ವಿಜಯಪುರ: ಶನಿವಾರ ರಾತ್ರಿ ಅನಿರೀಕ್ಷಿತವಾಗಿ ಬೀಸಿದ ಬಿರುಗಾಳಿಗೆ ರೈತರು ಬೆಳೆದಿದ್ದ ದ್ರಾಕ್ಷಿ, ಬಾಳೆ ಸೇರಿದಂತೆ ಕೊಯ್ಲು ಹಂತದಲ್ಲಿದ್ದ ವಿವಿಧ ತೋಟಗಾರಿಕೆ ಬೆಳೆಗಳು ನೆಲಕಚ್ಚಿ ಲಕ್ಷಾಂತರ ರೂ. ನಷ್ಟವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಶನಿವಾರ ರಾತ್ರಿ ಏಕಾಏಕಿ ಬೀಸಿದ ಬಿರುಗಾಳಿಗೆ ಬೊಮ್ಮನಹಳ್ಳಿ ಗ್ರಾಮದಲ್ಲಿ ಬಾಳೆ, ಹಲಗುಣಕಿ ಗ್ರಾಮದಲ್ಲಿ ದ್ರಾಕ್ಷಿ ಬೆಳೆ ಹಾನಿಯಾಗಿರುವ ವರದಿಗಳು ಬಂದಿವೆ.
ವಿಜಯಪುರ ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ರೈತರು ಬೆಳೆದ ಬಾಳೆ ಸಂಪೂರ್ಣ ನೆಲಕಚ್ಚಿ, ಹಾನಿಯಾಗಿದೆ. ಬೊಮ್ಮನಹಳ್ಳಿ ಗ್ರಾಮದ ರೈತ ಮುರುಗೆಪ್ಪ ಚೌಗುಲಾ ಎಂಬುವರಿಗೆ ಸೇರಿದ ಒಂದೂವರೆ ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಕೊಯ್ಲಿನ ಹಂತದಲ್ಲಿತ್ತು.
ಬಿರುಗಾಳಿ ಬೀಸಿದ ಪರಿಣಾಮ ಬೆಳೆದು ನಿಂತಿದ್ದ ಕೊಯ್ಲು ಹಂತದಲ್ಲಿ ಇದ್ದ ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ಧರೆಗೆ ಉರುಗಳಿವೆ. ಇದರಿಂದ ರೈತ ಮುರಿಗೆಪ್ಪ ಅವರಿಗೆ ಸುಮಾರು 2 ಲಕ್ಷ ರೂ. ನಷ್ಟವಾಗಿದೆ ಎಂದು ಬಾಧಿತ ರೈತ ಅಳಲು ತೋಡಕೊಂಡಿದ್ದಾರೆ.
ಬಿರುಗಾಳಿ ಹೊಡೆತಕ್ಕೆ ತೋಟದಲ್ಲಿ ಬೆಳೆದಿದ್ದ ಬಾಳೆ ಮಾತ್ರವಲ್ಲದೆ ವಿದ್ಯುತ್ ಕಂಬಗಳೇ ಮುರಿದು ಬಿದ್ದಿರುವುದು ಬಿರುಗಾಳಿ ಅಬ್ಬರಕ್ಕೆ ಸಾಕ್ಷಿಯಾಗಿವೆ.
ಕೊಯ್ಲಿನ ಹಂತದಲ್ಲಿ ಬಾಳೆ ಬೆಳೆ ನಷ್ವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬಾಳೆ ಬೆಳೆಯಲು ಲಕ್ಷಾಂತರ ರೂ. ವೆಚ್ಚ ಮಾಡಿದ್ದೇನೆ. ಇದೀಗ ಅನಿರೀಕ್ಷಿತ ಬಿರುಗಾಳಿ ಹೊಡೆತಕ್ಕೆ ಬೆಳೆ ಹಾನಿಯಾಗಿದ್ದು, ಸರ್ಕಾರ ಪರಿಹಾರ ನೀಡುವ ಮೂಲಕ ನನ್ನ ನೆರವಿಗೆ ಬರಬೇಕು ಎಂದು ಬಾಧಿತ ರೈತ ಮುರಿಗೆಪ್ಪ ಚೌಗುಲಾ ಆಗ್ರಹಿಸಿದ್ದಾರೆ.
ಮತ್ತೊಂದೆಡೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ವಿಶ್ಚನಾಥ ಪಾಟೀಲ ಎಂಬರಿಗೆ ಸೇರಿದ ದ್ರಾಕ್ಷಿ ತೋಟಕ್ಕೆ ಹಾನಿಯಾಗಿದೆ.
ಸಿಡಿಲು, ಗುಡುಗು ಸಹಿತ ಅಪ್ಪಳಿಸಿದ ಬಿರುಗಾಳಿಯ ಹೊಡೆತಕ್ಕೆ ವಿದ್ಯುತ್ ಕಂಬಗಳು ಮುರಿದುಕೊಂಡು ದ್ರಾಕ್ಷಿ ಬೆಳೆಯ ಸಾಲುಗಳ ಮರಗಳ ಬಿದ್ದಿವೆ. ಪರಿಣಾಮ ದ್ರಾಕ್ಷಿ ಸಾಲುಗಳು ನೆಲಕಚ್ಚಿದ್ದು, ಬಹು ವಾರ್ಷಿಕ ಬೆಳೆಯಾದ ದ್ರಾಕ್ಷಿ ನಾಶದಿಂದ ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದು, ತುರ್ತಾಗಿ ಪರಿಹಾರ ನೀಡುವಂತೆ ದ್ರಾಕ್ಷಿ ಬೆಳೆ ಹಾನಿಯಿಂದ ಬಾಧಿತ ದ್ರಾಕ್ಷಿ ಬೆಳೆಗಾರ ವಿಶ್ವನಾಥ ಪಾಟೀಲ ಆಗ್ರಹಿಸಿದ್ದಾರೆ.