ಬೆಂಗಳೂರು: ಸ್ಥಳೀಯ ಸರ್ಕಾರಗಳಾಗಿರುವ ಗ್ರಾಮ ಪಂಚಾಯಿತಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬೇಕೆಂಬ ಸರ್ಕಾರದ ಪ್ರಯತ್ನಕ್ಕೆ ಸ್ವತಃ ಗ್ರಾಮ ಪಂಚಾಯಿತಿಗಳಿಂದಲೇ ಸ್ಪಂದನೆ ಸಿಗುತ್ತಿಲ್ಲ.
ಇದಕ್ಕೆ ಉದಾಹರಣೆ ಎಂದರೆ 2015ರಲ್ಲೇ ತಿದ್ದುಪಡಿ ತಂದಿದ್ದರೂ ರಾಜ್ಯದ 6,024 ಗ್ರಾಪಂಗಳ ಪೈಕಿ ಕೇವಲ 1,400 ಗ್ರಾಪಂಗಳು ಮಾತ್ರ ತೆರಿಗೆ ದರ ಪರಿಷ್ಕರಣೆ ಮಾಡಿವೆ. ಗ್ರಾಪಂಗಳ ಈ ಅಸಡ್ಡೆಯಿಂದಾಗಿ ಕೋಟಿಗಟ್ಟಲೇ ಆದಾಯ ಖೋತಾ ಆಗುತ್ತಿದೆ.
ತೆರಿಗೆ ದರ ಪರಿಷ್ಕರಣೆ ಮಾಡಲು ಕಾಯ್ದೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದರೂ, ಈ ಸಂಬಂಧ ಗ್ರಾಮೀಣಾಭಿವೃದ್ಧಿ ಇಲಾಖೆ ಕಾಲಕಾಲಕ್ಕೆ ಸುತ್ತೋಲೆಗಳನ್ನು ಹೊರಡಿಸಿ ನೆನಪಿಸುತ್ತಿದ್ದರೂ ಗ್ರಾಪಂಗಳು ಮಾತ್ರ ಎಚೆತ್ತುಕೊಳ್ಳುತ್ತಿಲ್ಲ. ಗ್ರಾಪಂಗಳು ತಮ್ಮದೇ ಸ್ವಯಂಕೃತ ಅಪರಾಧದಿಂದಾಗಿ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶಗಳನ್ನು ಕೈಚೆಲ್ಲುತ್ತಿವೆ. ಒಂದೆಡೆ 6,024 ಗ್ರಾಪಂಗಳಲ್ಲಿ ಸದ್ಯ 1 ಸಾವಿರ ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿದಿದ್ದರೆ,ಮತ್ತೂಂದು ಕಡೆ ಕಳೆದ ಮೂರು ವರ್ಷಗಳಿಂದ 5 ಸಾವಿರಕ್ಕೂ ಹೆಚ್ಚು ಗ್ರಾಪಂಗಳು ತೆರಿಗೆಯನ್ನೇ ಪರಿಷ್ಕರಿಸಿಲ್ಲ. ಇದರಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ಬಹುದೊಡ್ಡ ತೊಡಕಾಗುತ್ತಿದೆ.
ಇದರಿಂದ ಎಚ್ಚೆತ್ತುಕೊಂಡಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಗ್ರಾಪಂಗಳಲ್ಲಿ ಬಾಕಿ ತೆರಿಗೆ ವಸೂಲಿ ಮತ್ತು ತೆರಿಗೆ ಪರಿಷ್ಕರಣೆಗೆ ವಿಶೇಷ ಅಭಿಯಾನ ನಡೆಸಲು ಮುಂದಾಗಿದೆ. ಬಾಕಿ ವಸೂಲಿ ಮತ್ತು ತೆರಿಗೆ ಪರಿಷ್ಕರಣೆ ಬಗ್ಗೆ ಪ್ರಗತಿ ತಿಂಗಳು ಕಡ್ಡಾಯವಾಗಿ ಪರಿಶೀಲಿಸಿ ಪ್ರಗತಿ ಸಾಧಿಸುವ ಗ್ರಾಪಂಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಹಿನ್ನಡೆ ಸಾಧಿಸುವ ಗ್ರಾಪಂಗಳಿಗೆ ಎಚ್ಚರಿಕೆ ಕೊಟ್ಟು, ಬಾಕಿ ವಸೂಲಿ ಕಾರ್ಯಚುರುಕುಗೊಳಿಸಲು ತಾಕೀತು ಮಾಡುವಂತೆ ಎಲ್ಲ ಜಿಪಂ ಸಿಇಓಗಳಿಗೆ ಸೂಚನೆ ನೀಡಿದೆ.
ಯಾವುದಕ್ಕೆ ಎಷ್ಟು ತೆರಿಗೆ?: ವಾಸದ ಕಟ್ಟಡಗಳಿಗೆ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ.0.05ರಿಂದ ಗರಿಷ್ಠ ಶೇ.0.10, ವಾಣಿಜ್ಯ ಕಟ್ಟಡಗಳಿಗೆ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ.0.20ರಿಂದ ಶೇ.05, ಕೈಗಾರಿಕೆಗಳಿಗೆ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ. 0.4ರಿಂದ ಗರಿಷ್ಠ ಶೇ.1, ಖಾಲಿ ಜಮೀನುಗಳಿಗೆ ಸಾವಿರ ಚದರ ಅಡಿ ಗಿಂತ ಹೆಚ್ಚಿಲ್ಲದ ಜಮೀನಿಗೆ ಅದರ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ.0.05ರಿಂದ ಗರಿಷ್ಠ ಶೇ.0.1, ಸಾವಿರದಿಂದ 4 ಸಾವಿರ ಚ. ಮೀ.ಗಿಂತ ಕಡಿಮೆ ಜಮೀನಿಗೆ ಸ್ವತ್ತಿನ ಮೌಲ್ಯದ ಮೇಲೆ ಕನಿಷ್ಠ 0.02ರಿಂದ ಗರಿಷ್ಠ ಶೇ.0.05, 4 ಸಾವಿರ ಚ.ಮೀ.ಗಿಂತ ಹೆಚ್ಚಿರುವ ಜಮೀನಿಗೆ ಸ್ವತ್ತಿನ ಮೂಲ ಮೌಲ್ಯದ ಕನಿಷ್ಠ ಶೇ.0.01ರಿಂದ ಗರಿಷ್ಠ ಶೇ. 0.02 ತೆರಿಗೆ ವಿಧಿಸಬಹುದು.
ಅದೇ ರೀತಿ ಮೊಬೈಲ್ ಟವರ್‌ಗೆ ಪ್ರತಿ ಟವರ್‌ಗೆ ವರ್ಷಕ್ಕೆ 12 ಸಾವಿರ ರೂ., ವಿಂಡ್‌ಮಿಲ್‌ಗಳಿಗೆ ಟರ್ಬೈನ್‌ಗಳನ್ನು ಆಧರಿಸಿ ವಾರ್ಷಿಕ 1 ಲಕ್ಷ ರೂ.ವರೆಗೆ, ಸೋಲಾರ್ ಪಾರ್ಕ್‌ಗಳಿಗೆ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ.0.50ರಿಂದ ಗರಿಷ್ಠ ಶೇ.1.50, ಆಪ್ಟಿಕಲ್ ಫೈಬರ್ ಕೇಬಲ್‌ಗಳಿಗೆ ರಸ್ತೆ ಅಗೆಯಲು ಮೂರು ನಾಳಗಳಿಗೆ ಪ್ರತಿ ಮೀಟರ್‌ಗೆ 450 ರೂ. ಮನೋರಂಜನೆ ಮೇಲೆ ಪ್ರತಿ ಪ್ರದರ್ಶನಕ್ಕೆ 50 ರೂ, ವಾಹನ ನಿಲುಗಡೆಗೆ ಬಸ್, ಲಾರಿಗಳಿಗೆ ದಿನಕ್ಕೆ 50 ರೂ, ಕಾರ್, ಲಘು ಮೋಟಾರು ವಾಹನಗಳಿಗೆ 20 ರೂ, ಮೋಟಾರು ಸೈಕಲ್‌ಗೆ 10 ರೂ, ಇತರೆ ವಾಹನಗಳಿಗೆ ಕನಿಷ್ಠ ದಿನಕ್ಕೆ 1ರಿಂದ ಗರಿಷ್ಠ 10 ರೂ., ಮಾರುಕಟ್ಟೆ ಪ್ರದೇಶಗಳಲ್ಲಿ ವಿಸ್ತೀರ್ಣ ಆಧರಿಸಿ ಕನಿಷ್ಠ 2ರಿಂದ ಗರಿಷ್ಠ 5 ರೂ.ಸಂತೆ ಮತ್ತು ಜಾತ್ರೆಗಳಲ್ಲಿ ಮಾರಾಟಕ್ಕೆ ತರುವ ಜಾನುವಾರುಗಳಿಗೆ ದಿನಕ್ಕೆ 5 ರೂ, ನೀರು ಸರಬರಾಜು ಮಾಡಲು ಮನೆಗಳಿಗೆ ನೇರ ಸಂಪರ್ಕಕ್ಕೆ ಕನಿಷ್ಠ 25 ರೂ, ಸಾರ್ವಜನಿಕ ನಲ್ಲಿ ನೀರು ಕನಿಷ್ಠ 10 ರೂ. ತೆರಿಗೆ ವಿಧಿಸಲು ಅವಕಾಶವಿದೆ.
ಬಾಕಿ ವಸೂಲಿ ಮತ್ತು ತೆರಿಗೆ ಪರಿಷ್ಕರಣೆಯಲ್ಲಿ ಆಗುತ್ತಿರುವ ವಿಳಂಬ ಇಲಾಖೆಯ ಗಮನಕ್ಕೆ ಬಂದಿದೆ. ಇದಕ್ಕಾಗಿ ಅಭಿಯಾನ ರೂಪದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದೆ. ಶುಕ್ರವಾರಷ್ಟೇ (ಸೆ.7) ಮತ್ತೂಂದು ಸಭೆ ನಡೆಸಿ ಜಿಪಂ ಸಿಇಓಗಳಿಗೆ ತಾಕೀತು ಮಾಡಲಾಗಿದೆ.
– ಎಲ್.ಕೆ. ಅತೀಕ್, ಪ್ರಧಾನ
ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ
– ರಫೀಕ್ ಅಹ್ಮದ್