ದಾವಣಗೆರೆ: ಗ್ರಾಮ ಪಂಚಾಯತಿ ನೌಕರರಿಗೆ ಬಾಕಿ ಉಳಿದಿರುವ ವೇತನವನ್ನು ತೆರಿಗೆಯ ಸಂಗ್ರಹದಲ್ಲಿ ಗ್ರಾಮ ಪಂಚಾಯತಿಗಳು ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ನಗರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಸಮಿತಿ ಕಾರ್ಯಕರ್ತರು ಜಿಲ್ಲಾ ಪಂಚಾಯತಿ ಚಲೋ ಹಮ್ಮಿಕೊಂಡು ಪ್ರತಿಭಟನೆ ನಡೆಸಿದರು.
ನಗರದ ವಿಮಾನಮಟ್ಟಿ ಬಳಿ ಜಮಾಯಿಸಿದ ಗ್ರಾಮ ಪಂಚಾಯತಿ ನೌಕರರು, ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾ ಪಂಚಾಯತಿ ಕಚೇರಿಗೆ ತೆರಳಿ ಉಪ ಕಾರ್ಯದರ್ಶಿ ಎಲ್. ಭೀಮಾನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಅಪರ ಕಾರ್ಯದರ್ಶಿ ವೈ.ಎಸ್. ಸ್ವಾಮಿ ವರದಿಯಂತೆ ಎಲ್ಲಾ ನೌಕರರಿಗೆ ಏಕಕಾಲಕ್ಕೆ ಅನುಮೋದನೆ ನೀಡಬೇಕು. ಬಿಲ್ ಕಲೆಕ್ಟರ್ ಹುದ್ದೆಯಿಂದ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಲು 2019ರ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ಪಿಡಿಓ ಬಡ್ತಿ ಗ್ರೇಡ್ -4ರ ಭರ್ತಿ ನೀಡಿ, ಖಾಲಿಯಾದ ಗ್ರೇಡ್ -2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಇ.ಎಫ್.ಎಂ.ಎಸ್ ಸೇರದಿರುವ ನೌಕರರನ್ನು ಕೂಡಲೇ ಪಂಚ ತಂತ್ರಾಂಶದಲ್ಲಿ ಸೇರಿಸಬೇಕು. ಬಾಕಿ ಉಳಿದಿರುವ ವೇತನ ತೆರಿಗೆ ಸಂಗ್ರಹದಲ್ಲಿ ಕೊಡಬೇಕು. ಎಲ್ಲಾ ನೌಕರರಿಗೂ ಸೇವಾ ಪುಸ್ತಕ ತೆರೆಯಬೇಕು. ನಿವೃತ್ತಿ ಹೊಂದಿದ ನೌಕರರಿಗೆ ಉಪಧನ ಕೊಡಬೇಕು. ಗ್ರಾಮ ಪಂಚಾಯತಿಯಲ್ಲಿ ನಿರ್ವಹಿಸುತ್ತಿರುವ ನೀರುಗಂಟಿಗಳಿಗೆ ವಾರಕ್ಕೊಂದು ವೇತನ ಸಹಿತ ರಜೆ ನೀಡಬೇಕೆಂದು ಒತ್ತಾಯಿಸಿದರು.
ಎಲ್ಲಾ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳನ್ನು ಗ್ರಾಮ ಪಂಚಾಯತಿ ನೌಕರರಿಗೂ ಸಿಗುವಂತಾಗಬೇಕು. ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಬಡ್ತಿಗೆ ಪರಿಗಣಿಸಿ ಹೆಚ್ಚುವರಿ ಆಪರೇಟರ್‌ಗಳಿಗೆ ಅನುಮೋದನೆ ನೀಡಬೇಕು. ಈ ಎಲ್ಲಾ ಬೇಡಿಕೆ ಈಡೇರಿಕೆಗಾಗಿ ಚರ್ಚಿಸುವ ನಿಮಿತ್ತ ಗ್ರಾಮ ಪಂಚಾಯತಿ ನೌಕರರ ಸಂಘ ಹಾಗೂ ಜಿಲ್ಲಾ ಸಮಿತಿ, ತಾಲೂಕು ಪದಾಧಿಕಾರಿಗಳ ಜತೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಎಲ್. ಭೀಮಾನಾಯ್ಕ ಅವರು ಜೂ. 29ರಂದು ಜಿಲ್ಲಾ ಪಂಚಾಯತಿಯಲ್ಲಿ ನೌಕರರ ಬೇಡಿಕೆ ಸಂಬಂಧ ಸಭೆ ಕರೆಯುವುದಾಗಿ ಭರವಸೆ ನೀಡಿದರು. ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯ ಸಮಿತಿಯ ಆರ್.ಎಸ್. ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಶ್ರೀನಿವಾಸಚಾರ್, ಜಿಲ್ಲಾಧ್ಯಕ್ಷ ಕೆ.ಎಂ. ಉಮೇಶ್, ಗುಡಾಳ್ ತಿಪ್ಪಣ್ಣ, ಮಂಜುನಾಥ್, ಸಂಪತ್‌ಕುಮಾರ್, ಹೇಮಣ್ಣ, ಶ್ರೀನಿವಾಸ್ ದೇವಿಕೆರೆ, ಮಾಲತೇಶ್, ನಾಗರಾಜ್, ಟಿ. ಮಾಲತೇಶ್, ಹನುಮಂತಪ್ಪ, ಉಮೇಶ್, ಶೇಖರಪ್ಪ, ಬಸವರಾಜ್ ಬೇತೂರು, ಕರಿಬಸಪ್ಪ, ಬಾತಿರಾಜು, ಅತ್ತಿಗೆರೆ ತಿಪ್ಪೇಶ್, ಕೃಷ್ಣಮೂರ್ತಿ ಭೀಮಾನಾಯ್ಕ, ಎಸ್. ಓಂಕಾರಪ್ಪ, ಸಿ.ಎಂ. ಚೇತನ್, ಪ್ರಸನ್ನ, ಗೋವಿಂದ್‌ರಾಜ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.