ಕನ್ನಡದ ಈ ವರ್ಷದ ಬಹುನಿರೀಕ್ಷಿತ ಮೆಗಾ ಮೂವೀ ಎಂದೇ ಕರೆಸಿಕೊಳ್ಳುತ್ತಿರುವ “ಕುರುಕ್ಷೇತ್ರ’ ಚಿತ್ರ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮತ್ತೂಂದೆಡೆ ಭರ್ಜರಿಯಾಗಿ “ಕುರುಕ್ಷೇತ್ರ’ದ ಪ್ರಮೋಶನ್ ಕಾರ್ಯಗಳನ್ನು ನಡೆಸುತ್ತಿರುವ ಚಿತ್ರತಂಡ, ಚಿತ್ರದ ಒಂದೊಂದೆ ಹಾಡುಗಳು, ಟ್ರೇಲರ್ ಅನ್ನು ರಿಲೀಸ್ ಮಾಡುತ್ತ ಸಿನಿಪ್ರಿಯರ ಗಮನ ಸೆಳೆಯುವ ಕಸರತ್ತು ಮಾಡುತ್ತಿದೆ.
ಕೆಲ ದಿನಗಳ ಹಿಂದೆ ಬಿಡುಗಡೆಯಾದ “ಕುರುಕ್ಷೇತ್ರ’ ಚಿತ್ರದ ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ಟ್ರೇಲರ್ ಅದೇಕೊ ಪ್ರೇಕ್ಷಕರಿಗೆ ಅಷ್ಟಾಗಿ ರುಚಿಸಲಿಲ್ಲ. ಈ ಹಿಂದೆ ಚಿತ್ರತಂಡ ಬಿಡುಗಡೆ ಮಾಡಿದ್ದ ಟೀಸರ್‌ಗಳ ಒಂದಷ್ಟು ದೃಶ್ಯಕ್ಕೆ ಒಂದೇ ಒಂದು ಹೊಸ ದೃಶ್ಯ ಸೇರಿಸಿ ಟ್ರೇಲರ್ ಎಂದು ಚಿತ್ರತಂಡ ಬಿಡುಗಡೆ ಮಾಡಿದ್ದರಿಂದ, “ಕುರುಕ್ಷೇತ್ರ’ದ ಮೊದಲ ಟ್ರೇಲರ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡುವಂತೆ ಮಾಡಿತ್ತು.
ಇನ್ನು ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ಈ ಟ್ರೇಲರ್ ಹೊಗಳಿಕೆಗಿಂತ, ತೆಗಳಿಕೆ ಪಡೆದುಕೊಂಡಿದ್ದೇ ಹೆಚ್ಚು. ಅದರಲ್ಲೂ ಚಿತ್ರದ ಟ್ರೇಲರ್ ನೋಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಂತೂ, ಟ್ರೇಲರ್ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ, ಹೊಸ ಟ್ರೇಲರ್ ಬಿಡುಗಡೆ ಮಾಡುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ದರ್ಶನ್ ಅವರಿಗೆ ಒತ್ತಾಯ ಮಾಡಿದ್ದರು. ಬಳಿಕ ಕೊನೆಗೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ದರ್ಶನ್ ಹಾಗು ಚಿತ್ರತಂಡ, ಚಿತ್ರದ ಮತ್ತೂಂದು ಹೊಸ ಟ್ರೇಲರ್ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.
ಅದರಂತೆ ಬುಧವಾರ (ಜು.24) ಮಧ್ಯಾಹ್ನ 2 ಗಂಟೆಗೆ ಅಧಿಕೃತವಾಗಿ ಲಹರಿ ಮತ್ತು ಟಿ-ಸಿರೀಸ್‌ನ ಯು-ಟ್ಯೂಬ್ ಚಾನೆಲ್‌ನಲ್ಲಿ “ಕುರುಕ್ಷೇತ್ರ’ದ ಎರಡನೇ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಸದ್ಯ ಬಿಡುಗಡೆಯಾಗಿರುವ “ಕುರುಕ್ಷೇತ್ರ’ದ ಎರಡನೇ ಟ್ರೇಲರ್‌ನಲ್ಲಿ ದುಯೋಧನನ ಗೆಟಪ್‌ನಲ್ಲಿರುವ ದರ್ಶನ್ ಅವರ ಅಬ್ಬರ ಜೋರಾಗಿದ್ದು, ದರ್ಶನ್ ಅಭಿಮಾನಿಗಳಂತೂ ಟ್ರೇಲರ್ ನೋಡಿ ಫುಲ್ ಖುಷ್ ಆಗಿದ್ದಾರೆ.
“ಕುರುಕ್ಷೇತ್ರ’ದ ಮೊದಲ ಟ್ರೇಲರ್‌ಗಿಂತ, ಎರಡನೇ ಟ್ರೇಲರ್‌ಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ ಕೂಡ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಇನ್ನು “ಕುರುಕ್ಷೇತ್ರ’ ಇದೇ ಆಗಸ್ಟ್ 2 ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದಲ್ಲಿ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ರವಿಶಂಕರ್, ಸೋನುಸೂದ್, ಮೇಘನಾ ರಾಜ್, ಸ್ನೇಹಾ, ಮೇಘನಾ ರಾಜ್, ಶ್ರೀನಿವಾಸ ಮೂರ್ತಿ, ಶ್ರೀನಾಥ್ ಸೇರಿದಂತೆ ಬಹುದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ.
ಭಾರತದಲ್ಲಿ ಮೊದಲ ಬಾರಿಗೆ 2ಡಿ ಹಾಗೂ 3ಡಿಯಲ್ಲಿ ಬಿಡುಗಡೆಯಾಗುತ್ತಿರುವ ಪೌರಾಣಿಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ “ಕುರುಕ್ಷೇತ್ರ’ ಚಿತ್ರವನ್ನು ನಾಗಣ್ಣ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ಡಾ ವಿ. ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಸಾಹಿತ್ಯ ರಚಿಸಿದ್ದಾರೆ. ಮುನಿರತ್ನ ಅದ್ದೂರಿ ವೆಚ್ಚದಲ್ಲಿ “ಕುರುಕ್ಷೇತ್ರ’ ಚಿತ್ರವನ್ನು ನಿರ್ಮಿಸಿದ್ದಾರೆ. ಪಂಚ ಭಾಷೆಗಳಲ್ಲಿ ಬರುತ್ತಿರುವ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಎಷ್ಟರಮಟ್ಟಿಗೆ ಸದ್ದು ಮಾಡಲಿದೆ ಅನ್ನೋದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.