Advertisement

ಪಾಂಡವಪುರದಲ್ಲಿ ಫ್ರೆಂಚರ ಸಮಾಧಿಗಳು!  

12:46 PM Aug 11, 2024 | Team Udayavani |

ಶ್ರೀರಂಗಪಟ್ಟಣಕ್ಕೆ ಸಮೀಪವಿರುವ ಪಾಂಡವಪುರದಲ್ಲಿ ಫ್ರೆಂಚರದ್ದು ಎನ್ನಲಾಗುವ ಸಮಾಧಿಗಳಿವೆ. ಫ್ರಾನ್ಸ್‌ನ ಜನಕ್ಕೂ ಪಾಂಡವಪುರಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಹುಡುಕಹೊರಟರೆ, ಇತಿಹಾಸದ ಪುಟಗಳು ಕಥೆ ಹೇಳಲು ತೊಡಗುತ್ತವೆ…

Advertisement

ಎರಡು ಶತಮಾನಗಳ ಹಿಂದೆ ಮೈಸೂರಿನ ಇತಿಹಾಸದ ಕೇಂದ್ರ ಶ್ರೀರಂಗಪಟ್ಟಣ ಆಗಿ ಹಲವಾರು ಘಟನೆಗಳಿಗೆ ಸಾಕ್ಷಿಯಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೈದರಾಲಿ ಹಾಗೂ ಟಿಪ್ಪುಸುಲ್ತಾನರ ಕಾಲದಲ್ಲಿ ಬ್ರಿಟಿಷರ ಹಾಗೂ ಮೈಸೂರು ರಾಜಮನೆತನಗಳ ವಿಚಾರಗಳೇ ಹೆಚ್ಚು ಪ್ರಸ್ತಾಪವಾಗಿದ್ದು, ಇದರದೇ ಭಾಗವಾಗಿದ್ದ ಫ್ರೆಂಚ್‌ ಅಧಿಕಾರಿಗಳ ಸೈನ್ಯದ ಬಗ್ಗೆ ಅಲ್ಲೊಂಚೂರು ಇಲ್ಲೊಂದುಚೂರು ಮಾಹಿತಿ ಮಾತ್ರ ಸಿಗುತ್ತದೆ. ಶ್ರೀರಂಗಪಟ್ಟಣ ಹಾಗೂ ಸನಿಹದ ಪಾಂಡವಪುರಗಳಲ್ಲಿ ಫ್ರೆಂಚ್‌ ಅಧಿಕಾರಿಗಳ/ ಸೈನ್ಯಾಧಿಕಾರಿಗಳ ಬಗ್ಗೆ ಸಿಗುವ ಸಾಕ್ಷಿ, ದಾಖಲೆಗಳತ್ತ ಒಮ್ಮೆ ನೋಡೋಣ ಬನ್ನಿ.

ಹೈದರಾಲಿಯ ಆಡಳಿತವಿದ್ದ ಇಸವಿ 1760ರ ಕಾಲದಿಂದ, ಟಿಪ್ಪುಸುಲ್ತಾನ್‌ ಕಾಲದವರೆಗೆ (1782ರಿಂದ 1799)ಹಲವಾರು ಘಟನೆಗಳಲ್ಲಿ ಫ್ರೆಂಚರ ಪಾತ್ರ ಕಂಡುಬರುತ್ತದೆ. 1760ರಲ್ಲಿ ವ್ಯಾಪಾರ ವಹಿವಾಟು ಕುರಿತು ಫ್ರೆಂಚರ ರಾಜತಾಂತ್ರಿಕ ಸಂಬಂಧ ಶುರುವಾಯಿತು. ನಂತರ 1769ರ ವೇಳೆಗೆ ಹೈದರಾಲಿಯ ಸೈನ್ಯಕ್ಕೆ ತರಬೇತಿ, ಯುದ್ಧದ ಕೌಶಲ, ಸೈನ್ಯದ ನಿರ್ವಹಣೆ ಮುಂತಾದ ವಿಚಾರದಲ್ಲಿ ಫ್ರೆಂಚರ ಭಾಗವಹಿಸುವಿಕೆ ನಡೆದಿತ್ತು. ದ್ವಿತೀಯ ಮತ್ತು ತೃತೀಯ ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಹೈದರಾಲಿ, ಟಿಪ್ಪು ಸುಲ್ತಾನ್‌ ಸೈನ್ಯಕ್ಕೆ ಫ್ರೆಂಚರು ಎಲ್ಲಾ ರೀತಿಯ ಸಹಕಾರ ನೀಡಿದರು. ಮುಂದುವರೆದು, ಶ್ರೀರಂಗಪಟ್ಟಣ ಕೋಟೆಯನ್ನು ಸುಭದ್ರಗೊಳಿಸಲು ಅಗತ್ಯವಿದ್ದ ತಾಂತ್ರಿಕ ನೆರವನ್ನೂ ನೀಡಿದ್ದರು. 1799ರ ಕಡೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪುಸುಲ್ತಾನ್‌ ಮರಣ ಹೊಂದಿದ ನಂತರ, ಫ್ರೆಂಚರ ಪ್ರಭಾವ ತಗ್ಗಿತು. ನಂತರ ಕೆಲವು ಫ್ರೆಂಚ್‌ ಅಧಿಕಾರಿಗಳು ಮೈಸೂರು ಸಂಸ್ಥಾನವನ್ನು ತೊರೆದರೆ, ಕೆಲವರು ತಮ್ಮ ಕುಟುಂಬ ಸಹಿತ ಇಲ್ಲೇ ನೆಲೆ ನಿಂತು ಕಣ್ಮರೆಯಾದರು.

ಫ್ರೆಂಚರ ಕಾಲದ ಕಟ್ಟಡಗಳಿವೆ…

Advertisement

ಪಾಂಡವಪುರದಲ್ಲಿ ಯಾವ ದಿಕ್ಕಿನಿಂದ ನೋಡಿದರೂ ಮೊದಲು ಕಾಣುವುದು ಕುಂತಿಬೆಟ್ಟದ ಕೋಡುಗಲ್ಲುಗಳು. ಹೈದರಾಲಿ ಹಾಗೂ ಟಿಪ್ಪುವಿನ ವಿಶ್ವಾಸ ಗಳಿಸಿದ್ದ ಫ್ರೆಂಚರು, ಪಾಂಡವಪುರದಲ್ಲಿ ಒಂದು ತುಕಡಿ ಹೊಂದಿದ್ದರು. ಅದನ್ನು ಕುಂತಿಬೆಟ್ಟದಲ್ಲಿ ಉಳಿಸಲಾಗಿತ್ತು. ತಮ್ಮ ಸೈನ್ಯದ ಜೊತೆಗೆ ಸ್ಥಳೀಯ ಜನರನ್ನೂ ತಮ್ಮ ಸೇನಾ ತುಕಡಿಯ ಭಾಗವಾಗಿ ನಿಯೋಜಿಸಿಕೊಂಡು ಫ್ರೆಂಚರು ತರಬೇತಿ ನೀಡಿದ್ದರೆಂದು ತಿಳಿದುಬರುತ್ತದೆ. ಪಾಂಡವಪುರ ಪಟ್ಟಣದ ಒಡಲಲ್ಲೇ ಇರುವ, ಫ್ರೆಂಚರ ಕಾಲದ ನಿರ್ಮಾಣ ಎನ್ನಲಾಗುವ ಸರ್ಕಾರಿ ಪ್ರಾಥಮಿಕ ಶಾಲೆ ಇಂದಿಗೂ ಅಸ್ತಿತ್ವದಲ್ಲಿದ್ದು, ಹಳೆಯ ಕಟ್ಟಡ ವಿನ್ಯಾಸವನ್ನು ಅಡಗಿಸಿಕೊಂಡು ಹೊಸ ರೂಪದಲ್ಲಿ ನಿಂತಿದೆ. ಸನಿಹದಲ್ಲಿರುವ ಒಂದು ಪಾಳು ಕಟ್ಟಡ ಸಂಪೂರ್ಣ ಗಿಡಬಳ್ಳಿಗಳಿಂದ ಮುಚ್ಚಿಹೋಗಿದ್ದು ಇದೂ ಫ್ರೆಂಚರ ಕಾಲದ ನಿರ್ಮಾಣದಂತೆ ಕಾಣುತ್ತದೆ. ಕಟ್ಟಡದಲ್ಲಿ ಬಳಸಿರುವ ಚಪ್ಪೆ ಇಟ್ಟಿಗೆ, ಗಾರೆಗಚ್ಚು, ಮತ್ತು ವಿನ್ಯಾಸ, ಇದು ಎರಡು ಶತಮಾನದ ಹಿಂದಿನದು ಎಂದು ಗುರುತಿಸಲು ಸಾಕ್ಷಿಯಾಗಿ ನಿಂತಿದೆ. ಇಲ್ಲಿ ಫ್ರೆಂಚ್‌ ತುಕಡಿ ಇದ್ದ ಕಾರಣ, ಕುಂತಿ ಬೆಟ್ಟದಲ್ಲಿ ಸಮರಾಭ್ಯಾಸ ನಡೆಸಿರುವ ಕಾರಣ ಇದನ್ನು ಶಸ್ತ್ರಾಗಾರವೆಂದು ಭಾವಿಸಬಹುದಾಗಿದೆ.

12 ಸಮಾಧಿಗಳಿವೆ!

1760ರಿಂದ 1799ರ ವರೆಗೆ ಫ್ರೆಂಚರು ಪಾಂಡವಪುರದಲ್ಲಿ ವಾಸವಾಗಿದ್ದುದು ನಿಜ. ಆನಂತರದಲ್ಲಿ ಅವರ ಅಸ್ತಿತ್ವ ನಿಧಾನವಾಗಿ ಕರಗಿಹೊಯ್ತು. ಪಾಂಡವಪುರ ಪುರಸಭೆ ವ್ಯಾಪ್ತಿಯಲ್ಲಿರುವ ಹಾರೋಹಳ್ಳಿಯಲ್ಲಿ ಫ್ರೆಂಚ್‌ ಜನರದ್ದೆಂದು ಹೇಳಲಾಗುವ ಯುರೋಪಿಯನ್‌ ಶೈಲಿಯ ಸಮಾಧಿಗಳಿದ್ದು, ಅವುಗಳಲ್ಲಿನ ಕೆಲವು ಫ‌ಲಕಗಳಲ್ಲಿ ವಿದೇಶಿಯರ ಹೆಸರು ಕಂಡುಬರುತ್ತದೆ. ಹಾಲಿ ಕಣ್ಣಿಗೆ ಕಾಣುವ, ಶಿಥಿಲವಾಗಿರುವ ಸುಮಾರು ಒಂದು ಡಜನ್‌ ಸಮಾಧಿಗಳ ಪೈಕಿ ಮೂರರಲ್ಲಿ ಮಾತ್ರ ಫ‌ಲಕಗಳು ಕಂಡುಬರುತ್ತವೆ. ಈ ಸಮಾಧಿಗಳನ್ನು ಸಂರಕ್ಷಿಸಲು ತಾಲ್ಲೂಕು ಆಡಳಿತ ಹಾಗೂ ಕೆಲವು ಸ್ಥಳೀಯ ಆಸಕ್ತರು ಕ್ರಮವಹಿಸಿ ಒತ್ತುವರಿ ಜಾಗವನ್ನು ತೆರವುಗೊಳಿಸಿ ಕೈಲಾದಷ್ಟು ಸಂರಕ್ಷಿಸಿರುವುದು ಒಳ್ಳೆಯ ಬೆಳವಣಿಗೆ.

ಈಗಿನಷ್ಟು ಸಂಪರ್ಕ ಸಾಧನ ಇಲ್ಲದ ಸಮಯದಲ್ಲಿ ಯಾವ ಯಾವ ದೇಶದವರೋ ಕನ್ನಡ ನೆಲಕ್ಕೆ ಬಂದು ಇತಿಹಾಸದ ಭಾಗವಾಗಿರುವುದೇ ವಿಸ್ಮಯ ಅಲ್ವೇ!

ಹಿರೋಡೆ… ಫ್ರೆಂಚ್‌ ರಾಕ್ಸ್.. ಪಾಂಡವಪುರ!:

ಪಾಂಡವಪುರಕ್ಕೆ ಮೊದಲು “ಹಿರೋಡೆ’ ಎಂದು ಹೆಸರಿತ್ತು. ಈ ಹೆಸರಿನ ಹಿನ್ನೆಲೆ ಹುಡುಕಿದರೆ, ಮಹಾಭಾರತದ ಕಥೆ ಜೊತೆಯಾಗುತ್ತದೆ. ಐತಿಹ್ಯದ ಪ್ರಕಾರ, ಅಲ್ಲಿನ ಬೆಟ್ಟಸಾಲಿನಲ್ಲಿ ಬಕಾ­ಸುರ ಎಂಬ ರಾಕ್ಷಸನಿದ್ದ. ಅವನಿಗೆ ಚಿಕ್ಕಾಡೆ ಎಂಬ ಸ್ಥಳದಿಂದ ಚಿಕ್ಕ ಎಡೆ ಆಹಾರ, ಹಿರೋಡೆ (ಈಗಿನ ಪಾಂಡವಪ್ರುರ)ಯಿಂದ ಹಿರಿ ಎಡೆ (ದೊಡ್ಡ ಆಹಾರ) ಹೋಗುತ್ತಿತ್ತು. ಕಡೆಗೆ ಭೀಮ ಬಕಾ ಸುರ­ನನ್ನು ಕೊಂದ!  ಹೈದರಾಲಿ ಮತ್ತು ಟಿಪ್ಪು ಸುಲ್ತಾನ್‌ರ ಆಡಳಿತ ಕಾಲದಲ್ಲಿ ಫ್ರೆಂಚ್‌ ಸೈನ್ಯವನ್ನು ಈ ಸ್ಥಳದಲ್ಲಿ ಇರಿಸಿದ್ದರಿಂದ ಇದನ್ನು “ಫ್ರೆಂಚ್‌ ರಾಕ್ಸ್’ ಎಂದು ಕರೆಯ­ಲಾಯಿತು. ನಂತರ, ಈ ಸ್ಥಳದಲ್ಲಿ ಪಾಂಡ­ವರು ಉಳಿದಿದ್ದರೆಂಬ ಕುರುಹು ಕಾಣಿಸಿತೆಂದು ಪಾಂಡವ­ಪುರ ಎಂದು ಹೆಸರಿಸ ಲಾಯಿತು. ಸ್ವಾರಸ್ಯವೇನು ಗೊತ್ತೆ? ಪಾಂಡ­ವಪುರದಲ್ಲಿ ಈಗಲೂ ಹಿರೋಡೆ ಹೆಸರಿನ ಬೀದಿ ಇದೆ!

-ಕೆ.ಎಸ್‌. ಬಾಲಸುಬ್ರಹ್ಮಣ್ಯ, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next