ಟಿ. ಭಾರತ ಮಾರುಕಟ್ಟೆ ಆಗುತ್ತದೆ. ಇದು ಜಾಗತಿಕ ಬಿಕ್ಕಟ್ಟು. ಇದರೊಂದಿಗೆ ಏಕತೆಯ ಬಿಕ್ಕಟ್ಟನ್ನು, ಭಾಷಾ ಬಿಕ್ಕಟ್ಟನ್ನು
ಎದುರಿಸುತ್ತಿದ್ದೇವೆ. ಉದ್ಯಮಪತಿಗಳು ಸೃಷ್ಟಿಸುವ ಆರ್ಥಿಕ ಆಮಿಷಗಳಿಗೆ ನಾವು ಬಲಿಯಾಗುತ್ತಿದ್ದೇವೆ. ಮಾರುಕಟ್ಟೆ ಸಂಸ್ಕೃತಿ
ಜಗತ್ತನ್ನು ಯಾಮಾರಿಸುತ್ತಿರುವಾಗ ಸಮಾನತೆ, ಸಬಲೀಕರಣವನ್ನು ನಿಜವಾದ ಅರ್ಥದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತಿಲ್ಲ.
ಜನಪ್ರತಿನಿಧಿಗಳು ಸಂವಿಧಾನ ವಿರೋಧಿಯಾಗಿ ನೀಡುವ ಹೇಳಿಕೆಗಳು, ಮರ್ಯಾದೆ ಹತ್ಯೆಗಳಂತಹ ಬಿಕ್ಕಟ್ಟುಗಳು ಸಹಿಷ್ಣತೆಯ ಬಿಕ್ಕಟ್ಟುಗಳಂತಹ ಒಳಬಿಕ್ಕಟ್ಟು ಮತ್ತು ಹೊರಬಿಕ್ಕಟ್ಟುಗಳು ದೇಶವನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದೆ. “ಮನು’ ಅನ್ನು ಮನಸ್ಸಿನಿಂದ ನಾವೆಲ್ಲ ಕಿತ್ತುಹಾಕಬೇಕು. ಸಾಮಾಜಿಕ, ಸಾಂಸ್ಕೃತಿಕ ಅಪವ್ಯಾಖ್ಯಾನಗಳಿಗೆ ಉತ್ತರಿಸಲು ನಾವು ಸಿದ್ಧರಾಗಬೇಕು ಎಂದರು.

ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಬಿ.ಎಂ.ಪುಟ್ಟಯ್ಯ ಮಾತನಾಡಿ, ದೇಶದಲ್ಲಿ ತಾತ್ವಿಕ ಬಿಕ್ಕಟ್ಟು ಎದುರಾಗಿದ್ದು,
ಪ್ರಜಾಪ್ರಭುತ್ವ ಸಾಮಾಜೀಕರಣಗೊಳ್ಳಲಿಲ್ಲ. ಮಹಿಳೆಯರ ಮೇಲಿನ ಅತ್ಯಾಚಾರ, ದಬ್ಟಾಳಿಕೆಗಳು ಅಭಿವೃದ್ಧಿಯಾಗಿವೆ. ಅಭಿವೃದ್ಧಿ
ತೆರೆದಿಡುವ ಮುಚ್ಚಿಡುವ ವೈರುಧ್ಯಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಎಲ್ಲ ಬಗೆಯ ಸಂಪತ್ತು ಅಧಿಕಾರ ಆಸ್ತಿ ಆರ್ಥಿಕತೆಯ
ಕೇಂದ್ರೀಕರಣ ಮತ್ತೂಂದು ರೀತಿಯ ಬಿಕ್ಕಟ್ಟು ಆಗಿದೆ. ಎಲ್ಲರು ಸೇರಿ ದೇಶ ಕಟ್ಟಬೇಕು ಸಮಾಜದ ಎಲ್ಲರೂ ಮುಖ್ಯವಾಹಿನಿಗೆ
ಬರಬೇಕು ಎಂದು ಕರೆ ನೀಡಿದರು. ಕುಲಸಚಿವ ಡಾ| ಡಿ.ಪಾಂಡುರಂಗಬಾಬು ಮಾತನಾಡಿ, ಗಣರಾಜ್ಯದ ಸಂವಿಧಾನದ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ಶಿವಾನಂದ ವಿರಕ್ತಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ವೀರೇಶ ಜಾನೇಕಲ್‌ ನಿರೂಪಿಸಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆರಂಭದಲ್ಲಿ ಕನ್ನಡ ವಿವಿ ಆವರಣದಲ್ಲಿ 69ನೇ ಗಣರಾಜ್ಯದ ಅಂಗವಾಗಿ ಕುಲಪತಿ ಡಾ| ಮಲ್ಲಿಕಾ
ಘಂಟಿ, ದ್ವಜಾರೋಹಣ ನೆರವೇಸಿದರು.

Advertisement

Udayavani is now on Telegram. Click here to join our channel and stay updated with the latest news.

Next