ಕುಷ್ಟಗಿ: ಕುಡಿಯುವ ನೀರಿಗಾಗಿ ಹಾಹಾಕಾರದ ಹಿನ್ನೆಲೆಯಲ್ಲಿ ಗ್ರಾಪಂ ಕೊರೆಯಿಸಿದ್ದ ಕೊಳವೆಬಾವಿಯನ್ನು ಪಕ್ಕದ ಜಮೀನು ಮಾಲೀಕರು ಕಲ್ಲು ಹಾಕಿ ಮುಚ್ಚಿದ ಘಟನೆ ತಾಲೂಕಿನ ಎಂ. ಗುಡದೂರು ಗ್ರಾಮದಲ್ಲಿ ನಡೆದಿದೆ.
ಈ ವಿಷಯ ಗ್ರಾಪಂ ಪಿಡಿಒ ಅಂಬುಜಾ ಪಾಟೀಲ ಅವರ ಗಮನಕ್ಕೆ ಬರುತ್ತಿದ್ದಂತೆ ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಅವರಿಗೆ ಮಾಹಿತಿ ನೀಡಿದರು. ಕೂಡಲೇ ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ ಅವರೊಂದಿಗೆ ದೌಡಾಯಿಸಿದರು. ಜಮೀನು ಮಾಲೀಕ ರಾಮಪ್ಪ ಸಾರಥಿ ಹಾಗೂ ಕುಟುಂಬ ಸದಸ್ಯರನ್ನು ಕರೆಯಿಸಿ, ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರಿಗೆ ನೀರು ಪೂರೈಕೆ ವೇಳೆ ನೀರಿನ ಅಭಾವ ಎದುರಾದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಕೊಳವೆಬಾವಿ ಕಬ್ಜಾಕ್ಕೆ ತೆಗೆದುಕೊಂಡು ಸಾರ್ವಜನಿಕರಿಗೆ ನೀರು ಪೂರೈಸುವ ಪರಮಾಧಿಕಾರ ಸರ್ಕಾರಕ್ಕೆ ಇದೆ. ಎಂ. ಗುಡದೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಸರ್ಕಾರವೇ ಕೊಳವೆಬಾವಿ ಕೊರೆಸಿದೆ. ಇಂತಹ ಬೇಸಿಗೆ ಸಂದರ್ಭದಲ್ಲಿ ಎರಡೂವರೆ ಇಂಚು ನೀರು ಲಭಿಸಿದ್ದು, ಈ ಪರಿಸ್ಥಿತಿಯಲ್ಲಿ ಕೊಳವೆಬಾವಿಗೆ ಕಲ್ಲು ಹಾಕಿ ಮುಚ್ಚಿರುವುದು ಅಕ್ಷಮ್ಯವಾಗಿದೆ. ಕೊಳವೆಬಾವಿ ರಸ್ತೆಯಲ್ಲಿದೆ. ಈ ಕೊಳವೆಬಾವಿಗೂ ಜಮೀನಿಗೂ ಸಂಬಂಧವಿಲ್ಲ. ಸರ್ಕಾರದ ಕಾರ್ಯಕ್ಕೆ ಅಡ್ಡಿ ಪಡಿಸಿದ್ದರಿಂದ ಸಾರಥಿ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸುವಂತೆ ಪಿಡಿಒ ಅಂಬುಜಾ ಪಾಟೀಲ ಅವರಿಗೆ ಆದೇಶಿಸಿದರು.
Advertisement
ತಾಲೂಕಿನ ಗುಮಗೇರಾ ಗ್ರಾಪಂ ವ್ಯಾಪ್ತಿಯ ಎಂ. ಗುಡದೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿದ್ದರಿಂದ ಗ್ರಾಪಂ ಕಳೆದ ಶುಕ್ರವಾರ ಎಂ. ಗುಡದೂರು ಗ್ರಾಮದಿಂದ ಟೆಂಗುಂಟಿ ರಸ್ತೆಯಲ್ಲಿ ಕೊಳವೆಬಾವಿ ಕೊರೆಸಿತ್ತು. ಈ ಕೊಳವೆಬಾವಿಯಲ್ಲಿ ಎರಡೂವರೆ ಇಂಚು ನೀರು ಲಭಿಸಿದ್ದರಿಂದ ಗ್ರಾಮಸ್ಥರು ಸಂತಸಗೊಂಡಿದ್ದರು. ಆದರೆ ಮಾರನೆ ದಿನ ಕೊಳವೆಬಾವಿ ಪಕ್ಕದ ಜಮೀನು ಮಾಲೀಕರಾದ ಹನುಮಂತ ನಾಗಪ್ಪ ಸಾರಥಿ, ರಾಮಪ್ಪ ನಾಗಪ್ಪ ಸಾರಥಿ. ಅಂಬಮ್ಮ ನಾಗಪ್ಪ ಸಾರಥಿ ಎಂಬುವವರು ಈ ಕೊಳವೆಬಾವಿ ತಮ್ಮ ಜಮೀನಿನಲ್ಲಿದ್ದು, ರಸ್ತೆಯೂ ನಮ್ಮ ಜಮೀನಿನಲ್ಲಿದೆ. ಈ ಕೊಳವೆಬಾವಿಯಿಂದ ತಮ್ಮ ಜಮೀನಿನಲ್ಲಿರುವ ಕೊಳವೆಬಾವಿ ನೀರು ಕಡಿಮೆಯಾಗುವ ಆತಂಕ ಹಿನ್ನೆಲೆಯಲ್ಲಿ ಗ್ರಾಮಸ್ಥರ ವಿರೋಧ ಲೆಕ್ಕಿಸದೇ ಕೊಳವೆ ಬಾವಿಯ ಕೇಸಿಂಗ್ ಕಿತ್ತುಹಾಕಿ ಕಲ್ಲು, ಮಣ್ಣುಗಳಿಂದ ಮುಚ್ಚಿದ್ದಾರೆ.