Advertisement

ಗಂಗಾವತಿ : ಕುಖ್ಯಾತ ದರೋಡೆಕೋರ ಏಳುಗುಡ್ಡದ ಖಾನಸಾಬನ ಗೋರಿಯ ಸಂಶೋಧನೆ

04:58 PM Apr 05, 2022 | Team Udayavani |

ಗಂಗಾವತಿ : ಹೈದರಾಬಾದ್ ನಿಜಾಮ ಅರಸರ  ಕಾಲದಲ್ಲಿ ಜನಾನೂರಾಗಿ ದರೋಡೆಖೋರನೆಂದು ಕುಖ್ಯಾತಿಗಳಿಸಿದ್ದ , ಇಂದಿಗೂ ಗಂಗಾವತಿ ಭಾಗದಲ್ಲಿ ದಂತಕತೆಯಾಗಿರುವ ಏಳುಗುಡ್ಡದ ಖಾನಸಾಬನ ಗೋರಿಯನ್ನು  ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನೆ ಮಾಡಿದ್ದಾರೆ . ಖಾನಸಾಬ ಆಪ್ತರು ಮತ್ತು ಕುಟುಂಬವರ್ಗದವರು ನೀಡಿದ ಮಾಹಿತಿ ಮೇರೆಗೆ ಗೋರಿಯನ್ನು ಮೌಖಿಕ ಮಾಹಿತಿಯ ಆಧಾರದ ಮೇಲೆ ಗಂಗಾವತಿಯ ಪಂಪಾನಗರದಲ್ಲಿರುವ ಪಠಾಣರ ಖಬರಸ್ತಾನದಲ್ಲಿ ಗುರುತಿಸಿದ್ದಾರೆ.

Advertisement

ಖಾನಸಾಬ ಏಳುಗುಡ್ಡ ಪರಿಸರದಲ್ಲಿ ಇಂದಿಗೂ ಜನಜನಿತನಾಗಿದ್ದಾನೆ.‌ಆತನ ವಿಲಕ್ಷಣ ವ್ಯಕ್ತಿತ್ವ ಜನರಲ್ಲಿ ಆತನ ಬಗೆಗೆ ಗೌರವ ಅಭಿಮಾನಗಳನ್ನು ಕಾಯ್ದಿಟ್ಟುಕೊಂಡಿದೆ. ಖಾನಸಾಬ ಒಬ್ಬ ದರೋಡೆಕೋರ ನಾದರೂ ಬಡವರ ಬಂಧು ಆಗಿದ್ದನು. ಕೇವಲ ಶ್ರೀಮಂತರ ಮನೆಗಳನ್ನು ಅದೂ  ಮೊದಲೇ ಹೇಳಿ ಲೂಟಿ ಮಾಡಿ ಬಡವರಿಗೆ ಹಂಚುತ್ತಿದ್ದ  ಆತನ ವೈಶಿಷ್ಟ್ಯ ಹಾಗೂ ಅಪಾರ ಧೈರ್ಯಕ್ಕೆ ಸಾಕ್ಷಿಯಾಗಿವೆ. ಮೂಲತಃ ಕುಕನೂರಿನವನಾದ ಖಾನಸಾಬ ಅಲ್ಲಿಯ ಪಠಾಣ ಜನಾಂಗದ ದೌಲತ್ ಖಾನ್ ಹಾಗೂ ಬೀಬೀ ಫಾತಿಮಾರ  ನಾಲ್ಕನೆಯ ಮಗ.‌ವಜೀರಖಾನ್,ಖಾಜಾಖಾನ್, ಶಾಮೀದ್ ಖಾನ್ ಈತನ ಅಣ್ಣಂದಿರು ಖಾನಸಾಬನ ಮೊದಲ ಹೆಸರು ಮೊಹಮದ್ ಖಾನ್ . ಈತ ಕುಕನೂರಿನಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಮಾಲಿಕನಿಂದ ಕಳ್ಳತನದ ಆಪಾದಿತನಾಗಿ ಮನನೊಂದು ಕಳ್ಳತನಕ್ಕೆ ಇಳಿದ. ಗಂಗಾವತಿಗೆ ಬಂದು ದರೋಡೆಯನ್ನು ತನ್ನ ವೃತ್ತಿಯನ್ನಾಗಿ ಮಾಡಿಕೊಂಡ. ಗಂಗಾವತಿಯ ಸಿದ್ದಿಕೇರಿಯ ಜಾನಮ್ಮನ ವಟ್ಲದ ಗವಿಯನ್ನು ತನ್ನ ಅಡಗುದಾಣ ಮಾಡಿಕೊಂಡು ಕಳ್ಳತನಕ್ಕೆ ಇಳಿದ ಈ ಗವಿಯನ್ನು ಇಂದಿಗೂ ಖಾನಸಾಬನ ಗವಿ ಎಂದೇ ಕರೆಯುತ್ತಾರೆ. ಕಳ್ಳತನದ ಹಣದಲ್ಲಿ ಖಾನಸಾಬ ಬಡಬಗ್ಗರಿಗೆ ಸಹಾಯ ಮಾಡುತ್ತಿದ್ದ ಹಾಗಾಗಿ ಖಾನಸಾಬ ಜನಸಾಮಾನ್ಯರ ದೃಷ್ಟಿಯಲ್ಲಿ ಒಬ್ಬ ಹೀರೋ ಆಗಿದ್ದ.

ಆತನ ಕುರಿತಾಗಿ ಏಳುಗುಡ್ಡ ಪರಿಸರದ ಜನತೆ ಇಂದಿಗೂ ನಾಟಕಗಳನ್ನು ಆಡಿ ಆತನನ್ನು ಸ್ಮರಿಸಿಕೊಳ್ಳುತ್ತಾರೆ. ‌ಏಳುಗುಡ್ಡ ಪರಿಸರದಲ್ಲಿ ಖಾನಸಾಬನ ಅಡಗುದಾಣಗಳನ್ನು ಇಂದಿಗೂ ಖಾನಸಾಬ ಗವಿ(ಮಲ್ಲಾಪುರ, ಗಂಗಾವತಿ) ಖಾನಸಾಬ ವಟ್ಲ (ಎಮ್ಮಿಗುಡ್ಡ, ಬಂಡ್ರಾಳ, ಗಡ್ಡಿ)  ಗಳೆಂದು ಕರೆಯುತ್ತಾರೆ. ಖಾನಸಾಬನ ಉಪಟಳದಿಂದ ಬೇಸತ್ತ ಶ್ರೀ ಮಂತರು ಹೈದರಾಬಾದ್  ನಿಜಾಮ್ ಸರಕಾರಕ್ಕೆ ದೂರು ಸಲ್ಲಿಸಿದರು. ಆಗ ಗಂಗಾವತಿಯ  ನಿಜಾಮರ ಪೋಲೀಸರು  ಸ್ಥಳೀಯ ಗ್ರಾಮಗಳ ಮುಖಂಡರ ನೆರವಿನಿಂದ ಖಾನಸಾಬನನ್ನು  ಗುಂಡಿಟ್ಟು ಕೊಲ್ಲಲಾಯಿತು.

ಆತನ ಸಂಬಂಧಿಕರು ಖಾನಸಾಬನ ದೇಹವನ್ನು ಗಂಗಾವತಿಯಲ್ಲಿಯೇ ದಫನ್ ಮಾಡಿದರು.  ಈ ಸಂಗತಿ ಕಾಲಕ್ರಮೇಣ ಮರೆಯಾಗಿಹೋಗಿತ್ತು . ಗಂಗಾವತಿಯಲ್ಲಿರುವ ಖಾನಸಾಬನ ಮರಿಮೊಮ್ಮಗ ೯೫ ವರ್ಷದ ಹುಸೇನಖಾನ್ ರ ನೆರವಿನಿಂದ ಕೋಲ್ಕಾರ ಅವರು  ಖಾನಸಾಬನ ಸಮಾಧಿಯನ್ನು ಬೆಳಕಿಗೆ ತಂದಿದ್ದಾರೆ. ಪಂಪಾನಗರದ ಖಬರಸ್ಥಾನದ ಕೆರೆ ಏರಿಯ ಮೇಲೆ ಗೋರಿ ಇದ್ದು , ಅದರ ಸುತ್ತಲಿನ ಕಲ್ಲುಗಳು ಶಿಥಿಲವಾಗಿವೆ. ಈ ಗೋರಿಯನ್ನು ಸಂಭಂದಿಸಿದ ಸಮಾಜದವರು ದುರಸ್ತಿ ಗೊಳಿಸುವ ಮೂಲಕ ಚರಿತ್ರೆಯ ರೋಚಕ ಘಟನೆಯೊಂದಕ್ಕೆ ಸಾಕ್ಷಿ ಯಾಗಿರುವ ಅವಶೇಷವನ್ನು ರಕ್ಷಿಸಬೇಕು ಎಂದು ಕೋಲ್ಕಾರ ಕೋರಿದ್ದಾರೆ. ಖಾನಸಾಬನ ಸಮಾಧಿ ಗುರುತಿಸುವಲ್ಲಿ   ಗಂಗಾವತಿಯ ಮುಖಂಡ ಹನುಮಂತಪ್ಪ ನಾಯಕ ಹಾಗೂ ವಿದ್ಯಾರ್ಥಿ ಸುಭಾನ್ ಖಾನ್  ಕೂಡಾ ನೆರವಾಗಿದ್ದಾರೆ ಎಂದು ಕೋಲ್ಕಾರ  ಉದಯವಾಣಿ ಜತೆ ಮಾತನಾಡಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next