Advertisement

ಭೂತಯ್ಯನ ಮೊಮ್ಮಗ ಅಯ್ಯಯ್ಯೋ!

05:10 PM May 04, 2018 | |

ಒಂದು ಗ್ರಾಮೀಣ ಸೊಗಡಿನ ಸಿನಿಮಾದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ. ಏನೆಲ್ಲಾ ಇರಬಾರದೋ ಅದೂ ಇಲ್ಲಿದೆ! ಇಷ್ಟು ಹೇಳಿದ ಮೇಲೆ “ಅಯ್ಯಯ್ಯೋ’ ಇದರಲ್ಲಿ ಅಂಥದ್ದೇನಿದೆ ಎಂಬ ಕುತೂಹಲವಿದ್ದರೆ, ಒಂದೊಮ್ಮೆ “ಭೂತಯ್ಯನ ಮೊಮ್ಮಗನ’ ಪೀಕಲಾಟ ನೋಡಿ ಬರಬಹುದು. ಆದರೆ, “ಬ್ಯಾಸರ’ ಮಾಡಿಕೊಂಡರೆ ನಾವು ಹೊಣೆಯಲ್ಲ. ಅಂದಹಾಗೆ, ಇದೊಂದು ಅಪ್ಪಟ ಗ್ರಾಮೀಣ್ಯ ಚಿತ್ರ. ಅಲ್ಲಿನ ಮಾತು, ಪರಿಸರ, ಪರಿಸ್ಥಿತಿ ಎಲ್ಲವನ್ನೂ ಒಂದೇ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ ತಕ್ಕಮಟ್ಟಿಗೆ ಸಾರ್ಥಕವೆನಿಸಿದೆ.

Advertisement

ಒಂದು ಹಳ್ಳಿಯಲ್ಲಿನ ಜನ ಹೇಗೆ ಹೊಂದಾಣಿಕೆಯಲ್ಲಿರುತ್ತಾರೆ, ಈಗಿನ ಕಾಲದಲ್ಲಿ ಅವರು ಹೇಗೆ ತಮ್ಮ ಬದುಕಿನ ಶೈಲಿಯನ್ನು ಬದಲಿಸಿಕೊಂಡಿದ್ದಾರೆ. ಆ ಊರಿನಲ್ಲಿ ಅಣ್ತಮ್ಮಂದಿರಂತಿರುವ ಗೆಳೆಯರು, ಕಷ್ಟ-ಸುಖಕ್ಕೆ ಆಗುವ ಬೆರಳೆಣಿಕೆಯ ಜನರು, ಇನ್ನೇನೋ ಬೇಕೆಂಬ ಹಪಹಪಿಸುವ ಮನಸ್ಸುಗಳು ಇತ್ಯಾದಿ ರೂಪಕಗಳು ಆ ಹಳ್ಳಿಯ ಪರಿಸರಕ್ಕೆ ಹಿಡಿದ ಕನ್ನಡಿ. ಚಿತ್ರದಲ್ಲಿ ಕಥೆ ಏನು ಅಂತ ಕೇಳುವಂತಿಲ್ಲ. ಚಿತ್ರಕಥೆ ಹೇಗಿದೆ ಅಂತಾನೂ ಹೇಳುವಂತಿಲ್ಲ.

ಆದರೆ, ಸಿನಿಮಾ ನೋಡೋರಿಗೆ ಅಲ್ಲಲ್ಲಿ ಮಜಾ, ಅಲ್ಲಲ್ಲಿ ಸಜಾ ಮಿಸ್‌ ಆಗಲ್ಲ. ಅಷ್ಟರಮಟ್ಟಿಗೆ ಅಯ್ಯುವಿನ ಭಾವಭಂಗಿಯ ಪ್ರದರ್ಶನವಿದೆ. ಕಥೆಯಲ್ಲಿ ತರಹೇವಾರಿ ಪಾತ್ರಗಳು ಓಡಾಡುತ್ತವೆ. ಅಲ್ಲಲ್ಲಿ ಡಬ್ಬಲ್‌ ಮೀನಿಂಗ್‌ ಮಾತುಗಳಿಗೆ ಆದ್ಯತೆ. ಮಿಕ್ಕಂತೆ ಲೋಕಲ್‌ ಮಾತಿಗೆ ಜಾಗ. ಕೆಲ ಪಾತ್ರಗಳಿಗೆ ಮೂಗುದಾರ ಹಾಕಿದ್ದರೆ, ನೋಡುಗನಿಗೆ ಎರ್ರಾಬಿರ್ರಿ ಬ್ಯಾಸರಕ್ಕೆ ಕಾರಣವಾಗುತ್ತಿರಲಿಲ್ಲ. ಎಲ್ಲೋ ಒಂದು ಪಾತ್ರ ಒಂದು ಕಥೆಯೊಳಗೆ ನುಸುಳಿದಾಗಲೇ, ಇನ್ನೊಂದು ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತೆ.

ಅಲ್ಲಿ ಯಾವ ರೋಚಕತೆಯೂ ಇಲ್ಲ. ಇಡೀ ಸಿನಿಮಾದುದ್ದಕ್ಕೂ ರೋಧನೆಯದ್ದೇ ಕಾರುಬಾರು. ತುಂಬಾನೇ ಸರಳವಾದ ಕಥೆಗೆ ಮಜವೆನಿಸುವ ದೃಶ್ಯಗಳು ಇರಬೇಕು ಎಂಬ ಉದ್ದೇಶದಿಂದ ನಿರ್ದೇಶಕರು ಒಂದಿಷ್ಟು ಹಾಸ್ಯ ಸೇರಿಸಿ, ನಗಿಸುವ ಪ್ರಯತ್ನ ಮಾಡಿದ್ದಾರೆ. ಒಂದು ಹಳ್ಳಿ ಸೊಗಡಿನ ಚಿತ್ರಕ್ಕೆ ನಿರ್ದೇಶಕರ ಕಲ್ಪನೆಯ ಪಾತ್ರಗಳು ಪ್ರಾಮಾಣಿಕ ಎನಿಸುತ್ತವೆ. ಆದರೆ, ಹಾಸ್ಯ ಬೇಕೆಂಬ ಕಾರಣಕ್ಕೆ, ಬೇಕಿಲ್ಲದ ಹಾಸ್ಯ ದೃಶ್ಯಗಳನ್ನು ಬಲವಂತವಾಗಿರಿಸಿರುವುದೇ ಬೇಸರ.

ಅಷ್ಟಾದರೂ, ಒಂದು ಗ್ರಾಮೀಣ ಪರಿಸರದ ಜನ ಹೇಗೆಲ್ಲಾ ಇರುತ್ತಾರೆ ಎಂಬುದಕ್ಕೆ “ಭೂತಯ್ಯನ ಮೊಮ್ಮಗ ಅಯ್ಯು’ ಸ್ಪಷ್ಟ ಉದಾಹರಣೆ. ಇಲ್ಲಿ ಕಲ್ಮಷ ಮನಸ್ಸುಗಳ ದಂಡಿದೆ, ಕಷ್ಟಕ್ಕೂ ಮಿಡಿವ ಹೃದಯಗಳಿವೆ. ಅದೊಂದೇ ಇಲ್ಲಿರುವ ತಾಕತ್ತು. ಭೂತಯ್ಯ ಆ ಊರಿನ ಜಿಪುಣ. ಅವನು ಬದುಕಿನುದ್ದಕ್ಕೂ ಖರ್ಚು ಮಾಡಿದ್ದು ಕೇವಲ 9 ರುಪಾಯಿ 25 ಪೈಸೆ ಮಾತ್ರ. ಅವನ ಮೊಮ್ಮಗ ಅಯ್ಯು 99 ಹೆಣ್ಣು ನೋಡಿದ್ದರೂ, ಅವನಿಗೆ ಒಂದು ಹೆಣ್ಣೂ ಒಪ್ಪಿರಲ್ಲ. ಕಾರಣ, ಅವನ ಅಂದ-ಚೆಂದ.

Advertisement

ಆದರೆ, 100ನೇ ಹುಡುಗಿಯನ್ನು ನೋಡಲು ಹೊರಡುವ ಅವನಿಗೆ ಆ ಹುಡುಗಿ ಸಿಗುತ್ತಾಳ್ಳೋ, ಇಲ್ಲವೋ ಎಂಬುದೇ ಕಥೆ. ಆ ಊರಲ್ಲಿ ಇನ್ನೂ ಒಂದು ಕಥೆ ಇದೆ. ಅಲ್ಲೊಂದು ಸಾವಿನ ಪ್ರಸಂಗವೂ ನಡೆದು ಹೋಗುತ್ತೆ. ಊರಿಗೇ ಬಡ್ಡಿ ಸಾಲ ಕೊಟ್ಟ ವ್ಯಕ್ತಿಯೊಬ್ಬ ಸತ್ತನೆಂದು, ಆ ಊರ ಕೆಲ ಜನ ಹಿಗ್ಗುತ್ತಾರೆ. ಆದರೆ, ಅಲ್ಲಿ ಇನ್ನೊಂದು ಪ್ರಸಂಗವೂ ನಡೆಯುತ್ತದೆ. ಅದೇ ಚಿತ್ರದ ತಿರುವು. ಚಿಕ್ಕಣ್ಣ ನಟನೆಯಲ್ಲಿ ಎಂದಿನ ಶೈಲಿ ಬಿಟ್ಟು ಹೊರ ಬಂದಿಲ್ಲ. ತಬಲಾ ನಾಣಿ ಎಂದಿನಂತೆ ಪಂಚಿಂಗ್‌ ಮಾತುಗಳನ್ನು ಹರಿಬಿಟ್ಟು, ನಗಿಸುವಲ್ಲಿ ಹಿಂದೆ ಬಿದ್ದಿಲ್ಲ.

ಉಳಿದಂತೆ ಹೊನ್ನವಳ್ಳಿ ಕೃಷ್ಣ, ರಾಕ್‌ಲೈನ್‌ ಸುಧಾಕರ್‌ ಆ ಹಳ್ಳಿಯ ಹಿರಿಯ ಜೀವಗಳಾಗಿ ಇಷ್ಟವಾಗುತ್ತಾರೆ. ಗಿರಿಜಾ ಲೋಕೇಶ್‌ ಅವರ ಬಾಯಲ್ಲಿ ಇಂಗ್ಲೀಷ್‌ ಪದ ಆಡಿಸದೇ ಹೋಗಿದ್ದರೆ, ಆ ಪಾತ್ರಕ್ಕೆ ಇನ್ನಷ್ಟು ಕಳೆ ಬರುತ್ತಿತ್ತು. ಶ್ರುತಿ ಹರಿಹರನ್‌ 100ನೇ ವಧು ಅನ್ನೋದು ಬಿಟ್ಟರೆ, ವಿಶೇಷವೇನಿಲ್ಲ. ಉಳಿದಂತೆ ವರ್ಧನ್‌, ಉಮೇಶ್‌, ಮನ್‌ದೀಪ್‌ ರಾಯ್‌, ಬುಲೆಟ್‌ ಪ್ರಕಾಶ್‌, ಪ್ರಶಾಂತ್‌ ಸಿದ್ಧಿ ಇರುವಷ್ಟು ಕಾಲ ಗಮನಸೆಳೆಯುತ್ತಾರೆ. ರವಿ ಬಸ್ರೂರ್‌ ಸಂಗೀತ ಹೇಳಿಕೊಳ್ಳುವಂಥದ್ದೇನೂ ಇಲ್ಲ. ನಂದಕುಮಾರ್‌ ಛಾಯಾಗ್ರಹಣದಲ್ಲಿ “ಅಯ್ಯು’ ಪಸಂದಗೌನೆ.

ಚಿತ್ರ: ಭೂತಯ್ಯನ ಮೊಮ್ಮಗ ಅಯ್ಯು
ನಿರ್ಮಾಣ: ಆರ್‌.ವರಪ್ರಸಾದ್‌ (ಶೆಟ್ಟಿ), ರವಿಶಂಕರ್‌, ಅನಿಲ್‌
ನಿರ್ದೇಶನ: ನಾಗರಾಜ್‌ ಪೀಣ್ಯ
ತಾರಾಗಣ: ಚಿಕ್ಕಣ್ಣ, ತಬಲನಾಣಿ, ಶ್ರುತಿಹರಿಹರನ್‌, ಹೊನ್ನವಳ್ಳಿ ಕೃಷ್ಣ, ಕೀರ್ತಿರಾಜ್‌, ರಾಕ್‌ಲೈನ್‌ ಸುಧಾಕರ್‌, ವರ್ಧನ್‌, ಬುಲೆಟ್‌ ಪ್ರಕಾಶ್‌, ಪ್ರಶಾಂತ್‌ ಸಿದ್ಧಿ ಮುಂತಾದವರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next