Advertisement
ಮಳೆ ಕೊರತೆಯಿಂದ ಕೃಷಿ ಮಾಡಲು ನೀರಿನ ಅಭಾವ ಉಂಟಾಗುತ್ತಿರುವುದಲ್ಲದೇ ಸಾವಿರಾರು ಅಡಿಗಳ ವರೆಗೆ ಅಂತರ್ಜಲ ಕುಸಿದ ಪರಿಣಾಮ ಕೇಂದ್ರ ಸರ್ಕಾರ ದೇಶ ವ್ಯಾಪಿ ಜಲಶಕ್ತಿ ಅಭಿಯಾನ ವನ್ನು ಜಾರಿಗೆ ತಂದಿದೆ. ಇದೇ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಲಮೃತ ಯೋಜನೆ ಎಂಬ ಹೆಸರಿನಲ್ಲಿ ಕೆರೆ-ಕಟ್ಟೆ, ಕಲ್ಯಾಣಿ ಹೂಳೆತ್ತುವ ಕೆಲಸಕ್ಕೆ ಮುಂದಾಗಿದ್ದು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ.
Related Articles
Advertisement
42 ಕಲ್ಯಾಣಿ ಸ್ವಚ್ಛತೆ: ತಾಲೂಕಿನ 41 ಗ್ರಾಮ ಪಂಚಾಯಿತಿಯಿಂದ ಸುಮಾರು 65 ಪುರಾತನ ಕಲ್ಯಾಣಿಯನ್ನು ಗುರುತಿಸಿದ್ದು ಅವುಗಳಲ್ಲಿ 42 ಕಲ್ಯಾಣಿಗಳನ್ನು ಗ್ರಾಮಸ್ಥರ ಹಾಗೂ ಶಾಲಾ ವಿದ್ಯಾರ್ಥಿಗಳ ಸಹಾಯೊಂದಿಗೆ ಶ್ರಮದಾನದ ಮಾಡುವ ಮೂಲಕ ಸ್ವಚ್ಛತೆ ಮಾಡಲಾಗಿದೆ. ಉಳಿದ ಕಲ್ಯಾಣಿಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ಶ್ರಮದಾನ ಮಾಡುವ ಮೂಲಕ ಶೀಘ್ರದಲ್ಲಿ ಸ್ವಚ್ಛತೆ ಮಾಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ ಮುಂದಾಗಲಿದ್ದಾರೆ.
ಪಾಳು ಬಿದ್ದ ಜಲಮೂಲಗಳು: ಶತಮಾನದ ಇತಿಹಾಸ ಹೊಂದಿರುವ ಕಲ್ಯಾಣಿಗಳಲ್ಲಿ ನೀರು ಸಂಗ್ರಹವಾಗುತ್ತಿತ್ತು. ಈ ನೀರನ್ನು ಗ್ರಾಮಸ್ಥರು ಕುಡಿಯಲು, ಧಾರ್ಮಿಕ ಕಾರ್ಯಕ್ರಮಗಳ ಬಳಕೆಗೆ ಉಪಯೋಗಿಸುತ್ತಿದ್ದರು. ಮಳೆಗಾಲದಲ್ಲಿ ಕಲ್ಯಾಣಿಯ ತುಂಬಾ ನೀರು ಶೇಖರಣೆಯಾಗಿ ಅಂತರ್ಜಲ ವೃದ್ಧಿ ಆಗುತ್ತಿದ್ದರಿಂದ ಕಲ್ಯಾಣಿಗೆ ಸಮೀಪದಲ್ಲಿನ ಕೊಳವೆ ಬಾವಿಗಳಲ್ಲಿ ಉತ್ತಮವಾಗಿ ನೀರು ದೊರೆಯುತ್ತಿತ್ತು. ಕೊಳವೆ ಬಾವಿಯಲ್ಲಿ ನೀರು ದೊರೆಯುತ್ತಿದ್ದರಿಂದ ಗ್ರಾಮಸ್ಥರು ಕಲ್ಯಾಣಿಗಳ ಕಡೆ ಗಮನ ನೀಡದೇ ಇದುದ್ದರಿಂದ ಎಲ್ಲಾ ಕಲ್ಯಾಣಿಗಳು ಪಾಳು ಬಿದ್ದವು.
ಕಸದ ತೊಟ್ಟಿಯಾಗಿವೆ: ಹಲವು ವರ್ಷಗಳಿಂದ ಗ್ರಾಮಗಳಲ್ಲಿರುವ ಪುರಾತನ ಕಲ್ಯಾಣಿಗಳು ಪಾಳು ಬಿದಿದ್ದರಿಂದ ಪಾರ್ಥೇನಿಯಂ ಮೊದಲಾದ ಗಿಡಗಳು ಬೆಳೆಯಲಾರಂಭಿಸಿದವು. ಇದೇ ಕಲ್ಯಾಣಿಗಳಿಗೆ ಕೆಲವರು ಕಸ ಹಾಗೂ ಇತರ ಅನುಪಯುಕ್ತ ವಸ್ತುವನ್ನು ತುಂಬಿದ್ದರಿಂದ ಕಲ್ಯಾಣಿಗಳು ಸಂಪೂರ್ಣ ವಾಗಿ ಹಾಳಾದವು. ಮಳೆಗಾಲದಲ್ಲಿ ನೀರು ಶೇಖರಣೆ ಆಗಬೇಕಿದ್ದ ಕಲ್ಯಾಣಿಗಳು ಗ್ರಾಮದ ಕಸದ ತೊಟ್ಟಿಗಳಾಗಿ ಮಾರ್ಪಟ್ಟವು.
ಅಂತರ್ಜಲ ವೃದ್ಧಿಗೆ ಶ್ರಮಿಸಿ: ಯಾವಾಗ ಮಳೆ ಕಡಿಮೆಯಾಯಿತೋ ಅಂತರ್ಜಲದ ಕೊರೆತೆಯಿಂದ ಯಾವಾಗ ಕೊಳವೆ ಬಾವಿಗಳು ನೀರು ದೊರೆ ಯುವುದು ಸ್ಥಗಿತವಾಯಿತು. ಆಗ ಕಲ್ಯಾಣಿಗಳ ಕಡೆ ಗ್ರಾಮಸ್ಥರು ಮುಖ ಮಾಡಿದರು. ಇದೇ ವೇಳೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಜಲಸಂರಕ್ಷಣಾ ಅಭಿಯಾನ ಪ್ರಾರಂಭಿಸಿ ಕಲ್ಯಾಣಿಗಳು ಕೊಳವೆ ಬಾವಿಗೆ ಪೂರಕವಾಗಿ ನೀರಿನ ಸೆಲೆ ನೀಡುತ್ತವೆ ಇವುಗಳನ್ನು ಉಳಿಸದಿದ್ದರೆ ಮುಂದೆ ಗಂಡಾಂತರ ಕಾದಿದೆ ಎಂದು ತಿಳಿಸಿದ್ದರಿಂದ ಎಚ್ಚೆತ್ತ ಸಾರ್ವಜನಿಕರು ಮುಂದೆ ಬಂದು ಶ್ರಮದಾನ ಮೂಲಕ ಕಲ್ಯಾಣಿ ಸ್ವಚ್ಛತೆಗೆ ಮುಂದಾಗುತ್ತಿದ್ದಾರೆ.
● ಶಾಮಸುಂದರ್ ಕೆ.ಅಣ್ಣೇನಹಳ್ಳಿ