Advertisement

ಬೃಹತ್‌ ಮರಾಠಾ ಮೌನ ಮೋರ್ಚಾ

01:28 PM Sep 08, 2017 | Team Udayavani |

ಬೀದರ: ಮರಾಠಾ ಸಮಾಜವನ್ನು 2(ಎ) ಪ್ರವರ್ಗಕ್ಕೆ ಸೇರ್ಪಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಬೀದರ ಸೇರಿದಂತೆ ಜಿಲ್ಲೆಯಾದ್ಯಂತ ಬೃಹತ್‌ ಮರಾಠಾ ಕ್ರಾಂತಿ (ಮೌನ) ಮೋರ್ಚಾ ನಡೆಸಲಾಯಿತು.

Advertisement

ಸಮಾಜ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ ಮೇಲೆ ಒತ್ತಡ ಹಾಕಿದರು. ವಿವಿಧ ಪಕ್ಷದ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿ ಬೆಂಬಲ ಸೂಚಿಸಿದರು.

ಬೀದರನಲ್ಲಿ ನಗರದ ಗಣೇಶ ಮೈದಾನದಿಂದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೋರ್ಚಾ ನಡೆಸಲಾಯಿತು. ಕೈಯಲ್ಲಿ ಭಗವಾಧ್ವಜ ಹಿಡಿದು “ಏಕ ಮರಾಠಾ ಲಾಕ್‌ ಮರಾಠಾ’ ಘೋಷಣೆಯೊಂದಿಗೆ ಹೆಜ್ಜೆ ಹಾಕಿದರು. ರಾಜ್ಯದಲ್ಲಿ ಸಮಾಜ ಬಾಂಧವರು ಕಾಲಾನುಕಾಲದಿಂದ ಇತರೆ ಜಾತಿ, ಧರ್ಮದ ಜನರೊಂದಿಗೆ ಸ್ನೇಹ, ವಿಶ್ವಾಸದಿಂದ ಬಾಳುತ್ತಿದ್ದಾರೆ. ಆದರೆ ಆರ್ಥಿಕವಾಗಿ ಹಿಂದುಳಿದಿದ್ದು, ಇತರೆ ಸಮುದಾಯಕ್ಕೆ ಹೋಲಿಸಿದರೆ
ಅಲ್ಪಸಂಖ್ಯಾತರಾಗಿದ್ದಾರೆ. ಅಗತ್ಯ ಮೀಸಲಾತಿ ದೊರಕದ ಕಾರಣ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅವಕಾಶ ವಂಚಿತರಾಗಿದ್ದಾರೆ. ಬೇಡಿಕೆಗಳ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರಕ್ಕೆ ನಮ್ಮ ಧ್ವನಿ ಕೇಳಿಸುತ್ತಿಲ್ಲ. ಇದರಿಂದ ವಿಕಾಸದ ಮುಖ್ಯವಾಹಿನಿಯಿಂದ ದೂರ ಉಳಿಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ನ್ಯಾಯಸಮ್ಮತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ಜನ ಸಹನೆ ಕಳೆದುಕೊಂಡು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಇದಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ವಿದ್ಯಾರ್ಥಿಗಳಾದ ಜಿಜಾವ್‌ ಗಣೇಶ, ಅಂಬಿಕಾ ಟಾಕಳೆ, ಪೂಜಾ ಜಾವಕೆ ಮತ್ತು ಪೂಜಾ ಬಿರಾದಾರ ಅವರು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಡಾ| ಮಹಾದೇವ ಅವರಿಗೆ ಸಲ್ಲಿಸಿದರು. ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಭಾಗವಹಿಸಿದ್ದರು.

Advertisement

ಔರಾದನಲ್ಲಿ ನಡೆದ ಮೋರ್ಚಾದಲ್ಲಿ 25ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು. ಶಾಸಕ ಪ್ರಭು ಚವ್ಹಾಣ ಮತ್ತಿತರರು ಪಾಲ್ಗೊಂಡಿದ್ದರು.

ಭಾಲ್ಕಿ ಮತ್ತು ಬಸವಕಲ್ಯಾಣದಲ್ಲಿ ನಡೆದ ರ್ಯಾಲಿಯಲ್ಲಿ 10-15 ಸಾವಿರ ಜನರು ಭಾಗವಹಿಸಿದ್ದರು. ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಬಸವರಾಜ ಪಾಟೀಲ ಅಟ್ಟೂರ, ಬಿ. ನಾರಾಯಣ, ಡಿ.ಕೆ. ಸಿದ್ರಾಮ್‌ ಮತ್ತಿತರರು ಬೆಂಬಲ ಸೂಚಿಸಿದರು. ಹುಮನಾಬಾದನಲ್ಲಿ 500ಕ್ಕೂ ಹೆಚ್ಚು ಜನ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next