Advertisement

ಪುಸ್ತಕ ಮೇಳದಲ್ಲಿ ಭರ್ಜರಿ ವಹಿವಾಟು

12:58 PM Aug 16, 2018 | |

ಬೆಂಗಳೂರು: ಪುಸ್ತಕ ಓದುಗರ ಸಂಖ್ಯೆ ದಿನೇ ದಿನೆ ಕ್ಷೀಣವಾಗುತ್ತಿದೆ ಎಂಬ ಮಾತುಗಳ ನಡುವೆಯೇ ನಗರದಲ್ಲಿ ಪುಸ್ತಕ ಪ್ರಾಧಿಕಾರ ಸೇರಿದಂತೆ ಅಕಾಡೆಮಿಗಳು ಪ್ರಾರಂಭಿಸಿರುವ ಮೇಳದಲ್ಲಿ ಪುಸ್ತಕ ಮಾರಾಟ ಭರ್ಜರಿಯಾಗಿ ನಡೆದಿದೆ. 

Advertisement

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳು ಶೇ.50ರ ರಿಯಾಯಿತಿ ದರದಲ್ಲಿ ಕೃತಿಗಳ ಮಾರಾಟದಲ್ಲಿ ತೊಡಗಿದ್ದು,  ಸುಮಾರು 3 ಲಕ್ಷ ರೂ.ವಹಿವಾಟು ನಡೆದಿದೆ.

ಆ.1 ರಿಂದ ಆರಂಭವಾಗಿರುವ ಮಾರಾಟ ಮೇಳ ಈ ತಿಂಗಳ ಅಂತ್ಯದವರೆಗೂ ಇರಲಿದ್ದು, ಐದು ಲಕ್ಷ ರೂ. ಮೇಲ್ಪಟ್ಟು ವಹಿವಾಟು ಆಗುವ ನಿರೀಕ್ಷೆಯಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಕೃತಿಗಳಿಗೆ ಆನ್‌ಲೈನ್‌ನಲ್ಲೂ ಬೇಡಿಕೆ ಉಂಟಾಗಿರುವುದು ವಿಶೇಷ.

ಓದುಗರಲ್ಲಿ ಪುಸ್ತಕ ಓದುವ ಅಭಿರುಚಿ ವೃದ್ಧಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಶೇ.50ರ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟದಲ್ಲಿ ತೊಡಗಿಕೊಂಡಿದ್ದು, ಸಾಹಿತ್ಯಾಸಕ್ತರನ್ನು ಸೆಳೆಯುತ್ತಿದೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿರುವ “ಸಿರಿಗನ್ನಡ ಪುಸ್ತಕ ಮಳಿಗೆ’ಯಲ್ಲಿ ಮಾರಾಟ ಮೇಳ ಆಯೋಜಿಸಲಾಗಿದ್ದು ವೈದ್ಯಕೀಯ ಲೋಕದ ಕುರಿತಾದ ಪುಸ್ತಕಗಳು, ಸಣ್ಣಕಥೆಗಳು, ವಿಮರ್ಶೆ, ಜಾನಪದ, ಕೃಷಿ  ಸಂಪುಟಗಳು ಸೇರಿದಂತೆ ಸಾರಸ್ವತ ಲೋಕದ ಹೆಸರಾಂತ ಸಾಹಿತಿಗಳ ನೂರಾರು ಪುಸ್ತಕಗಳು ಇಲ್ಲಿ ಮಾರಾಟಕ್ಕಿವೆ.

Advertisement

ಡಿಮ್ಯಾಂಡ್‌: ಕನ್ನಡ ಪುಸ್ತಕ ಪ್ರಾಧಿಕಾರ ಹೊರ ತಂದಿರುವ ಪುಸ್ತಕಗಳಿಗೆ ಬಾರಿ ಬೇಡಿಕೆ ಇದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃಡಾ.ಜಿ.ಎಸ್‌.ಶಿವರುದ್ರಪ್ಪ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರ ಕೃತಿಗಳು ಹೆಚ್ಚು ಮಾರಾಟವಾಗಿವೆ. ಜಿ.ಎಸ್‌.ಶಿವರುದ್ರಪ್ಪ ಅವರ “ಸಮಗ್ರ ಗದ್ಯ’, ಕಂಬಾರರ “ನೆಲ ಸಂಪಿಗೆ’ ಕೃತಿಗಳಿಗೆ ಡಿಮ್ಯಾಂಡ್‌ ಇದ್ದು, ಈ ಪುಸ್ತಕಗಳನ್ನು ಕೇಳುವವರ ಸಂಖ್ಯೆ ಹೆಚ್ಚಿದೆ ಎಂದು ಅಕಾಡೆಮಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಇಲ್ಲಿಯವರೆಗೂ ವಿವಿಧ ಲೇಖಕರ ಸುಮಾರು 3 ಸಾವಿರ ಪುಸ್ತಕಗಳು ಖರೀದಿಯಾಗಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಒಂದರಲ್ಲಿ ಸುಮಾರು 1.5 ಲಕ್ಷ ವಹಿವಾಟು ನಡೆದಿದೆ. ಈ ತಿಂಗಳ ಅಂತ್ಯದ ವರೆಗೂ ಮಾರಾಟ ನಡೆಯಲಿದೆ. ಈ ಸಂಖ್ಯೆ ಮತ್ತಷ್ಟು ದ್ವಿಗುಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬರಗೂರು ಕೃತಿಗಳಿಗೂ ಬೇಡಿಕೆ: ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಕೇವಲ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳು ಅಷ್ಟೇ ಇಲ್ಲ.

ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ ಹಲವು ಕೃತಿಗಳು ಮಾರಾಟಕ್ಕಿವೆ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಸಣ್ಣ ಕಥೆ, ಪ್ರಬಂಧಗಳು ಮತ್ತು ವಿಮರ್ಶೆಗಳ ಜತೆಗೆ ಬರಗೂರು ರಾಮಚಂದ್ರಪ್ಪ ಅವರ ಕೃತಿಗಳು ಹೆಚ್ಚು ಖರೀದಿಯಾಗಿವೆ. ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದಲೆ ಒಟ್ಟು 1 ಲಕ್ಷ ವಹಿವಾಟು ನಡೆದಿದೆ.

ಆಲ್‌ಲೈನ್‌ನಲ್ಲಿ ವಹಿವಾಟು: ಕನ್ನಡ ಪುಸ್ತಕ ಪ್ರಾಧಿಕಾರ ಆನ್‌ಲೈನ್‌ನಲ್ಲೂ ಪುಸ್ತಕ ಮಾರಾಟ ಆರಂಭಿಸಿದ್ದು, ಆ.1 ರಿಂದ 47 ಸಾವಿರ 461ರೂ. ವಹಿವಾಟು ನಡೆದಿದೆ.”ಸಾಹಿತ್ಯ ರತ್ನ’, “ಸುವರ್ಣ ಪುತ್ಥಳಿ’, “ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳು’,”ಸಾಹಿತ್ಯ ಮನೆ’, “ಷೆಕ್ಸ್‌ಪಿಯರ್‌ ನಾಟಕ’ ಸೇರಿದಂತೆ ಹಲವು ಕೃತಿಗಳು ಮಾರಾಟವಾಗಿವೆ. ಸುಮಾರು 865 ಕೃತಿಗಳನ್ನು ಓದುಗರು ಖರೀದಿಸಿದ್ದಾರೆ. ಅಲ್ಲದೆ, ಎಂಇಎಸ್‌ ಕಾಲೇಜಿನ ಪ್ರಾಂಶು ಪಾಲರಾದ ಲೋಕೇಶ್ವರಪ್ಪ ಅವರು ಒಂದೇ ದಿನ ಸುಮಾರು 10 ಸಾವಿರ ರೂ. ಪುಸ್ತಕಗಳನ್ನ ಖರೀದಿ ಮಾಡಿದ್ದಾರೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಾಧಿಕಾರದ ಪುಸ್ತಕಗಳಿಗೆ ಡಿಮ್ಯಾಂಡ್‌ ಬಂದಿರುವುದು ಸಂತಸ ನೀಡಿದೆ. ಅಲ್ಲದೆ, ಪ್ರಾಧಿಕಾರದ ಆನ್‌ ಲೈನ್‌ನಲ್ಲೂ ಕೃತಿಗಳಿಗೆ ಬೇಡಿಕೆ ಬಂದಿದ್ದು, ಓದುಗರಿಗೆ ಸರಿಯಾದ ರೀತಿಯಲ್ಲಿ ಪುಸ್ತಕಗಳನ್ನು ತಲುಪಿಸಿದರೆ ಅವರು ಕೊಂಡು ಕೊಳ್ಳುತ್ತಾರೆ ಎಂಬುವುದ ಸಾಭೀತಾಗಿದೆ.
-ವಸುಂಧರಾ ಭೂಪತಿ, ಕನ್ನಡಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ

* ದೇವೇಶ ಸೂರಗುಪ್ಪ 

Advertisement

Udayavani is now on Telegram. Click here to join our channel and stay updated with the latest news.

Next