Advertisement

ಜಾತಿವ್ಯವಸ್ಥೆಯಿಂದ ಹೊರಬರಲು ಮಹನೀಯರ ಚಿಂತನೆಗಳು ಸಹಕಾರಿ

12:41 PM Jul 04, 2018 | Team Udayavani |

ಬೆಂಗಳೂರು: ಜಾತಿ, ಧರ್ಮ ವ್ಯವಸ್ಥೆತಯಿಂದ ಸಮಾಜ ಹೊರಬರಲು ಶಿಶುನಾಳ ಶರೀಫ‌ರು ಹಾಗೂ ಗೋವಿಂದಭಟ್ಟರ ಚಿಂತನೆಗಳು ಸಹಕಾರಿಯಾಗಿವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅಭಿಪ್ರಾಯಪಟ್ಟರು. 

Advertisement

ಸಂತ ಶಿಶುನಾಳ ಶರೀಫ‌ರ ಹಾಗೂ ಕಳಸದ ಗುರು ಗೋವಿಂದಭಟ್ಟರ ಪ್ರತಿಷ್ಠಾನದ ಉದ್ಘಾಟನೆ ಮತ್ತು ಶರೀಫ‌ರ ದ್ವಿ-ಶತಮಾನೋತ್ಸವದ ಅಂಗವಾಗಿ ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ “ತತ್ವ ರಸಾಯನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಯಲ್ಲಿ ಮುಳುಗಿರುವ ನಾವುಗಳು ಸಾಮರಸ್ಯ ಹಾಗೂ ಸೌಹಾರ್ದತೆಗೆ ಹೆಸರಾದ ಶರೀಫ‌ರು ಹಾಗೂ ಗೋವಿಂದಭಟ್ಟರಂತಹ ಮಹನೀಯರ ಅಧ್ಯಯನ ನಡೆಸಿ, ಅವರ ಸಂದೇಶಗಳನ್ನು ಪಾಲಿಸಬೇಕಿದೆ ಎಂದರು. 

ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಕಳಸದ ಗುರು ಗೋವಿಂದ ಭಟ್ಟರು ಹಾಗೂ ಸಂತ ಶಿಶುನಾಳ ಶರೀಫ‌ರು ಧಾರ್ಮಿಕ ಸಮನ್ವಯ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಉತ್ತಮ ನಿದರ್ಶನರಾಗಿದ್ದಾರೆ. ದೇಶದ ಇಂದಿನ ಕಲುಷಿತ ವಾತಾವರಣದಲ್ಲಿ ಪರಸ್ಪರ ಪ್ರೇಮ, ಸೌಹಾರ್ದತೆ ಬೆಳೆಸುವ ಸಂದೇಶವನ್ನು ಅವರು ನೀಡಿದ್ದಾರೆ ಎಂದು ಹೇಳಿದರು. 

ಜಗತ್ತಿನ ಎಲ್ಲ ಸಂತರ ಸಂದೇಶ ಒಂದೇ ಪರಮಾತ್ಮನಲ್ಲಿ ಭಕ್ತಿ ಮತ್ತು ಸಮಾಜದಲ್ಲಿ ಪ್ರೇಮ. ಭಯೋತ್ಪಾದನೆ, ಆತಂಕವಾದವನ್ನು ದಯೆ ಮತ್ತು ಅನುಕಂಪದಿಂದ ಗೆಲ್ಲಬೇಕಿದೆ. ಎಲ್ಲರನ್ನೂ ತನ್ನವರನ್ನಾಗಿ ನೋಡುವಂತ ಮನಸ್ಥಿತಿ ಬೆಳೆಸಿಕೊಳ್ಳಬೇಕಿದ್ದು, ಬಸವಣ್ಣ, ಮಧ್ವಾಚಾರ್ಯ, ಗೌತಮಬುದ್ಧ ಎಲ್ಲರನ್ನೂ ಪ್ರೀತಿಸುವುದನ್ನು ರೂಢಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ.ಪೀಟರ್‌ ಮಚಾದೋ ಮಾತನಾಡಿ, ಶಿಶುನಾಳ ಶರೀಫ‌ರು ಅಂತರ್ಧಮೀಯ ಸಂತರು. ಅವರ ಸೌಹಾರ್ದತೆ ಬೆಳೆಸುವ ತತ್ವಪದಗಳು ಪ್ರಶಂಸನಾರ್ಹ. ಭಾರತ ಹಲವು ಧರ್ಮಗಳ ದೇಶವಾಗಿದ್ದರೂ ಒಂದೇ ಮನಸ್ಸು, ಒಂದೇ ಹೃದಯ ಹೊಂದಿದೆ. ಸರ್ವಧಮೀಯರು ಇಲ್ಲಿ ಶಾಂತಿ, ನೆಮ್ಮದಿ, ಭಾತೃತ್ವದಿಂದ ನೆಲೆಸಲು ಸಾಧ್ಯವಾಗಿದೆ. ಆದ್ದರಿಂದಲೇ ಪ್ರಪಂಚದಲ್ಲಿ ಭಾರತ ಅತ್ಯುತ್ತಮ ದೇಶವಾಗಿದೆ ಎಂದು ಹೇಳಿದರು.

Advertisement

ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ, ಸುಪೀಂ ಕೋರ್ಟ್‌ ನಿವೃತ್ತ ನ್ಯಾ.ಎಂ.ಎನ್‌.ವೆಂಕಟಾಚಲಯ್ಯ, ಮಾಜಿ ಸಚಿವರಾದ ಎಚ್‌.ಕೆ.ಪಾಟೀಲ್‌, ಬಿ.ಎಲ್‌.ಶಂಕರ್‌, ನಾಡೋಜ ಡಾ.ಮಹೇಶ್‌ಜೋಶಿ, ನಿವೃತ್ತ ಡಿಜಿಪಿ ಅಜಯ್‌ಕುಮಾರ್‌ ಸಿಂಗ್‌, ಚಿಂತಕ ಡಾ.ಎಂ.ಚಿದಾನಂದಮೂರ್ತಿ, ಗಾಂಧೀ ಸ್ಮಾರಕ ಭವನದ ಡಾ.ವೂಡೇ ಪಿ.ಕೃಷ್ಣ, ನೇ.ಬಾ.ರಾಮಲಿಂಗಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಶ್ಮೀರದ ಬಾಲಕಿ ಮತ್ತು ಸ್ಥಳೀಯ ಹಿಂದು ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ಮಾಡಿದ ಕೃತ್ಯಗಳ ವಿರುದ್ಧ ಹೋರಾಡಬೇಕೇ ಹೊರತು, ಅವರ ಧರ್ಮದ ವಿರುದ್ಧವಲ್ಲ. “ಸರ್ವೇ ಜನಾಃ ಸುಖೀನೋ ಭವಂತು’ ಎಂಬ ಶ್ಲೋಕದಲ್ಲಿ ಹಿಂದು ಸುಖೀನೋ ಭವಂತು ಅಥವಾ ಮುಸ್ಲಿಂ ಸುಖೀನೋ ಭವಂತು ಎಂದು ಹೇಳಿಲ್ಲ. ಈ ಶ್ಲೋಕದಲ್ಲಿ ಜಗತ್ತಿನ ಕುಲಕೋಟಿಗೆ ಸುಖ, ಶಾಂತಿ, ಸಮೃದ್ಧಿಗೆ ಪ್ರಾರ್ಥಿಸಲಾಗಿದೆ. 
-ಕೆ.ಎಂ.ಅಬೂಬಕರ್‌ ಸಿದ್ದೀಕ್‌, ಇಸ್ಲಾಂ ಧರ್ಮಗುರು

Advertisement

Udayavani is now on Telegram. Click here to join our channel and stay updated with the latest news.

Next