Advertisement

ಮಹಾ ಮಳೆ ಪರಿಣಾಮ: ಏರ್‌ಪೋರ್ಟ್‌ ಆವರಣ ಗೋಡೆ ಬಿರುಕು

03:42 PM Jun 06, 2018 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಹೊರಭಾಗದ ಬೃಹತ್‌ ತಡೆಗೋಡೆಯು ಬಿರುಕು ಬಿಟ್ಟಿದ್ದು, ಕೆಳಭಾಗದ ಗ್ರಾಮಸ್ಥರಲ್ಲಿ ಭೂಕುಸಿತದ ಆತಂಕ ಮೂಡಿಸಿದೆ. 
ಆದರೆ ಇದರಿಂದ ರನ್‌ವೇಗೆ ಅಥವಾ ವಿಮಾನ ಹಾರಾಟಕ್ಕೆ ಅಪಾಯ ಇಲ್ಲ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಕಳೆದ ವಾರ ಸುರಿದ ಭಾರೀ ಮಳೆಗೆ ರನ್‌ವೇ ಭಾಗದಿಂದ ಏಕಾಏಕಿ ನೀರು ಹರಿದ ರಭಸಕ್ಕೆ ಈ ಬಿರುಕು ಉಂಟಾಗಿದೆ. ಮತ್ತೆ ಭಾರೀ ಮಳೆ ಬಂದರೆ ಕುಸಿಯಲೂ ಬಹುದು. ವಿಮಾನ ನಿಲ್ದಾಣದ ಎಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ ತಡೆಗೋಡೆ ದುರಸ್ತಿಗೆ ಮುಂದಾಗಿದ್ದಾರೆ.

ಈ ಕೆಳಗಿನ ಪ್ರದೇಶದಲ್ಲಿ ಕಂದಾವರ ಗ್ರಾ.ಪಂ.ನ ಕೊಳಂಬೆ ವಿಟ್ಲಬೆಟ್ಟು ಊರಿದ್ದು, ರನ್‌ವೇ ಕಡೆಯಿಂದ ಹರಿದ ನೀರಿಗೆ 8 ಮನೆಗಳಿಗೆ ತೀವ್ರಹಾನಿ ಆಗಿತ್ತು. ಮಣ್ಣಿನ ರಸ್ತೆ ಸಂಪೂರ್ಣ ಕೊಚ್ಚಿಹೋಗಿತ್ತು. 

ವಿಟ್ಲಬೆಟ್ಟು ಕಡೆಯಿಂದ ರನ್‌ವೇ ಹೊರಭಾಗದಲ್ಲಿ 20 ಮೀ. ಉದ್ದ ಹಾಗೂ 150 ಮೀ. ಅಗಲದ ತಡೆಗೋಡೆಯನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಇಲ್ಲಿಯ ಭೌಗೋಳಿಕ ಸ್ಥಿತಿ ಇಳಿಜಾರಾಗಿದ್ದು, ಮಣ್ಣು ಕುಸಿಯದಿರಲು ಇದನ್ನು ನಿರ್ಮಿಸಲಾಗಿದೆ. ಆದರೆ ಸ್ಥಳ ತಗ್ಗಾಗಿರುವುದರಿಂದ ಮಳೆನೀರು ಈ ಕಡೆಗೆ ಹರಿಯುತ್ತದೆ. ಕಳೆದ ವರ್ಷವೂ ಜಾಸ್ತಿ ನೀರು ಹರಿದು ಕೊಳಂಬೆ ಗ್ರಾಮ ಸಂಪರ್ಕ ರಸ್ತೆ ಹಾಳಾಗಿತ್ತು. ಸಾಮಾನ್ಯವಾಗಿ ಕೆಂಜಾರು ಹಾಗೂ ಕೊಳಂಬೆ ಕಡೆಯಿಂದ ವಿಮಾನಗಳು ಇಳಿಯಲಿದ್ದು, ಪ್ರಸ್ತುತ ಬಿರುಕು ಬಿಟ್ಟಿರುವ ಜಾಗವೂ ಈ ಭಾಗದಲ್ಲಿದೆ. 

ಬಹಳ ಎತ್ತರದಿಂದ ಮಳೆ ನೀರು ರಭಸ ವಾಗಿ ಹೊರಗೆ ಬಂದು, ಸುಮಾರು 100 ಮೀ.ನಷ್ಟು ಗುಡ್ಡದ ಮೂಲಕ ಹರಿದು ವಿಟ್ಲ ಬೆಟ್ಟು ಡಾಮರು ರಸ್ತೆಗೆ ಬಂದಿದೆ. ಅಲ್ಲಿಂದ ಶ್ರೀ ಜನಾರ್ದನ ದೇವಸ್ಥಾನದ ಮುಂಭಾಗದ 500 ಮೀ. ಉದ್ದದ ಮಣ್ಣಿನ ರಸ್ತೆಗೆ ಹರಿದು ಹಾನಿಯುಂಟು ಮಾಡಿತಲ್ಲದೇ, ಇಲ್ಲಿನ ಶಿವರಾಮ್‌ ಕುಲಾಲ್‌, ವಾಸು ಕುಲಾಲ್‌, ದೇವಪ್ಪ ಕುಲಾಲ್‌, ಸೀತಾರಾಮ ಶೆಟ್ಟಿ, ಬಾಳೆ ಹಿತ್ಲುವಿನ ದೇವಪ್ಪ ಪೂಜಾರಿ, ತಾರಾನಾಥ್‌, ಲೀಲಾವತಿ ಮನೆಗಳಿಗೆ ತೀವ್ರ ಹಾನಿ ಮಾಡಿದೆೆ. 

Advertisement

ಆತಂಕ ಬೇಡ : ನಿಲ್ದಾಣ ನಿರ್ದೇಶಕ
ವಿಮಾಣ ನಿಲ್ದಾಣದ ವ್ಯಾಪ್ತಿಯ ಬೃಹತ್‌ ಗೋಡೆ ಬಿರುಕು ಬಿಟ್ಟಿರುವುದು ನಿಜ. ಆದರೆ ಇದರಿಂದ ರನ್‌ವೇಗೆ ಅಪಾಯವಿಲ್ಲ. ಏಕೆಂದರೆ ಈ ಗೋಡೆಯು ರನ್‌ವೇಯಿಂದ ಬಹಳ ದೂರದಲ್ಲಿದೆ. ಹಾಗಾಗಿ ರನ್‌ವೇ ಅಪಾಯದಲ್ಲಿದೆ ಎಂಬ ಗಾಳಿಸುದ್ದಿಗೆ ಯಾರೂ ಕಿವಿಗೊಡಬಾರದು. ಕಳೆದ ಮಂಗಳವಾರ ಊಹಿಸದಷ್ಟು ಮಳೆಯಾದ ಪರಿಣಾಮ ತಡೆಗೋಡೆಗೆ ಹಾನಿಯಾಗಿದ್ದು, ಈಗಾಗಲೇ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಗೋಡೆ ಕುಸಿಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. 
ದುರಸ್ತಿಗೆ ತಜ್ಞರ ತಂಡವನ್ನು ನಿಯೋಜಿಸಲಾಗಿದ್ದು, ಆದಷ್ಟು ಬೇಗ ಆ ಕೆಲಸ ಪೂರ್ಣಗೊಳಿಸಲಾಗುವುದು. 
– ವಿ.ವಿ. ರಾವ್‌, ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ 

ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ಕರೆದು ಚರ್ಚಿಸಲಾಗಿದೆ. ರಸ್ತೆಗಳನ್ನು ಸರಿಪಡಿಸುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲಾಗುವುದು. ಹಾನಿಯಾದ ಮನೆಗಳಿಗೂ ಪರಿಹಾರ ನೀಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
– ನಳಿನ್‌ ಕುಮಾರ್‌ ಕಟೀಲು, ಸಂಸದ

ನೀರು ನುಗ್ಗಿ ರಸ್ತೆ ಹಾಗೂ ಮನೆಗಳಿಗೆ ಹಾನಿಯಾದ ಬಗ್ಗೆ ಸ್ಥಳೀಯರು ವಿಮಾನ ನಿಲ್ದಾಣ ಪ್ರಾಧಿಕಾರದತ್ತ ದೂರಿದರೆ, ಅಧಿಕಾರಿಗಳು ತಪ್ಪು ನಮ್ಮದಲ್ಲ ಎನ್ನುತ್ತಿದ್ದಾರೆ. ಗುರುವಾರ ಸಂಸದರ ಜತೆ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. 
– ಡಾ| ಭರತ್‌ ಶೆಟ್ಟಿ , ಮಂಗಳೂರು ಉತ್ತರ ಶಾಸಕ

ಎರಡು ಬಾವಿ ಕಣ್ಮರೆ!
ವಿಟ್ಲಬೆಟ್ಟು ವ್ಯಾಪ್ತಿಯ ಸುಮಾರು 10 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಎರಡು ಬಾವಿಗಳಲ್ಲೂ ಕಲ್ಲು, ಮಣ್ಣು, ಮರಳು ತುಂಬಿಕೊಂಡಿದೆ. ಹೊಸಮನೆ ಬಾಲಕೃಷ್ಣ ಭಂಡಾರಿ ಅವರ ಗದ್ದೆಯಲ್ಲಿರುವ 60 ಅಡಿ ಆಳದ ಬಾವಿಯದ್ದೂ ಇದೇ ಕಥೆ. 
ಲೋಡ್‌ಗಟ್ಟಲೆ ಮಣ್ಣು ಕೊಚ್ಚಿಬಂದು ಗದ್ದೆಯೂ ನಾಶವಾಗಿದೆ. 

ರಸ್ತೆಯೇ ತೋಡು!
ಶ್ರೀ ಜನಾರ್ದನ ದೇವಸ್ಥಾನದ ಮುಂಭಾಗದಲ್ಲಿ ಎಂಟು ಮನೆಗಳಿಗೆ ತೆರಳಲು ಖಾಸಗಿ ಮಣ್ಣಿನ ರಸ್ತೆಯನ್ನು 8 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಮಳೆನೀರಿನ ಪರಿಣಾಮ ಇಡೀ ರಸ್ತೆಯೇ ಬೃಹತ್‌ ತೋಡಾಗಿ ಪರಿಣಮಿಸಿದೆ. ಆವರಣ ಗೋಡೆಯಿಂದ ಹೊರಬಂದ ನೀರಿನ ರಭಸಕ್ಕೆ ಸುಮಾರು 100 ಮೀ.ನಷ್ಟು ಗುಡ್ಡವೂ ಕೊಚ್ಚಿಹೋಗಿದೆ. ಇಪ್ಪತ್ತಕ್ಕೂ ಹೆಚ್ಚು ಮರಗಿಡಗಳು ನಾಶವಾಗಿವೆ. ಈ ಅವ್ಯವಸ್ಥೆಯಿಂದಾಗಿ ಹತ್ತಿರದ ಹಳ್ಳಿಯವರು ಭಯದಿಂದ ಬದುಕುವಂತಾಗಿದೆ ಎನ್ನುತ್ತಾರೆ ತಾ. ಪಂ. ಸದಸ್ಯ ವಿಶ್ವನಾಥ ಶೆಟ್ಟಿ. 

Advertisement

Udayavani is now on Telegram. Click here to join our channel and stay updated with the latest news.

Next