Advertisement
ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿಯ ಬಿ.ಸಿ.ರೋಡು -ಪೆರಿಯ ಶಾಂತಿ ಮಧ್ಯೆ 48.50 ಕಿ.ಮೀ. ಭಾಗವನ್ನು ಕೆಎನ್‌ಆರ್ ಕಂಪೆನಿ ಅಭಿವೃದ್ಧಿಪಡಿಸುತ್ತಿದೆ. ಈ ಮಧ್ಯೆ ಅಧಿಕ ಪ್ರಮಾಣದ ಮಣ್ಣು ತುಂಬಿಸಿರುವ 20ಕಡೆಗಳಲ್ಲಿ ಈ ರೀತಿ ಹುಲ್ಲು ಬೆಳೆಸಲುಸ್ಥಳ ಗುರುತಿಸಿದ್ದು, ಪಾಣೆಮಂಗಳೂರು ಭಾಗದಲ್ಲಿ ಅದರ ಕೆಲಸವೂ ಆರಂಭಗೊಂಡಿದೆ. ಕರಾವಳಿ ಭಾಗದಲ್ಲಿ ಇಂತಹ ಪ್ರಯೋಗ ಇದೇ ಮೊದಲು.
ಹುಲ್ಲು ಬೆಳೆಸುವ ಗುತ್ತಿಗೆಯನ್ನು ತಮಿಳುನಾಡು ಮೂಲದ ಸಂಸ್ಥೆಗೆ ವಹಿಸಲಾಗಿದ್ದು, ಕಾರ್ಮಿಕರು ಬಿ.ಸಿ.ರೋಡು ಸರ್ಕಲ್‌ನಿಂದ ಮುಂದಕ್ಕೆ ಪಾಣೆಮಂಗಳೂರು ಭಾಗಕ್ಕೆ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಲ್ಲಿ ತೆಂಗಿನ ನಾರಿನ ಮ್ಯಾಟ್‌ಗಳನ್ನು ಜೋಡಿಸಿ ಹುಲ್ಲು ನೆಡುತ್ತಿದ್ದಾರೆ. ಅಲ್ಲಿ ವಾಹನಗಳು ರಸ್ತೆಯಿಂದ ಕೆಳಕ್ಕೆ ಜಾರದಂತೆ ತಡೆಯಲು ಮೆಟಲ್ ಬೀಮ್ ಹೆವಿ ಗಾರ್ಡ್‌ಗಳನ್ನೂ ಅಳವಡಿಸಲಾಗಿದೆ. 10 ವರ್ಷಗಳ ನಿರ್ವಹಣೆ
ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡರೂ ಗುತ್ತಿಗೆ ಕಂಪೆನಿ ಯು 10 ವರ್ಷಗಳ ಕಾಲ ಇಲ್ಲೇ ಇದ್ದು, ಹೆದ್ದಾರಿಯ ನಿರ್ವಹಣೆ ಮಾಡಲಿದೆ. ಹೀಗಾಗಿ ಪ್ರಸ್ತುತ ನೆಟ್ಟಿರುವ ಹುಲ್ಲು ಎತ್ತರಕ್ಕೆ ಬೆಳೆದಾಗ ಕಟಾವು ಮಾಡಿ ಮತ್ತೆ ಸೊಂಪಾಗಿ ಬೆಳೆಯುವಂತೆ ನಿರ್ವಹಣೆ ಮಾಡಲಿದೆ. ಮುಂದೆ ಮತ್ತೆ ಹೆದ್ದಾರಿ ನಿರ್ವಹಣೆಯ ಟೆಂಡರ್ ಕರೆದು ಆಗಿನ ಸಂಸ್ಥೆಯು ಹುಲ್ಲು ಬೆಳೆದಿರುವ ಪ್ರದೇಶದ ನಿರ್ವಹಣೆ ಮಾಡಬೇಕಿದೆ ಎನ್ನಲಾಗಿದೆ.
Related Articles
ಲಾವಂಚ ಮಾದರಿಯ ಈ ಹುಲ್ಲು ಹೆಚ್ಚಿನ ಎತ್ತರಕ್ಕೆ ಬೆಳೆಯಲಿದ್ದು ಬೇರುಗಳು ವಿಸ್ತಾರವಾಗಿ ಹರಡಿ ಮಣ್ಣನ್ನು ಹಿಡಿದಿಟ್ಟುಕೊಳ್ಳುವುದರಿಂದ ಮಣ್ಣು ಜರಿಯುವ ಅಥವಾ ನೀರಿನಲ್ಲಿ ಕೊಚ್ಚಿಹೋಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಜತೆಗೆ ಹೆದ್ದಾರಿ ಬದಿಯ ಸೌಂದರ್ಯವೂ ವೃದ್ಧಿಸಲಿದೆ.
Advertisement
ಮಣ್ಣು ಕುಸಿಯದಂತೆ ಕಾಪಾಡುವ ಜತೆಗೆ ರಸ್ತೆಯ ಸಾಮರ್ಥ್ಯ ಕಾಪಾಡುವ ದೃಷ್ಟಿಯಿಂದ 20 ಕಡೆಗಳಲ್ಲಿ ಈ ರೀತಿ ಹುಲ್ಲು ಬೆಳೆಸಲು ಸ್ಥಳ ಗುರುತಿಸಿದ್ದೇವೆ. ಕೆಲಸದ ಗುತ್ತಿಗೆಯನ್ನು ತಮಿಳುನಾಡು ಮೂಲದವರಿಗೆ ನೀಡಲಾಗಿದ್ದು, ಅಲ್ಲಿನ ಕಾರ್ಮಿಕರು ಹುಲ್ಲಿನ ಮ್ಯಾಟ್‌ಗಳನ್ನು ಜೋಡಿಸುತ್ತಿದ್ದಾರೆ.– ನಂದಕುಮಾರ್ ಸಾರ್ವಜನಿಕ ಸಂಪರ್ಕಾಧಿಕಾರಿ, ಕೆಎನ್‌ಆರ್ ಕನ್‌ಸ್ಟ್ರಕ್ಷನ್ -ಕಿರಣ್ ಸರಪಾಡಿ