Advertisement

ಮಳೆಬಿಲ್ಲು: ಕರಗದೆ ಉಳಿದ ಬಣ್ಣ

10:24 PM Jul 31, 2021 | Team Udayavani |

ವ್ಯಕ್ತಿತ್ವ ಅಮರ:

Advertisement

ಹಣವಿದ್ದರೆ ಆಸ್ತಿ ಸಂಪಾದಿಸಬಹುದು. ತಕ್ಕ ಮಟ್ಟಿಗೆ ಜನರನ್ನು ಸಂಪಾದಿಸಬಹುದು. ಹಣದ ಹಿಂದೆ ಬಿದ್ದ ಜನರು ಇಲ್ಲವೇ ಇಲ್ಲ  ಎಂದು ಪ್ರಮಾಣ ಮಾಡಲು ಸಾಧ್ಯವಿಲ್ಲ. ಆದರೆ ವ್ಯಕ್ತಿಯ ವ್ಯಕ್ತಿತ್ವ ಹಣದಿಂದ ಸಂಪಾದಿಸಲು ಸಾಧ್ಯವಿಲ್ಲ. ಯೋಗ್ಯತೆ, ಅರ್ಹತೆ ಅಷ್ಟು ಸುಲಭವಾಗಿ ಬರಲಾರದು. ಅದನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನ ಬೇಕು. ಅವಿರತ ಪರಿಶ್ರಮ, ಛಲ ಇರಬೇಕು.  ಹಣ ಸಂಪಾದಿಸಲು ಕಷ್ಟ ಪಡಲೇ ಬೇಕು. ಆದರೆ ಯಾವ ಮಾರ್ಗದಲ್ಲಿ ಹಣ ಸಂಪಾದಿಸುತ್ತೇವೆ ಎಂಬುದು ಮುಖ್ಯ.  ಈಗ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ವ್ಯಕ್ತಿತ್ವ ಹಣ ನೀಡಬಲ್ಲುದೇ. ಖಂಡಿತ ಇಲ್ಲ. ಮಹಾನ್‌ ವ್ಯಕ್ತಿಗಳು ಪ್ರಸಿದ್ಧರಾದದ್ದು ತಮ್ಮ ವ್ಯಕ್ತಿತ್ವದಿಂದ. ಉತ್ತಮ ವ್ಯಕ್ತಿತ್ವದಿಂದ ಪ್ರಸಿದ್ಧಿ ಪಡೆಯುವುದು ಸಾಧಕನ ಸಾಧನೆ. ಹಣದ ಮಹಿಮೆಯಿಂದ ಪ್ರಸಿದ್ಧನಾದ ವ್ಯಕ್ತಿಯಲ್ಲಿ ಪರಿಪೂರ್ಣ ವ್ಯಕ್ತಿತ್ವ ಇರಬಹುದು ಅಥವಾ ಇಲ್ಲದಿರಬಹುದು. ಹಣವೇ ವ್ಯಕ್ತಿತ್ವದ ಮೂಲ ಎಂಬುದು ಭ್ರಮೆ. ನಾನು ಹೇಳ ಹೊರಟಿರುವುದು ಇಷ್ಟೇ. ಜೀವನೋಪಾಯಕ್ಕೆ ಶ್ರಮದಿಂದ ಹಣ ಸಂಪಾದಿಸುತ್ತೇವೆ ಹಾಗೆಯೇ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ವ್ಯಕ್ತಿತ್ವವಿಲ್ಲದ ವ್ಯಕ್ತಿ ಎಷ್ಟು ಹಣ ಸಂಪಾದಿಸಿದರೂ ಅಂತಹವರು ಸತ್ತ ಶವದ ಜತೆಯಲ್ಲಿ ಹಣವಿಟ್ಟು ರೋಧಿಸಿದಂತೆ.ಅಶೋಕ್‌ ಕುಮಾರ್‌ ಶೆಟ್ಟಿ

ಗೆಳೆತನದಲ್ಲಿ  ಪ್ರತಿಫ‌ಲಾಪೇಕ್ಷೆ ಇರುವುದಿಲ್ಲ :

ಹಣ, ಪ್ರಾಯ, ಸೌಂದರ್ಯ, ಶ್ರೀಮಂತಿಕೆ ಅಥವಾ ವಿದ್ಯೆಯು ಪವಿತ್ರವಾದ ಗೆಳೆತನದ ಬೇಡಿಕೆಯಲ್ಲ. ಅದು ಕೇವಲ ಮನಸಿನ ಭಾವನೆಗಳನ್ನು, ಹೃದಯದ ಆರೈಕೆಯನ್ನು ಯಾವ ಬೇಡಿಕೆ ಇಲ್ಲದೆ ಸ್ವೀಕಾರ ಮಾಡುವಂತದ್ದಾಗಿದೆ. ಇದು ನನಗಿಷ್ಟವಾದ ಸಂದೇಶ. ನಿಜವಾದ ಗೆಳೆತನ ಯಾರಿಗೂ, ಯಾರಲ್ಲೂ, ಯಾವ ಹೊತ್ತಿನಲ್ಲೂ ಆಗಬಹುದು. ಅದಕ್ಕೆ ಮೇಲೆ ತಿಳಿಸಿದಂತಹ ಮಾನದಂಡಗಳ ಬೇಡಿಕೆ ಅವಶ್ಯಕತೆ ಇರುವುದಿಲ್ಲ. ಪ್ರತಿಫ‌ಲಾಪೇಕ್ಷೆಯಿಲ್ಲದೆ ಇರುವ ಗೆಳತನ ಪವಿತ್ರ, ಪರಿಶುದ್ಧವಾಗಿರುತ್ತದೆ. ಅಂಜಲಿ ಎನ್‌.ಪಿ.

ಕಷ್ಟಗಳನ್ನು  ಎದುರಿಸಲು ಕಲಿಯೋಣ :

Advertisement

“ಬಯಸಿದ್ದೆಲ್ಲ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತ್ತಿರಲಿಲ್ಲ. ಅನಿಸಿದ್ದೆಲ್ಲ ಹೇಳುವಂತಿದ್ದರೆ ಮೌನಕ್ಕೆ ಅರ್ಥ ಇರುತ್ತಿರಲಿಲ್ಲ. ತಪ್ಪುಗಳೇ ಆಗದಿದ್ದರೆ ಹೊಸ ಪ್ರಯತ್ನ ಪಡುತ್ತಿರಲಿಲ್ಲ. ಕಣ್ಣೀರೆ ಬರದಿದ್ದರೆ ನಗುವಿನ ಆನಂದ ತಿಳಿಯುತ್ತಿರಲಿಲ್ಲ. ಕಷ್ಟಗಳೇ ಎದುರಾಗದಿದ್ದರೆ ಜೀವನದ ಮೌಲ್ಯ ಗೊತ್ತಾಗುತ್ತಿರಲಿಲ್ಲ.’ ಹೀಗೊಂದು ಸಂದೇಶ ವಾಟ್ಸ್‌ಆ್ಯಪ್‌ನಲ್ಲಿ ಬಂದಿತ್ತು. ಎಷ್ಟೊಂದು ಅರ್ಥಪೂರ್ಣವಾಗಿದೆ ಎಂದೆನಿಸಿತ್ತು. ಎಲ್ಲವೂ ಸುಲಭವಾಗಿ ಸಿಗುವಂತಿದ್ದರೆ ನಮಗೆ ಪರಿಶ್ರಮದ ಬೆಲೆಯೇ ಗೊತ್ತಾಗುತ್ತಿರಲಿಲ್ಲ. ಅದೇ ರೀತಿ ಬಯಸಿದ್ದೆಲ್ಲ ಸಿಕ್ಕರೆ  ನಿಜವಾದ ನಮ್ಮ ಇಷ್ಟ ಯಾವುದು, ಅದರ ಮಹತ್ವ ಏನು ಎನ್ನುವುದರ ಅರಿವು ನಮಗಿರುವುದಿಲ್ಲ. ತಪ್ಪುಗಳನ್ನೇ ಮಾಡದೆ ಸಾಧನೆಯ ಶಿಖರವನ್ನು ಏರಲು ಸಾಧ್ಯವಿಲ್ಲ. ಆದರೆ ಎಲ್ಲವೂ ಸುಲಲಿತವಾಗಿದ್ದರೆ, ಸುಲಭವಾಗಿ ಇದ್ದರೆ ಜೀವನದ ಮೌಲ್ಯ ಹೇಗೆ ನಮಗೆ ತಿಳಿಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇಲ್ಲಿ ಪ್ರೀತಿ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅವರಿಗೆ ಒಂದು ರೀತಿಯಲ್ಲಿ ಆಕರ್ಷಕ ಜಗತ್ತಿನ ಪರಿಚಯ ಮಾಡುತ್ತಿದ್ದಾರೆ. ಇಲ್ಲಿ ಕಷ್ಟವೆನ್ನುವುದಿಲ್ಲ ಎನ್ನುವ ಕಲ್ಪನೆಯನ್ನು ಬಿತ್ತುತ್ತಿದ್ದಾರೆ. ಇದರಿಂದ ಮಕ್ಕಳು ಸಣ್ಣಪುಟ್ಟ ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕುತ್ತಾರೆ. ಅಲ್ಲದೇ ಸೋಲು ಉಂಡಾಗ ಜೀವನವನ್ನೇ ಕೊನೆಗೊಳಿಸುವ ಮಟ್ಟಕ್ಕೆ ತಲುಪಿ ಬಿಡುತ್ತಾರೆ. ಇಲ್ಲಿ ತಪ್ಪಾಗಿದ್ದು ಯಾರಿಂದ ಎಂದು ಎಲ್ಲರೂ ಯೋಚಿಸಬೇಕಿದೆ. ಮುಂದಿನ ಪೀಳಿಗೆಗೆ ಆಕರ್ಷಕ ಜಗತ್ತನ್ನಲ್ಲ. ಜೀವನದ ಕಷ್ಟಗಳನ್ನು ಅರಿಯಲು ಕಲಿಸಬೇಕಿದೆ. ಆಶಾ, ಮಂಗಳೂರು

ಸಾಮಾಜಿಕ ಮಾಧ್ಯಮಗಳು ನಮ್ಮ ಇಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ದಿನಕ್ಕೆ ನೂರಾರು, ಸಾವಿರಾರು ಸಂದೇಶಗಳು ವಾಟ್ಸ್‌ ಆ್ಯಪ್‌, ನಮ್ಮ ಫೇಸ್‌ಬುಕ್‌ ವಾಲ್‌ಗ‌ಳಲ್ಲಿ ಹರಿದಾಡುತ್ತವೆ. ನೀವು ನಿಮಗೆ ಖುಷಿಕೊಟ್ಟ ಮೆಸೇಜ್‌ಗಳನ್ನು 76187 74529 ಈ ಸಂಖ್ಯೆಗೆ ವಾಟ್ಸ್‌ ಆ್ಯಪ್‌   ಮಾಡಿ. ಸೂಕ್ತ ಬರಹಗಳನ್ನು ಪ್ರಕಟಿಸುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next