ಹುಬ್ಬಳ್ಳಿ: ಎರಡನೇ ವಾರದ ವೀಕೆಂಡ್ ಕರ್ಫ್ಯೂಗೆ ನಗರದಲ್ಲಿ ನಿರೀಕ್ಷಿತ ಬೆಂಬಲ ದೊರೆಯದೆ ಜನರು ಅಲ್ಲಲ್ಲಿ ಓಡಾಡುತ್ತಿದ್ದುದು, ಅನೇಕ ಕಡೆ ಅಂಗಡಿ-ಮಾರಾಟ ಮಳಿಗೆ, ಹೋಟೆಲ್‌ಗಳು ತೆರೆದಿದ್ದುದು ಕಂಡುಬಂತು. ಬಟ್ಟೆ ಮಾರುಕಟ್ಟೆ, ಬಾಂಡೆ ಸಾಮಗ್ರಿಗಳು, ಆಟೋಮೊಬೈಲ್, ಚಿನ್ನಾಭರಣ ಮಳಿಗೆಗಳು ಬಂದ್ ಆಗಿದ್ದರೂ ಕಿರಾಣಿ ಅಂಗಡಿ, ತರಕಾರಿ-ಹಣ್ಣು ಮಾರಾಟ, ಕೆಲವೆಡೆ ಹೋಟೆಲ್‌ಗಳು ತೆರೆದಿದ್ದವು.
ಚನ್ನಮ್ಮ ವೃತ್ತ, ಕ್ಲಬ್ ರಸ್ತೆ, ಸ್ಟೇಶನ್ ರಸ್ತೆ, ರೈಲ್ವೆ ನಿಲ್ದಾಣ, ಕೊಪ್ಪಿಕರ ರಸ್ತೆ, ವಿದ್ಯಾನಗರ, ಗೋಕುಲ ರಸ್ತೆ, ಕೊಯಿನ್ ರಸ್ತೆ, ದುರ್ಗದ ಬಯಲು, ಕಾರವಾರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಕೇಶ್ವಾಪುರ ಸರ್ವೋದಯ ವೃತ್ತ, ಹೊಸೂರ ವೃತ್ತ, ಪಿ.ಬಿ. ರಸ್ತೆ, ಮೂರುಸಾವಿರ ಮಠದ ರಸ್ತೆ, ದಾಜೀಬಾನ ಪೇಟೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.
ಪರ ಊರುಗಳಿಗೆ ತೆರಳುವ ಹೆಚ್ಚಿನ ಜನರು ಹಳೇ ಬಸ್ ನಿಲ್ದಾಣ, ಆಟೋ ನಿಲ್ದಾಣ, ಬಿಆರ್‌ಟಿಎಸ್ ಬಸ್ ನಿಲ್ದಾಣಗಳು, ಚನ್ನಮ್ಮ ವೃತ್ತ, ಹಳೇಹುಬ್ಬಳ್ಳಿ ಇಂಡಿ ಪಂಪ್, ಗಬ್ಬೂರ ಬೈಪಾಸ್ ಸೇರಿದಂತೆ ನಗರದ ವಿವಿಧ ಬಸ್ ನಿಲ್ದಾಣಗಳಲ್ಲಿ ಕಂಡು ಬಂದರು. ಮಕರ ಸಂಕ್ರಮಣದ ರಜೆ ಹಿನ್ನೆಲೆಯಲ್ಲಿ ಸರಕಾರಿ ಕಚೇರಿ, ಬ್ಯಾಂಕ್, ಶಾಲಾ-ಕಾಲೇಜುಗಳು ಬಂದ್ ಆಗಿದ್ದವು. ಕಳೆದ ವಾರದ ವಿಕೇಂಡ್ ಕರ್ಫ್ಯೂಗೆ ಹೋಲಿಸಿದರೆ ಈ ವಾರ ಬಾರದಾನ ಸಾಲು ತರಕಾರಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಿತ್ತು.
ಜನತಾ ಬಜಾರ ಮಾರುಕಟ್ಟೆಯಲ್ಲಿ ಕೆಲವೊಂದಿಷ್ಟು ಹಣ್ಣು ಮಾರಾಟಗಾರರು ಅಂಗಡಿ ತೆರೆದಿದ್ದರು. ಇನ್ನು ನಗರದ ಕೆಲವೊಂದು ಹೋಟೆಲ್‌ಗಳು ಪಾರ್ಸಲ್ ಸೇವೆ ನೀಡಿದರೆ, ಇನ್ನುಳಿದವು ಬಾಗಿಲು ಹಾಕಿದ್ದವು. ಪ್ರಯಾಣಿಕರ ಸಂಖ್ಯೆ ಹೆಚ್ಚಳ ಇದ್ದಿದ್ದರಿಂದ ಶನಿವಾರ ಸಾರಿಗೆ ಸಂಸ್ಥೆಯ ಬಸ್, ಬಿಆರ್‌ಟಿಎಸ್ ಸೇರಿದಂತೆ ವಾಹನ ಸಂಚಾರ ಹೆಚ್ಚಳವಾಗಿತ್ತು. ಬಾಂಬ್ ನಿಷ್ಕಿÅಯ ದಳದಿಂದ ನಿಯಮಿತದಂತೆ ಶನಿವಾರ ಕಿತ್ತೂರ ಚನ್ನಮ್ಮ ವೃತ್ತ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಯಿತು. ಮಹಾನಗರ ಪೊಲೀಸ್ ಆಯುಕ್ತ ಲಾಭೂ ರಾಮ ಹಾಗೂ ಡಿಸಿಪಿ ಸಾಹಿಲ್ ಬಾಗ್ಲಾ ನಗರ ಪ್ರದಕ್ಷಿಣೆ ಹಾಕಿ ಬಂದೋಬಸ್ತ್ ಪರಿಶೀಲಿಸಿದರು.