Advertisement

ನವೋಮಿ ಒಸಾಕಾ ಮತ್ತೆ ಗ್ರೇಟ್ ಎಸ್ಕೇಪ್‌

12:03 PM Jun 01, 2019 | Sriram |

ಪ್ಯಾರಿಸ್‌: ಅಗ್ರ ಶ್ರೇಯಾಂಕದ ನವೋಮಿ ಒಸಾಕಾ ಸತತ ಎರಡನೇ ಪಂದ್ಯದಲ್ಲಿ ಭಾರೀ ಅಪಾಯದಿಂದ ಪಾರಾಗಿ ನಿಟ್ಟುಸಿರುಬಿಟ್ಟಿದ್ದಾರೆ. ಒಂದು ಸೆಟ್ ಹಿನ್ನಡೆಯಲ್ಲಿದ್ದರೂ ವೀರೋಚಿತವಾಗಿ ಹೋರಾಡಿದ ಒಸಾಕಾ ಅವರು ವಿಕ್ಟೋರಿಯಾ ಅಜರೆಂಕಾ ಅವರನ್ನು 4-6, 7-5, 6-3 ಸೆಟ್‌ಗಳಿಂದ ಗೆದ್ದು ಸಂಭ್ರಮಿಸಿದರು.


Advertisement

ವಿಶ್ವದ ನಂಬರ್‌ ವನ್‌ ಖ್ಯಾತಿಯ ಒಸಾಕಾ ಈಗಾಗಲೇ ಯುಎಸ್‌ ಮತ್ತು ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಗೆದ್ದವರು. ಫ್ರೆಂಚ್ ಓಪನ್‌ ಪ್ರಶಸ್ತಿ ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಆದರೆ ಆರಂಭದ ಎರಡು ಪಂದ್ಯಗಳಲ್ಲಿ ಗೆಲುವಿಗಾಗಿ ಬಹಳಷ್ಟು ಬೆವರು ಸುರಿಸಬೇಕಾಯಿತು.

ಅಜರೆಂಕಾ ವಿರುದ್ಧವೂ ಒಸಾಕಾ ಸೋಲಿನ ದವಡೆಯಿಂದ ಪಾರಾದರು. ಮೊದಲ ಸೆಟ್ ಕಳೆದುಕೊಂಡಿದ್ದ ಒಸಾಕಾ ದ್ವಿತೀಯ ಸೆಟ್‌ನಲ್ಲಿ 2-4 ಹಿನ್ನಡೆಯಲ್ಲಿದ್ದರು. ಆದರೂ ವಿಚಲಿತರಾಗದೇ ಆಡಿದ 21ರ ಹರೆಯದ ಒಸಾಕಾ ಜಯ ಸಾಧಿಸಿ ಮೂರನೇ ಸುತ್ತಿಗೇರಿದರು. ಅಲ್ಲಿ ಅವರು ಮರಿಯಾ ಸಕ್ಕಾರಿ ಅಥವಾ ಕ್ಯಾತರೀನಾ ಸಿನಿಯಕೋವಾ ಅವರನ್ನು ಎದುರಿಸಲಿದ್ದಾರೆ.

2005ರಲ್ಲಿ ಲಿಂಡ್ಸೆ ಡ್ಯಾರನ್‌ಪೋರ್ಟ್‌ ಬಳಿಕ ರೋಲ್ಯಾಂಡ್‌ ಗ್ಯಾರೋಸ್‌ನ ಆರಂಭಿಕ ಎರಡು ಪಂದ್ಯಗಳಲ್ಲಿ ಮೊದಲ ಸೆಟ್ ಕಳೆದುಕೊಂಡ ಬಳಿಕ ಪಂದ್ಯ ಗೆದ್ದ ಮೊದಲ ಅಗ್ರ ಶ್ರೇಯಾಂಕದ ಆಟಗಾರ್ತಿ ಎಂಬ ಗೌರವಕ್ಕೆ ಒಸಾಕಾ ಪಾತ್ರರಾಗಿದ್ದಾರೆ.

ಸೆರೆನಾ ಮುನ್ನಡೆ
ಪ್ಯಾರಿಸ್‌:
ದಾಖಲೆ ಸಮಬಲದ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಹೋರಾಟಕ್ಕೆ ಸಿದ್ಧವಾಗಿರುವ ಸೆರೆನಾ ವಿಲಿಯಮ್ಸ್‌ ಜಪಾನಿನ ಕುರುಮಿ ನಾರಾ ಅವರನ್ನು ನೇರ ಸೆಟ್‌ಗಳಿಂದ ಕೆಡಹಿ ಮೂರನೇ ಸುತ್ತಿಗೇರಿದರು. 10ನೇ ಶ್ರೇಯಾಂಕದ ಸೆರೆನಾ 6-3, 6-2 ಸೆಟ್‌ಗಳ ಸುಲಭ ಜಯ ಸಾಧಿಸಿದರಲ್ಲದೇ ಮೂರನೇ ಸುತ್ತಿನಲ್ಲಿ ತನ್ನ ದೇಶದವರೇ ಆದ ಸೋಫಿಯಾ ಕೆನಿನ್‌ ಅವರನ್ನು ಎದುರಿಸಲು ಸಜ್ಜಾದರು. ಕ್ವಾರ್ಟರ್‌ಫೈನಲ್ನಲ್ಲಿ ಅವರಿಗೆ ಒಸಾಕಾ ಎದುರಾಗುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next