ಹುಬ್ಬಳ್ಳಿ: ಕೋವಿಡ್ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ರಾಜ್ಯ ಸರಕಾರ ಘೋಷಿಸಿರುವ ರವಿವಾರದ ಲಾಕ್ ಡೌನ್‌ಗೆ ನಗರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಅಗತ್ಯ ವಸ್ತುಗಳ ವ್ಯಾಪಾರ ಹೊರತುಪಡಿಸಿ ಉಳಿದೆಲ್ಲವೂ ಬಹುತೇಕ ಸ್ಥಗಿತಗೊಂಡಿದ್ದವು.
ನಗರದ ಪ್ರಮುಖ ರಸ್ತೆ, ಮಾರುಕಟ್ಟೆ, ಆಟೋ ರಿಕ್ಷಾ, ಬಸ್‌ಗಳು ಸೇರಿದಂತೆ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಿದ್ದರು. ಪಾರ್ಸಲ್ ನೀಡುವಂತಹ ದೊಡ್ಡ ಹೋಟೆಲ್‌ಗಳನ್ನು ಹೊರತುಪಡಿಸಿ ಸಣ್ಣಪುಟ್ಟ ಹೋಟೆಲ್ ಗಳು ಮುಚ್ಚಿದ್ದವು. ತುರ್ತು ಕೆಲಸ ನಿಮಿತ್ತ ಹೊರಬಂದವರನ್ನು ಹೊರತುಪಡಿಸಿ ವಾಹನ ಹಾಗೂ ಜನರ ಸಂಚಾರ ಇರಲಿಲ್ಲ. ಅಲ್ಲೊಂದು ಇಲ್ಲೊಂದು ದ್ವಿಚಕ್ರ ವಾಹನ ಓಡಾಟ ಹಾಗೂ ವಾಹನಗಳಷ್ಟೇ ರಸ್ತೆಗಿಳಿದಿದ್ದವು.
ಸಾರ್ವಜನಿಕರ ಬೆಂಬಲ: ಸೋಂಕು ತಡೆಗೆ ಲಾಕ್‌ಡೌನ್ ಪರಿಣಾಮಕಾರಿ ಔಷಧಿ ಎನ್ನುವುದು ಸಾರ್ವಜನಿಕರ ಅರಿವಿಗೆ ಬಂದಂತಿದ್ದು, ರವಿವಾರದ ಲಾಕ್‌ಡೌನ್ ಗೆ ಬಹುತೇಕ ಸ್ಪಂದನೆ ವ್ಯಕ್ತವಾಗಿದೆ. ಹಳೇ ಹುಬ್ಬಳ್ಳಿ ಕೆಲ ಭಾಗದಲ್ಲಿ ಒಂದಿಷ್ಟು ಜನರ ಓಡಾಟ ಹೊರತುಪಡಿಸಿದರೆ ನಗರದ ಬಹುತೇಕ ಪ್ರದೇಶಗಳಲ್ಲಿ ಜನ ಸಂಚಾರ ಇರಲಿಲ್ಲ. ಆಯಾ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ರಸ್ತೆಗಳಲ್ಲಿ ವಾಹನಗಳನ್ನು ತಡೆದು ತಪಾಸಣೆ ಮಾಡಲಾಯಿತು. ಕೆಲವೆಡೆ ಅನಗತ್ಯವಾಗಿ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರೆ, ಇನ್ನು ಕೆಲವೆಡೆ ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದರು. ಪೊಲೀಸರು ಕೂಡ ಸೋಂಕಿನ ಭಯದಿಂದ ಮೊದಲಿನಂತೆ ಸವಾರರನ್ನು ತಡೆದು ವಿಚಾರಣೆ ಮಾಡುವ ಬದಲು ಮುನ್ನೆಚ್ಚರಿಕಾ ಕ್ರಮವಾಗಿ ದೂರದಿಂದಲೇ ಲಾಠಿ ತೋರಿಸಿ ಓಡಿಸುತ್ತಿದ್ದುದು ಕಂಡು ಬಂತು.
ಕೆಲವೆಡೆ ಕಿರಾಣಿ ಅಂಗಡಿ, ಮಾಂಸದಂಗಡಿ ಕಾರ್ಯನಿರ್ವಹಿಸಿದರೆ ಬಹುತೇಕ ಕಡೆಗಳಲ್ಲಿ ಮಾಲೀಕರು ಸ್ವಯಂಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿದ್ದರು. ಇನ್ನೂ ಕೆಲವರು ಬೆಳಗ್ಗೆ ಒಂದೆರಡು ಗಂಟೆ ಮಾತ್ರ ಕಾರ್ಯನಿರ್ವಹಿಸಿ ಬಾಗಿಲು ಹಾಕಿದರು. ಕೆಲವೆಡೆ ಪೊಲೀಸರು ಮಾಂಸದ ಅಂಗಡಿಗಳನ್ನು ಮುಚ್ಚಿಸಿರುವ ಘಟನೆಗಳು ಕೂಡ ನಡೆದವು. ಡಿಸಿ ನಿತೇಶ ಪಾಟೀಲ, ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ನಗರದ ವಿವಿಧೆಡೆ ಆಗಮಿಸಿ ಲಾಕ್‌ಡೌನ್ ಪರಿಸ್ಥಿತಿ ಪರಿಶೀಲಿಸಿದರು.