Advertisement

ಸ್ವಂತ ಹಣದಲ್ಲಿ 4 ಕಿ.ಮೀ.ರಸ್ತೆಗುಂಡಿ ಮುಚ್ಚಿಸಿದ ಪಿಎಸ್‌ಐ

01:30 PM Nov 26, 2020 | Suhan S |

ಎಚ್‌.ಡಿ.ಕೋಟೆ: ಇತ್ತೀಚೆಗಷ್ಟೇ ಹದಗೆಟ್ಟಿದ್ದ ರಸ್ತೆಯ ಗುಂಡಿ ಮುಚ್ಚಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದ್ದ ಸಮಾಜಮುಖೀ, ಜನಸ್ನೇಹಿ ಪೊಲೀಸ್‌ ಅಧಿಕಾರಿಯಾಗಿರುವ ಎಎಸ್‌ಐ ದೊರೆಸ್ವಾಮಿ, ಮತ್ತೆ ಸ್ವಂತ ಖರ್ಚಿನಲ್ಲಿ ಬರೋಬ್ಬರಿ 4 ಕಿ.ಮೀ. ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಿಸಿ, ಈ ಭಾಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

Advertisement

ರಸ್ತೆ ಅವ್ಯವಸ್ಥೆಯಿಂದ ನಿತ್ಯಕಿರಿಕಿರಿ ಅನುಭವಿಸುತ್ತಿದ್ದ ವಾಹನ ಸವಾರರು ಹಾಗೂ ಪಾದಚಾರಿಗಳು ಇದೀಗ ತುಸು ನಿಟ್ಟುಸಿರು ಬಿಟ್ಟಿದ್ದಾರೆ. ಶಾಸಕರು, ಚುನಾಯಿತ ಜನಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾಡಬೇಕಿದ್ದ ಪೌರ ಕೆಲಸಗಳನ್ನು ಎಎಸ್‌ಐ ದೊರಸ್ವಾಮಿ ತಮ್ಮ ಸ್ವಂತ ಹಣವನ್ನು ವ್ಯಯಿಸಿ ನಿರ್ವಹಿಸಿ, ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಎಚ್‌.ಡಿ.ಕೋಟೆ ಪಟ್ಟಣದ ಗದ್ದಿಗೆ ವೃತ್ತದಿಂದ ಮಲಾರಕಾಲೋನಿ ಕ್ರಾಸ್‌ ತನಕ ಸುಮಾರು4 ಕಿ.ಮೀ. ಉದ್ದದ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿತ್ತು. ವಾಹನಸವಾರರು ಇದರಿಂದ ರೋಸಿ ಹೋಗಿದ್ದರು. ಸವಾರರುಬಿದ್ದ ಗಾಯಮಾಡಿಕೊಂಡಿರುವ ನಿದರ್ಶನಗಳು ಕೂಡ ಇವೆ. ಇದನ್ನು ಗಮನಿಸಿ ದೊರೆಸ್ವಾಮಿ, ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲೇಬೇಕು ಎಂದು ಪಣತೊಟ್ಟು ಯಾರ ಸಹಾಯವೂ ಇಲ್ಲದೇ ರಸ್ತೆ ದುರಸ್ತಿಪಡಿಸಿದ್ದಾರೆ.

ಸಲಿಕೆ ಹಿಡಿದ ಖುದ್ದಾಗಿ ರಸ್ತೆಗೆ ಇಳಿದ ದೊರೆಸ್ವಾಮಿ, ಜಲ್ಲಿ, ಡೆಸ್ಟ್‌ ಸೇರಿದಂತೆ ಸಿಮೆಂಟ್‌ ಹಾಗೂ ಮಿಕ್ಸರ್‌ ಯಂತ್ರೋಪಕರಣಗಳು ಹಾಗೂ ಕಾರ್ಮಿಕರ ತಂಡವನ್ನು ಕಟ್ಟಿಕೊಂಡು ಬುಧವಾರ ಗುಂಡಿ, ಹಳ್ಳಕೊ‌ಳ್ಳಗಳನ್ನು ಮುಚ್ಚಿಸಿದರು. ಇದಕ್ಕೆ ಅವರ ಪತ್ನಿ ಚಂದ್ರಿಕಾ ಕೂಡ ರಸ್ತೆಗಿಳಿದು ಸಾಥ್‌ ನೀಡಿದರು. ಸಿಮೆಂಟ್‌, ಜೆಲ್ಲಿ ಮಿಕ್ಸರ್ ಯಂತ್ರ ಹಾಗೂ ಇತರೆ ವಾಹನಗಳು ನಾಲ್ಕು ಕಿ.ಮೀ. ಸಂಚರಿಸಿ, ಎಲ್ಲೆಲ್ಲಿ ಗುಂಡಿಗಳು ಇದ್ದವೋ ಅಲ್ಲಿಗೆ ಸಿಮೆಂಟ್‌, ಜೆಲ್ಲಿ ಮಿಕ್ಸರ ಸುರಿದು ಸಮತಟ್ಟು ಮಾಡಲಾಯಿತು.ಕೆಲವೆಡೆ ಬಿದ್ದಿದ್ದ ಆಳುದ್ದದ ಗುಂಡಿಗಳನ್ನು ಮುಚ್ಚಿಸಲಾಯಿತು. ಈ ಸಂದರ್ಭದಲ್ಲಿ ದೊರೆಸ್ವಾಮಿ ಸ್ವತಃ ಸಲಿಕೆಯನ್ನು ಹಿಡಿದು ಜೆಲ್ಲಿ, ಸಿಮೆಂಟ್‌ ಮಿಕ್ಸರ್‌ಗಳನ್ನು ಎಳೆದು ಗುಂಡಿಗಳಿಗೆ ಸುರಿದರು. ಒಟ್ಟಾರೆ ಇವರ ಈ ಕಾರ್ಯದಿಂದ ಬರೋಬ್ಬರಿ ನಾಲ್ಕು ಕಿ.ಮೀ.ರಸ್ತೆ ದುರಸ್ತಿ ಕಾಣುವಂತಾಯಿತು. ಈ ಕೆಲಸಕ್ಕಾಗಿ ಕರೆಸಿಕೊಂಡಿದ್ದ ಕೂಲಿ ಕಾರ್ಮಿಕರಿಗೆ ತಮ್ಮಸ್ವಂತ ಹಣ ನೀಡಿದರು. ರಸ್ತೆ ದುರಸ್ತಿ ಜೊತೆಗೆ ಕಾರ್ಮಿಕರಿಗೆಕೆಲಸ ಸಿಕ್ಕಿದಂತಾಗಿದೆ.

Advertisement

ಇದನ್ನೂ ಓದಿ :ಪ್ರಧಾನಿ ಮೋದಿಯನ್ನು ಕೊಲೆ ಮಾಡುವುದಾಗಿ ದೆಹಲಿ ಪೊಲೀಸರಿಗೆ ಬೆದರಿಕೆ ಕರೆ : ಆರೋಪಿಯ ಬಂಧನ

ಇದೀಗ ವಾಹನ ಸವಾರರು ಯಾವುದೇ ಕಿರಿಕಿರಿ ಇಲ್ಲದೇ ಸುಗಮವಾಗಿ ವಾಹನಗಳನ್ನು ಓಡಿಸುತ್ತಿದ್ದಾರೆ. ಎಚ್‌.ಡಿ.ಕೋಟೆ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೊರೆಸ್ವಾಮಿ ಅಂತಹ ಜನಸ್ನೇಹಿ ಅಪರೂಪದ ಪೊಲೀಸ್‌ ಅಧಿಕಾರಿ ನಮ್ಮ ತಾಲೂಕಿಗೆ ಆಗಮಿಸಿರುವುದೇ ನಮ್ಮ ಪುಣ್ಯವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಾಜಮುಖಿ ಸೇವೆ: ಎಎಸ್‌ಐ ದೊರೆಸ್ವಾಮಿ ಅವರು ತಾಲೂಕಿನ ಇಬ್ಬರು ಅನಾಥ ಹೆಣ್ಣುಮಕ್ಕಳನ್ನು ದತ್ತು ಪಡೆದು ಅವರ ವಿದ್ಯಾಭ್ಯಾಸದ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಆಹೆಣ್ಣುಮಕ್ಕಳ ಮನೆಯನ್ನು ಸ್ವಂತ ಹಣದಿಂದ ನವೀಕರಣಗೊಳಿಸಿದ್ದಾರೆ. ಜೊತೆಗೆ ಕೋವಿಡ್, ಲಾಕ್‌ ಡೌನ್‌ ಅವಧಿಯಲ್ಲಿ ಬಡವರಿಗೆ ಆಹಾರ್‌ ಕಿಟ್‌, 30 ಸಾವಿರಕ್ಕೂ ಅಧಿಕ ಮಾಸ್ಕ್ಗಳನ್ನು ವಿತರಿಸಿದ್ದಾರೆ. ಅಲ್ಲದೇ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ನೀಡಿದ್ದಾರೆ.  ಇವರ ಜನಸೇವೆಯನ್ನು ಮೆಚ್ಚಿಕೊಂಡಿರುವ ತಾಲೂಕಿನಲ್ಲಿ ಸಹಸ್ರಾರು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಬೇರೆ ತಾಲೂಕಿನಲ್ಲೂ ಕೂಡ ಅಭಿಮಾನಿಗಳನ್ನು ಹೊಂದಿದ್ದಾರೆ.

ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ವಾಹನಗಳು ಅಪಘಾತಕ್ಕೀಡಾಗಿ ಸಾವು ನೋವು ಸಂಭವಿಸಿರುವುದನ್ನು ಕೊಂಚ ತಡೆಗಟ್ಟುವ ನಿಟ್ಟಿನಲ್ಲಿಈ ದಿನ ರಸ್ತೆಯಲ್ಲಿನ ಸಣ್ಣಸಣ್ಣ ಗುಂಡಿಗಳನ್ನು ತೇಪೆ ಹಾಕಿ ಮುಚ್ಚಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡುತ್ತಿದ್ದೇನೆ. ರಸ್ತೆಅವ್ಯವಸ್ಥೆಯಿಂದ ಅಪಘಾತಗಳು ಸಂಭವಿಸಿದ್ದನ್ನೂಕಂಡಿದ್ದೇನೆ.ಹೀಗಾಗಿ ತಾನೇಖುದ್ದಾಗಿ ರಸ್ತೆಗೆಇಳಿದು ಸ್ವಂತಖರ್ಚಿನಿಂದ 4 ಕಿ.ಮೀ. ರಸ್ತೆಯನ್ನು ದುರಸ್ತಿಪಡಿಸಿದ್ದೇನೆ ದೊರೆಸ್ವಾಮಿ, ಎಚ್‌.ಡಿ.ಕೋಟೆ ಠಾಣೆ ಪಿಎಸ್‌ಐ

 

-ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next