ಸವಣೂರು: ತಾಲೂಕಿನಾದ್ಯಂತ ರವಿವಾರ ಸಂಜೆ ಬಿರುಗಾಳಿ, ಮಿಂಚು ಗುಡುಗಿನ ಸಹಿತ ಸುರಿದ ಮಳೆ ವಿವಿಧೆಡೆ ಹಲವು ಅವಾಂತರ ಸೃಷ್ಟಿಸಿದೆ.
ಮಿಂಚು ಗುಡುಗಿನೊಂದಿಗೆ ಆರಂಭವಾದ ಮಳೆ ನಡುವೆ ಬಿಸಿದ ಗಾಳಿಯಿಂದ ಶಿರಬಡಗಿ, ಹತ್ತಿಮತ್ತೂರು, ಜಲ್ಲಾಪುರ, ಕಡಕೋಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಲವು ಮರ-ಗಿಡಗಳು ಧರೆಗುಉಳಿದ್ದು, ಕೆಲವೆಡೆ ವಿದ್ಯುತ್ ಕಂಬಗಳು ಬಿದ್ದಿವೆ.
ಮಳೆ ಪ್ರಮಾಣ ಅಲ್ಪವಾಗಿತ್ತಾದರೂ ಗಾಳಿ ಆರ್ಭಟ ಜೋರಾಗಿತ್ತು. ಪರಿಣಾಮ ತಾಲೂಕಿನ ಕಡಕೋಳ ಗ್ರಾಮದ ಹೊರವಲಯದಲ್ಲಿನ ಗುತ್ತೂರನಿಂದ ದಾವಣಗೆರೆಯ ನರೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಕೆಪಿಟಿಸಿಎಲ್ನ 440 ಕೆವಿ ವಿದ್ಯುತ್‌ನ ಹೈಟೆನ್ಶನ್ ಕಂಬ ನೆಲಕ್ಕುರುಳಿದೆ. ಅದೃಷ್ಟವಶಾತ ಯಾವುದೇ ಪ್ರಾಣಹಾನಿಯಾಗಿಲ್ಲ.
ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಹಾರಿಹೋಗಿದ್ದು, ತಗಡುಗಳ ತುಂಡು ಶಂಕ್ರಪ್ಪ ಲಮಾಣಿ ಎಂಬುವರರಿಗೆ ತಾಗಿ ಸಣ್ಣ ಪುಟ್ಟ ಗಾಯಗಳಾಗಿವೆ. ಅದೇ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಾಗೂ ಕಂಪೌಂಡ್ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ.
ಕಡಕೋಳ ಗ್ರಾಮದಲ್ಲಿ 440 ಕೆವಿ ವಿದ್ಯುತ್‌ನ ಹೈಟೆನ್ಶನ್ ಕಂಬ ಬಿದ್ದ ಪರಿಣಾಮವಾಗಿ ಅದೇ ಲೈನ್ ಕೆಳಗಿರುವ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು ಹತ್ತಾರು ಕಂಬಗಳು ಬಿದ್ದಿರುವುದರಿಂದ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಆ ಲೈನ್ ಮೂಲಕ ವಿದ್ಯುತ್ ಪೂರೈಕೆಯಾಗುವ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ ಎಂದು ಹೆಸ್ಕಾಂ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.