Advertisement

ತಳಮಟ್ಟದ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು: ಮಂಜುನಾಥ ಭಂಡಾರಿ

02:36 PM Apr 24, 2022 | Team Udayavani |

ಹೆಮ್ಮಾಡಿ: ಕಾರ್ಯಕರ್ತರು ಸಕ್ರಿಯರಾಗಿದ್ದಾಗ ಮಾತ್ರ ಪಕ್ಷ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ. ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲೂ ಸದಸ್ಯರು, ಪರಾಜಿತರಾದವರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ತಳಮಟ್ಟದಲ್ಲಿ ಪಕ್ಷ ಸಂಘಟನೆ ಇನ್ನಷ್ಟು ಬಲಗೊಳ್ಳುವ ಅಗತ್ಯವಿದೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ ಹೇಳಿದರು.

Advertisement

ಶನಿವಾರ ಹೆಮ್ಮಾಡಿಯ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ನಡೆದ ಗಂಗೊಳ್ಳಿ ಜಿ.ಪಂ. ವ್ಯಾಪ್ತಿಯ ಕ್ಷೇತ್ರವಾರು ಪ್ರಮುಖರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪರಿಷತ್‌ ಸದಸ್ಯರಿಗೆ ಸಿಗುವ ಅನುದಾನವನ್ನು ಅಗತ್ಯವಿರುವ ಗ್ರಾ.ಪಂ.ಗಳಿಗೆ ಅದ್ಯತೆ ನೆಲೆಯಲ್ಲಿ ಹಂಚಿಕೆ ಮಾಡಲಾಗುವುದು. ಎಲ್ಲೆಲ್ಲಿ ಅಗತ್ಯವಿದೆ ಅನ್ನುವುದನ್ನು ತಿಳಿಸುವಂತಹ ಕಾರ್ಯ ಸ್ಥಳೀಯ ಜನಪ್ರತಿನಿಧಿಗಳು ಮಾಡಬೇಕಿದೆ. ತಾನು ಕಳೆದ ಚುನಾವಣೆಯಲ್ಲಿ ಗೆಲ್ಲಿಸಲು ಸಹಕರಿಸಿದ ಗ್ರಾ.ಪಂ. ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಬೂತ್‌ ಮಟ್ಟದ ಕಾರ್ಯಕ್ರಮ

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಚುನಾವಣೆ ಹತ್ತಿರ ಬರುವಾಗ ಬಿಜೆಪಿ ಭಾವನಾತ್ಮಕ ನೆಲೆಯಲ್ಲಿ ಜನರನ್ನು ಮರುಳು ಮಾಡಲು ಅನೇಕ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತದೆ. ಕಾರ್ಯಕರ್ತರು ವಿಚಲಿತರಾಗದೆ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷದ ಬಲ ವರ್ಧನೆಯಲ್ಲಿ ಕೈಜೋಡಿಸಬೇಕು.

ಹಿಂದೆ 4 ಬಾರಿ ಶಾಸಕನಾಗಿದ್ದು, ಆಗ ಬೈಂದೂರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯವನ್ನು ಆಯಾಯ ಗ್ರಾಮಗಳಲ್ಲಿ ತಿಳಿಸುವ ಪ್ರಯತ್ನವನ್ನು ಸದಸ್ಯರು, ಸ್ಥಳೀಯ ಮುಖಂಡರು ಮಾಡಬೇಕು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಲ್ಲೂರಿನಿಂದ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಕಾರ್ಯ ಆರಂಭಗೊಳ್ಳಲಿದೆ ಎಂದು ಕೆ. ಗೋಪಾಲ ಪೂಜಾರಿ ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಕುಮಾರ್‌ ಕೊಡವೂರು ಮಾತನಾಡಿದರು. ಕಾಂಗ್ರೆಸ್‌ ಪಂಚಾಯತ್‌ರಾಜ್‌ ಸಂಘಟನೆಯ ಜಿಲ್ಲಾಧ್ಯಕ್ಷೆ ರೋಶನಿ ಒಲಿವೆರಾ, ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ. ಪ್ರದೀಪ್‌ ಕುಮಾರ್‌ ಶೆಟ್ಟಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಮಂಜುಳಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ಗಂಗೊಳ್ಳಿ ಜಿ.ಪಂ. ವ್ಯಾಪ್ತಿಯ ಗುಜ್ಜಾಡಿ, ಹೆಮ್ಮಾಡಿ, ಕಟ್‌ಬೆಲ್ತೂರು, ಹೊಸಾಡು, ಗಂಗೊಳ್ಳಿ, ತ್ರಾಸಿ ಗ್ರಾ.ಪಂ. ಸದಸ್ಯರು, ನಾಯಕರು, ಕಾರ್ಯಕರ್ತರು ಇದ್ದರು. ಪ್ರಸನ್ನ ಕುಮಾರ್‌ ಶೆಟ್ಟಿ ಕೆರಾಡಿ ಸ್ವಾಗತಿಸಿ, ಶರತ್‌ ಕುಮಾರ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next