ಮುಂಬಯಿ: ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಸಂಬಂಧ ರಾಜಕೀಯ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಬಿಜೆಪಿ ಯಾವು ದೇ ಪ್ರತಿಕ್ರಿಯೆ ನೀಡದೆ ಕಾದು ನೋಡುವ ತಂತ್ರ ಅನುಸರಿಸಿದೆ. ಅತ್ತ ಶಿವಸೇನೆ, “ನಾವು ಬಿಜೆಪಿ ಜತೆ ಮಾತುಕತೆ ಇನ್ನೂ ಮುಗಿಸಿಲ್ಲ’ ಎಂದು ಹೇಳುವ ಮೂಲಕ ಮಿತ್ರಪಕ್ಷದ ಜತೆಗೆ ಹೋಗಲು ಸಿದ್ಧ ಎಂಬ ಸುಳಿವನ್ನು ನೀಡುತ್ತಲೇ, ಗೊಂದಲವನ್ನು ಮುಂದುವರಿಸಿದೆ.
ಶಿವಸೇನೆಯು ಅಸೆಂಬ್ಲಿ ಚುನಾವಣೆಯನ್ನು ಮೈತ್ರಿಯೊಂದಿಗೇ ಎದುರಿಸಿದೆ. ಹೀಗಾಗಿ ಕೊನೆಯ ಕ್ಷಣದವರೆಗೂ ನಾವು ಮೈತ್ರಿಧರ್ಮಕ್ಕೆ ಬದ್ಧವಾಗಿರುತ್ತೇವೆ ಎಂದು ಸಂಸದ ಸಂಜಯ್ ರಾವತ್ ಶನಿವಾರ ಹೇಳಿದ್ದಾರೆ. ಜತೆಗೆ, ಪರಸ್ಪರ ಮಾತುಕತೆ ಮೂಲಕ ಗೊಂದಲಗಳಿಗೆ ತೆರೆ ಎಳೆ ಯೋಣ ಎಂಬ ಪರೋಕ್ಷ ಕರೆಯನ್ನೂ ಬಿಜೆಪಿಗೆ ನೀಡಿದ್ದಾರೆ. ಮತ್ತೂಂದೆಡೆ, ಶಿವಸೇನೆಯೊಂದಿಗೆ ಈಗಾಗಲೇ ಮಾತುಕತೆ ನಡೆಸಿರುವ ಎನ್‌ಸಿಪಿ ನಾಯಕ ಶರದ್ ಪವಾರ್, ಸೋಮವಾರ ಸೋನಿಯಾ ಗಾಂಧಿಯನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೇನೆಗೆ ಬೆಂಬಲಿಸಿ: ಈ ನಡುವೆಯೇ, ರಾಜ್ಯದಲ್ಲಿ ಶಿವಸೇನೆಗೆ ಬೆಂಬಲ ನೀಡುವಂತೆ ಕೋರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಗೆ ಪಕ್ಷದ ಸಂಸದರೊಬ್ಬರು ಪತ್ರ ಬರೆದಿದ್ದಾರೆ. “ಸರಕಾರ ರಚನೆಗೆ ಬೆಂಬಲ ಕೋರುವಂಥ ಪ್ರಸ್ತಾಪ ಬಂದರೆ, ಶಿವಸೇನೆಗೆ ಬೆಂಬಲ ನೀಡಿ. ಈ ಹಿಂದೆ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ್, ಪ್ರಣಬ್ ಆಯ್ಕೆ ವೇಳೆ ಕಾಂಗ್ರೆಸ್‌ಗೆ ಶಿವಸೇನೆ ಬೆಂಬಲ ನೀಡಿತ್ತು’ ಎಂದು ರಾಜ್ಯಸಭಾ ಸದಸ್ಯ ಹುಸೇನ್ ದಳವಾಯಿ ಮನವಿ ಮಾಡಿದ್ದಾರೆ. ದಳವಾಯಿ ನಿಲುವನ್ನು ಶಿವಸೇನೆ ಸ್ವಾಗತಿಸಿದೆ.
ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರಾ?: “ನ.7ರೊಳಗೆ ಹೊಸ ಸರಕಾರ ರಚನೆ ಆಗದಿದ್ದರೆ, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆಯಿದೆ’ ಎಂಬ ಬಿಜೆಪಿ ಹಿರಿಯ ನಾಯಕ ಸುಧೀರ್ ಮುಗಂತಿವಾರ್ ಹೇಳಿಕೆಗೆ ಶಿವಸೇನೆ ಕೆಂಡಕಾರಿದೆ. ಸುಧೀರ್ ಹೇಳಿಕೆಗೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ತಿರುಗೇಟು ನೀಡಿರುವ ಶಿವಸೇನೆ, “ರಾಷ್ಟ್ರಪತಿ ಯವರೇನು ನಿಮ್ಮ ಜೇಬಿನಲ್ಲಿದ್ದಾರಾ? ರಾಷ್ಟ್ರಪತಿಯವರ ಅಂಕಿತದ ಮುದ್ರೆ ಮಹಾರಾಷ್ಟ್ರ ಬಿಜೆಪಿ ಕಚೇರಿಯೊಳಗೆ ಇದೆಯೇ’ ಎಂದು ಖಾರವಾಗಿ ಪ್ರಶ್ನಿಸಿದೆ.