Advertisement

ಶೃಂಗೇರಿ ಶಾರದಾಂಬೆಗೆ ಅದ್ಧೂರಿ ರಥೋತ್ಸವ

10:52 PM Oct 09, 2019 | Lakshmi GovindaRaju |

ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಅಂಗವಾಗಿ ಶಾರದಾಂಬೆಯ ಮಹಾರಥೋತ್ಸವ ಹಾಗೂ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಉತ್ಸವ ಬುಧವಾರ ವೈಭವದಿಂದ ನೆರವೇರಿತು.

Advertisement

ರಥೋತ್ಸವದ ಪೂರ್ವಭಾವಿಯಾಗಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ಗುರುಭವನದಲ್ಲಿ ಭಕ್ತರನ್ನು ಆಶೀರ್ವದಿಸಿ, ದೋಣಿಯಲ್ಲಿ ತುಂಗಾ ನದಿ ದಾಟುವ ಮೂಲಕ ಗಂಗಾ ಪೂಜೆ ನೆರವೇರಿಸಿದರು. ನಂತರ ಮಠದ ಹೊರ ಆವರಣ ಮತ್ತು ಒಳ ಆವರಣದಲ್ಲಿ ಪೂಜೆ ಸಲ್ಲಿಸಿ, ಶಾರದಾಂಬೆಗೆ ಪೂಜೆ ಸಲ್ಲಿಸಿದರು.

ನಂತರ ಮಠದ ಎದುರು ಪುಷ್ಪಾಲಂಕೃತ ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಆಸೀನರಾದರು. ಜಯಘೋಷ ವಿಪ್ರತ್ತೋಮರ ವೇದಘೋಷ, ಮಂತ್ರಪಠಣದೊಂದಿಗೆ ರಥದ ಎದುರು ಅಡ್ಡಪಲ್ಲಕ್ಕಿ ಉತ್ಸವ ಸಾಗಿತು. ಇದೇ ವೇಳೆ, ಶಾರದಾಂಬೆಯ ರಥೋತ್ಸವಕ್ಕೂ ಚಾಲನೆ ನೀಡಲಾಯಿತು. ಬೆಳಗ್ಗೆ ಉತ್ಸವ ಮೂರ್ತಿಯನ್ನು ಭವ್ಯ ರಥದಲ್ಲಿ ಪ್ರತಿಷ್ಠಾಪಿಸಿ ರಾಜಬೀದಿಯಲ್ಲಿ ಉತ್ಸವ ನಡೆಸಲಾಯಿತು. ಸಾವಿರಾರು ಭಕ್ತರು ಜಯಘೋಷಗಳೊಂದಿಗೆ ರಥ ಎಳೆದರು. ಆಕರ್ಷಕ ಸ್ತಬ್ಧ ಚಿತ್ರಗಳ ಮೆರವಣಿಗೆ ರಥೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು.

ರಾಜ ದರ್ಬಾರ್‌: ರಥೋತ್ಸವದ ನಂತರ ಶಾರದಾ ಸನ್ನಿಧಿಯಲ್ಲಿ ಹಗಲು ರಾಜ ದರ್ಬಾರ್‌ ನಡೆಯಿತು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ರಾಜ ಪೋಷಾಕಿನಲ್ಲಿ ಸ್ವರ್ಣ ಖಚಿತ ಸಿಂಹಾಸನದಲ್ಲಿ ಆಸೀನರಾಗಿ, ಭಕ್ತರನ್ನು ಆಶೀರ್ವದಿಸಿದರು. ನವರಾತ್ರಿಯ ಹತ್ತು ದಿನಗಳ ಕಾಲ ವಿವಿಧ ಅಲಂಕಾರಗಳಲ್ಲಿ ಕಂಗೊಳಿಸಿದ ಶಾರದೆಗೆ ಬುಧವಾರವೂ ಗಜಲಕ್ಷ್ಮೀ ಅಲಂಕಾರ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next