Advertisement

Grass: ಹುಲ್ಲು ತೃಣಮಾತ್ರವಲ್ಲ! ಪ್ರಪಂಚದಲ್ಲಿ 12,000 ಜಾತಿಯ ಹುಲ್ಲುಗಳಿವೆ…

06:00 PM Aug 15, 2023 | Team Udayavani |

ಅದೊ! ಹುಲ್ಲಿನ ಮಕಮಲ್ಲಿನ ಜೊಸಪಚ್ಚೆಯ ಜಮಖಾನೆ ಪಸರಿಸಿ ತಿರೆ ಮೈ ಮುಚ್ಚಿರೆ ಬೇರೆ ಬಣ್ಣವನೆ ಕಾಣೆ! ಕವಿಪುಂಗವ ಕುವೆಂಪು ಹಸಿರ ಹುಲ್ಲನ್ನು ವರ್ಣಿಸಿದ್ದು ಹೀಗೆ. ಜಾರ್ಜ್‌ ಬರ್ನಾರ್ಡ್‌ ಷಾ ಹೇಳಿದ್ದು – ಭೂಮಿಯ ಚರ್ಮವೇನಾದರೂ ಇದ್ದರೆ ಅದು ಹುಲ್ಲಂತೆ. ಆಹಾರದಿಂದ ಬಯೋಫ್ಯೂ ಯೆಲ್‌ ವರೆಗಿನ ಹಿಡಿತ ಹೊಂದಿರುವ ಹುಲ್ಲು ಬರಿಯ ಹುಲ್ಲಾಗಿ ಉಳಿದಿಲ್ಲ.

Advertisement

ಹುಲ್ಲು ಹೂ ಬಿಡುವ ಸಸ್ಯವರ್ಗದ ವೈವಿಧ್ಯಮಯ ಪ್ರಜಾತಿ. ಪ್ರಪಂಚದಲ್ಲಿ ಅಂದಾಜು 12,000 ಜಾತಿಯ ಹುಲ್ಲುಗಳಿವೆ. ಅದೆಷ್ಟು ಬಗೆಯ ಹುಲ್ಲನ್ನು ನೀವು ಗಮನಿಸಿದ್ದೀರಿ? ಮಜ್ಜಿಗೆ ಹುಲ್ಲು, ಲಾವಂಚ, ಗರಿಕೆ, ದರ್ಭೆ, ಚಪ್ಪರಿಕೆ, ಜೊಂಡು, ಚಾಪೆ ಹುಲ್ಲು, ಬಳುಕುವ ಹುಲ್ಲು, ಮುಳಿಹುಲ್ಲು, ಭತ್ತ-ಗೋಧಿ ಹುಲ್ಲು, ಟರ್ಫ್ ಕೆಂಟುಕಿ ಹುಲ್ಲು, ಗಾಲ್ಫ್ ಹಸಿರಿನ ಬರ್ಮುಡಾ ಹುಲ್ಲು, ರೇಶಿಮೆ ಹೂವಿನ ಪಂಪಾಸ್‌ ಹುಲ್ಲು ಹಾಗೂ ಹೆಸರಿಸಲಾಗದ ಇನ್ನೂ ಸಾವಿರಾರು. ಉದ್ಯಾನವನಗಳಲ್ಲಿ ಬೆಳೆಸುವ ಕಂಬಳಿಯ ನುಣುಪಿನ ಲಾನ್‌ ಹುಲ್ಲು ಇಂಚುಗಳಷ್ಟೆತ್ತರಕ್ಕೇ ಚಾಚಬಲ್ಲದು. ಚಾಪೆಯ ಹುಲ್ಲು, ಕಬ್ಬಿನ ಹುಲ್ಲು, ಬಿದಿರಿನ ಪ್ರಭೇದಗಳು ಆಕಾಶದೆತ್ತರಕ್ಕೂ ಬೆಳೆಯಬಲ್ಲವು. ಹುಲ್ಲು ಆಹಾರಧಾನ್ಯಗಳನ್ನು ಒದಗಿಸುವ ಪ್ರಮುಖ ಆಕರ. ಇಷ್ಟು ಮಾತ್ರವಲ್ಲದೇ ಅದು ಒದಗಿಸುವ ಜೀವನ ಪಾಠಗಳೂ ಅನೇಕ. ‌

ಕೃಶಕಾಯವಾಗಿದ್ದರೂ ಎಂತಹ ಕಾರ್ಪಣ್ಯಕ್ಕೂ ಹೊಂದಿಕೊಳ್ಳಿ ಎನ್ನುವುದನ್ನು ಹುಲ್ಲು ಕಲಿಸುತ್ತದೆ. ಗಾಳಿಬಂದಾಗ ತೂರಿಕೋ ಎನ್ನುವಂತೆ ಹುಲ್ಲು ಗಾಳಿಯಲ್ಲಿ ಬಾಗುತ್ತದೆ, ಆದರೆ ಅದು ಸೀಳುವುದಿಲ್ಲ. ಜೀವನದಲ್ಲಿ ಹೊಂದಿಕೊಳ್ಳುವುದು ಮುಖ್ಯ ಎಂದು ಇದು ನಮಗೆ ಕಲಿಸುತ್ತದೆ. ಜೀವನದಲ್ಲಿ ಸಂಭವಿಸುವ ಎಲ್ಲ ಘಟನೆಗಳನ್ನೂ ನಾವು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ನಮ್ಮ ಪ್ರತಿಕ್ರಿಯೆಗಳನ್ನು ನಿಯಂತ್ರಿಸಬಹುದು. ನಾವು ತುಂಬಾ ಕಠಿನವಾಗಿದ್ದರೆ, ಜೀವನದ ಸವಾಲುಗಳಿಂದ ನಾವು ಸುಲಭವಾಗಿ ಆಘಾತಗೊಳ್ಳುತ್ತೇವೆ. ಹುಲ್ಲು ನಮ್ಯತೆಯ ಸಂಕೇತ.

ಎಂತಹ ಪ್ರತಿಕೂಲ ಪ್ರರಿಸ್ಥಿತಿಯಲ್ಲಿಯೂ ಸ್ಥಿತಿಸ್ಥಾಪಕರಾಗಿರಿ ಎನ್ನುವುದು ಹುಲ್ಲು ಹೇಳುವ ಇನ್ನೊಂದು ಪಾಠ. ಶೀತೋಷ್ಣಗಳನ್ನು ಸಹಿಸಿ ಕಠಿನ ಪರಿಸ್ಥಿತಿಗಳಲ್ಲಿಯೂ ಹುಲ್ಲು ಬದುಕಬಲ್ಲದು. ಪ್ರತಿಕೂಲ ಪರಿಸ್ಥಿತಿಯಲ್ಲಿ ಸ್ಥಿತಿಸ್ಥಾಪಕರಾಗಿ ಸ್ಥಿತಪ್ರಜ್ಞನಂತೆ ಸವಾಲುಗಳನ್ನು ಬೆನ್ನತ್ತಿ ಜಯಿಸುವ ಮಾರ್ಗವನ್ನು ಹುಲ್ಲು ಹೇಳುತ್ತದೆ. ಹುಲ್ಲು ತೆನೆಯುವುದು ಬದಲಾವಣೆಗೆ ತೆರೆದು ಮತ್ತೆ ಮೊಳೆಯುವ ಸಂಕೇತ. ಸತತ ನಿರಂತರತೆಯಲ್ಲಿರುವ ಭೂಮಿ-ಹುಲ್ಲು ಹಳತರಲ್ಲಿರುವ ಹೊಸತನ್ನು ಸೂಸುತ್ತದೆ. ಹುಲ್ಲಾ ಗು ಬೆಟ್ಟದಡಿ ಎನ್ನುವಂತೆ ತನ್ನತನಕ್ಕೆ ಸಂತುಷ್ಟರಾಗಿರುವ ಇನ್ನೊಂದು ವಿಷಯಕ್ಕೂ ಹುಲ್ಲು ಉದಾಹರಣೆ. ಹುಲ್ಲು ಹುಲ್ಲಿನಂತೆ ತೃಪ್ತ, ಸಂಪೂರ್ಣ. ನಮ್ಮಲ್ಲಿರುವುದರಿಂದ ನಾವು ತೃಪ್ತರಾಗಿರಬೇಕು ಎಂದು ಇದು ನಮಗೆ ಕಲಿಸುತ್ತದೆ. ಸಂತೋಷವಾಗಿರಲು ಪ್ರತಿಯೊಬ್ಬರೂ ಹೊಂದಿರುವ ಎಲ್ಲವನ್ನೂ ನಾವು ಹೊಂದಬೇಕಾಗಿಲ್ಲ.

ಸಾಮರಸ್ಯತೆ ಹುಲ್ಲು ಕಲಿಸುವ ಅಮೂಲ್ಯ ಮೌಲ್ಯ. ಹುಲ್ಲು ಒಂದು ದೊಡ್ಡ ಪರಿಸರ ವ್ಯವಸ್ಥೆಯ ಭಾಗವಾಗಿದೆ. ಇದು ಪ್ರಾಣಿಗಳಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುತ್ತದೆ, ಮಣ್ಣನ್ನು ಹಿಡಿದಿಡುತ್ತದೆ. ಪರಸ್ಪರ ಮತ್ತು ನೈಸರ್ಗಿಕ ಪ್ರಪಂಚದೊಂದಿಗೆ ಸಂಪರ್ಕ ಹೊಂದಿರುವ ಹುಲ್ಲು ಮೇವಿನಿಂದ ಛಾವಣಿಯವರೆಗೂ ಹೊಂದಾಣಿಕೆಯ ತಣ್ತೀವನ್ನೇ ಹೇಳುತ್ತದೆ.

Advertisement

ಹುಲ್ಲು ಪರಿಸರ ವ್ಯವಸ್ಥೆಗೆ ವ್ಯಾಪಕವಾದ ಪ್ರಯೋಜನಗಳನ್ನು ಹೊಂದಿರುವ ಹಾಗೂ ಗಡುಸಾದ ಸಸ್ಯಗಳಾಗಿವೆ. ಪರಿಸರ ವ್ಯವಸ್ಥೆಯಲ್ಲಿ ಮಣ್ಣಿನ ಸ್ಥಿರೀಕರಣ, ಇಂಗಾಲದ ಸೀಕ್ವೆಸ್ಟ್ರೇಶನ್‌, ಆವಾಸಸ್ಥಾನ ಸೃಷ್ಟಿ, ಮಣ್ಣಿನ ಸವೆತ ನಿಯಂತ್ರಣ ಮತ್ತು ಜಾನುವಾರು ಆಹಾರದಲ್ಲಿ ಹುಲ್ಲು ನಿರ್ಣಾಯಕ ಪಾತ್ರವಹಿಸುತ್ತವೆ. ಹಾಗಾಗಿ ತೃಣ ಮಾತ್ರವಲ್ಲ, ಅಸಾಮಾನ್ಯ.

*ವಿಶ್ವನಾಥ ಭಟ್‌ , ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next