Advertisement

ಬೂದು ತಲೆಯ ಹುಳಗುಳಕ 

02:26 PM Mar 24, 2018 | |

 ಈ ಪಕ್ಷಿಯನ್ನು ನೀಲಿತಲೆ ಪಚ್ಚೆಹಸಿರು ಬೆನ್ನಿನ ಹುಳ ಹಿಡುಕ ಎಂದೂ ಕರೆಯುತ್ತಾರೆ. GRAY -headed  Flaycatcher (Culicicipa  ceylonensis)  ( Swainson) R Sparrow +
 ಬೂದು ತಲೆಯ ಕೆನರೀ ಪ್ಲಾಯ್‌ ಕ್ಯಾಚರ್‌ ಎಂಬ ಹೆಸರೂ ಈ ಪಕ್ಷಿಗಿದೆ.  ಕೆನರೀ ಎಂದರೆ ಸುಂದರ ಹಾಡು ಹಕ್ಕಿ ಎಂದು ಅರ್ಥ. ಉತ್ತರ ಕನ್ನಡ ಪಶ್ಚಿಮ ಘಟ್ಟದ ಬೆಟ್ಟದ ಭಾಗವನ್ನು ಕೆನರಾ ವೃತ್ತ , ಕಾನಾಡಾ ವೃತ್ತ ಎಂದು ಹಳ್ಳಿಗರು ಕರೆಯುವುದಿದೆ. ಈ ಭಾಗದ ಎತ್ತರದ ದೊಡ್ಡ ಹಸಿರು ಮರಗಳಿಂದ ಕೂಡಿದ ಭಾಗದಲ್ಲಿ ಈ ಹಕ್ಕಿ ಹೆಚ್ಚಾಗಿ ತನ್ನ ಇರುನೆಲೆ ಮಾಡಿಕೊಂಡಿದೆ ಎಂಬ ಅರ್ಥದಲ್ಲೂ ಈ ಹಕ್ಕಿಗೆ  ಬೂದು ತಲೆಯ ಕೆನರೀ ಹಕ್ಕಿ ಎಂಬ ಹೆಸರು ಒಪ್ಪುವುದು. ಇದು ಬೂದು ತಲೆ, ಎದೆ, ಇರುವ ಹಕ್ಕಿ . ರೆಕ್ಕೆ ಬೆನ್ನು,  ಬಾಲ -ಪಾಚಿ ಹಸಿರು ಬಣ್ಣವಿದೆ. ತಿಳಿ ಹಳದಿ ಬಣ್ಣ ಹೊಟ್ಟೆಯ ಭಾಗದಲ್ಲಿದೆ. ಚಿಕ್ಕ ತಿಳಿ ಗುಲಾಬಿ ಬಣ್ಣದ ಕಾಲು ಇರುವುದರಿಂದ ಇತರ ಹುಳ ಗುಳಕ ಹಕ್ಕಿಯ ಗುಂಪಿನಲ್ಲಿ ಇದನ್ನು ಪ್ರತ್ಯೇಕವಾಗಿ ಗುರುತಿಸುವುದು ಸುಲಭ. ಇದು  ‘ಸ್ಟೆನೋಸ್ಟಿರಿಡಿಯಾ’ ಕುಟುಂಬಕ್ಕೆ ಸೇರಿದ ಹಕ್ಕಿ.  9 ಸೆಂ.ಮೀ ದೊಡ್ಡದಿರುತ್ತದೆ.  ಇದರ ತಲೆ ಸ್ವಲ್ಪ ಚಪ್ಪಟೆಯಾಗಿಯೂ -ಚೌಕಾಕಾರ ಆಗಿಯೂ ಇರುತ್ತದೆ.  

Advertisement

ಪಶ್ಚಿಮ ಘಟ್ಟದ ಭಾಗ, ನೀಲಗಿರಿ ಬೆಟ್ಟ, ಮಧ್ಯ ಹಾಗೂ ಪೂರ್ವ ಭಾಗದಲ್ಲಿ- ಸ್ವಲ್ಪ ಬಣ್ಣದಲ್ಲಿ ವ್ಯತ್ಯಾಸ ಇರುವ ಮತ್ತು ಆಕಾರದಲ್ಲೂ ಸ್ವಲ್ಪ ದೊಡ್ಡದು ಚಿಕ್ಕದು ಇರುವ ಪ್ರಬೇಧ ಕಂಡಿದೆ. ಇವುಗಳ ಸ್ವಭಾವ , ಕೂಗು, ಕುಳಿತುಕೊಳ್ಳುವ ರೀತಿ ಒಂದೇ ಇರುತ್ತದೆ.  

ಇವೆಲ್ಲಕ್ಕಿಂತಲೂ ಬೇರೆ ರೀತಿ ಬಣ್ಣ ಬೂದು ತಲೆಯ ಪಾಚಿ ಹಸಿರನ ಮೈ ಬಣ್ಣ ಇರುವುದರಿಂದ- ಬೂದು ತಲೆಯ ಕೆನರೀ ಹಕ್ಕಿಯನ್ನು ಸುಲಭವಾಗಿ ಗುರುತಿಸಬಹುದು. ಇದೊಂದು ಹಾಡು ಹಕ್ಕಿ. ಸುಮಾರು 18 ರೀತಿಯ ಹುಳ ಹಿಡುಕ ಹಕ್ಕಿಯನ್ನು ಗುರುತಿಸಲಾಗಿದೆ. ಇವೆಲ್ಲ ನಿತ್ಯ ಹರಿದ್ವರ್ಣ ಕಾಡು, ಇಲ್ಲವೇ ದೊಡ್ಡ ಮರಗಳಿರುವ ಎತ್ತರದ ಪರ್ವತ ಪ್ರದೇಶ,  ಅಂದರೆ ಕರ್ನಾಟಕದ ಕುಮಟಾದ ಮೇದಿನಿ, ಹೊನ್ನಾವರದ ಕರಿಕಾನ ಪರಮೇಶ್ವರಿ ಗುಡ್ಡದ ಬೆಟ್ಟದ ಪ್ರದೇಶ ಮತ್ತು ಚಿಕ್ಕ ಝರಿ ಹರಿವಲ್ಲಿ ಕಾಣಿಸುತ್ತವೆ. ದೊಡ್ಡ ಮರಗಳಿರುವ ಬೆಟ್ಟ ಪ್ರದೇಶವನ್ನು ಈ ಹಕ್ಕಿ ಇರುನೆಲೆ ಮಾಡಿಕೊಂಡಿರುತ್ತದೆ.  ತಂತಿ, ಟೆಲಿಗ್ರಾಪ್‌ ಅಥವಾ ಎತ್ತರದ ಮರದ ತುಟ್ಟ ತುದಿಯ ಟೊಂಗೆಯಲ್ಲಿ ಕುಳಿತಿರುವುದು. ಅಲ್ಲಿಂದಲೇ ಹಾರಿ-ಹಾರಿಕೆಯಲ್ಲೆ ರೆಕ್ಕೆ ಹುಳ ಹಿಡಿದು- ತಿರುಗಿ ಬಂದು ಮರದ ಟೊಂಗೆ ,ಇಲ್ಲವೇ ಕಲ್ಲು ಬಂಡೆಗೆ ಬೇಟೆಯನ್ನು ಹಿಡಿದು ಚಚ್ಚಿ ಸಾಯಿಸಿ ತಿನ್ನುವುದು ಇದರ ಬೇಟೆಯ ಪರಿ. ಹಿಮಾಲಯದ ಪೂರ್ವ ಭಾಗ, ಮೈನಾವರಗಳಲ್ಲಿ ಮರಿ ಮಾಡಿ ಚಳಿಗಾಲದಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬರುವ ಈ ಜಾತಿಯ ಉಪತಳಿ ಸಹ ಇರುವುದು ದಾಖಲಾಗಿದೆ. ಈ ಹಕ್ಕಿಯ ಬಣ್ಣ ಹೆಚ್ಚು ಡಾರ್ಕ್‌ ಇರುವುದರಿಂದ ಇದನ್ನು ಭಾರತದ ಪ್ರಾದೇಶಿಕ ಹಕ್ಕಿಗಿಂತ ಬೇರೆ ಎಂದು ಗುರುತಿಸಬಹುದು. ಥೈಲಾಂಡಿನಿಂದ ಬರುವ ಹಕ್ಕಿಯನ್ನು ಅದರ ದೇಹ ಲಕ್ಷಣ ಆಧರಿಸಿ ಇದು ಉಪ ತಳಿ ಎಂದು ಹೆಸರಿಸಲಾಗಿದೆ. 

 ಸೆಪ್ಟೆಂಬರ್‌, ಮಾರ್ಚ್‌ ಮರಿಮಾಡುವ ಸಮಯ. ಈ ಹಕ್ಕಿಗಳು ಸಮತಟ್ಟಾದ ಕಾಡು -ಕಾಡಿನ ತಪ್ಪಲಿನಲ್ಲಿ ಕಾಣುತ್ತವೆ. ಸಾಮಾನ್ಯವಾಗಿ ನೀರಿನ ಝರಿ, ಚಿಕ್ಕಹಳ್ಳ ಪ್ರದೇಶದಲ್ಲಿ ರೆಕ್ಕೆ ಹುಳಗಳಾದ ಇರುವೆ, ಗೊದ್ದ, ಕಪ್ಪಿರುವೆ, ಕೊಣಜ, ಇವುಗಳ ಮೊಟ್ಟೆ ಇಲ್ಲವೇ ರೆಕ್ಕೆ ಹುಳಗಳನ್ನು ಹಿಡಿಯುತ್ತಾ ಇರುತ್ತವೆ. ರೆಕ್ಕೆ ಹುಳ, ಮರಕೊರೆವ ಹುಳುಗಳನ್ನು ನಿಯಂತ್ರಿಸುವಲ್ಲಿ ಇವುಗಳ ಪಾತ್ರ ಹಿರಿದು. ಇದರಿಂದ ಕಾಡಿನ ಮರಗಳನ್ನು ಉಳಿಸುವಲ್ಲಿ ಇವುಗಳ ಪಾತ್ರ ಮುಖ್ಯವಾಗುತ್ತದೆ.  ತನ್ಮೂಲಕ ಮಾನವನಿಗೆ ಹಣ್ಣು ನೀಡುವ ಅನೇಕ ಮರಗಳ ಉಳಿಯುವಿಕೆಗೂ ಇವು ಉಪಕಾರ ಮಾಡುತ್ತವೆ. ಈ ಹಕ್ಕಿ ಒಂದೇ ಗಂಡಿನ ಜೊತೆ ಸಂಸಾರ ಮಾಡುವುದು ಈ ಹಕ್ಕಿಯ ವಿಶೇಷ.  ಪ್ರಣಯ ಸಮಯದಲ್ಲಿ ಗಂಡು 30 ಮೀ ವರೆಗೆ ವೃತ್ತಾಕಾರದಲ್ಲಿ ಹಾರುತ್ತಾ, ತಿರುಗುತ್ತಾ, ಭಿನ್ನ ಆಕಾರದಲ್ಲಿ ಗಿರಕಿ ಹೊಡೆಯುತ್ತ ಪ್ರಣಯದ ಆಟ ಪ್ರದರ್ಶಿಸುತ್ತದೆ.  2500 ಮೀ ಎತರದ ಕಾಡಿನ ಭಾಗದಲ್ಲಿ ಚಿಕ್ಕ ಅರ್ಧ ಕಪ್ಪಿನ ಆಕಾರದದಲ್ಲಿ ಗೂಡು ಮಾಡಿ -ಅದಕ್ಕೆ ಜೇಡದ ಬಲೆ ಸುತ್ತಿ ಬಿಗಿಮಾಡಿ ಟೊಂಗೆಗೆ ಅಂಟಿಸುತ್ತದೆ. 

 ಮೊಟ್ಟೆಯ ದಪ್ಪ ಭಾಗದಲ್ಲಿ -ಬೂದು ಮಿಶ್ರಿತ ಹಳದಿ ಬಣ್ಣದ ಬಳೆಯಂತೆ ಮಚ್ಚೆ ಇರುತ್ತದೆ.  ಬೂದು-ಕ್ರೀಂ ಬಣ್ಣದ 3-4 ಮೊಟ್ಟೆ ಇಡುವುದು. 5 ನೊಟ್‌ ಇರುವ ಸುಂದರ ಸಿಳ್ಳೆ ದನಿ ಸಹ ಈ ಸಮಯದಲ್ಲಿ ಹೊಡೆಯುತ್ತದೆ. ಇದರ ದನಿಯ ಭಿನ್ನತೆ, ಗಂಡು ಹೆಣ್ಣು ಸಂಭಾಷಣೆ ಮಾಡುವ ಬಗೆ, ಮರಿಗಳಿಗೆ ಅಪಾಯ ಬಂದಾಗ ಹೊಡಿಸುವ ದನಿ, ಈ ಹಕ್ಕಿಯ -ದನಿಯಿಂದ ಪರಿಸರದ ಮೇಲೆ, ಮಾನವನ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುವುದು ಎಂಬುದರ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next