Advertisement
ಗುತ್ತಿಗಾರಿನಿಂದ ಕಮಿಲ ಮಾರ್ಗ ವಾಗಿ ಬಳ್ಪವನ್ನು ಸಂಪರ್ಕಿಸುವ ಕಮಿಲ ರಸ್ತೆಯ ಚತ್ರಪ್ಪಾಡಿ, ದೇವಸ್ಯ ಮತ್ತು ಕಮಿಲಗಳಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಚತ್ರಪ್ಪಾಡಿಯಿಂದ ದೇವಸ್ಯದ ವರೆಗೆ ಡಾಮರು ಸಂಪೂರ್ಣವಾಗಿ ಎದ್ದು ಹೋಗಿದ್ದರೆ, ಕಮಿಲ ಬಳಿಯಲ್ಲಿ ರಸ್ತೆಯಲ್ಲಿ ಬೃಹತ್ ಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ.
ದೇವಚಳ್ಳ ಗ್ರಾಮದ ಮಾನಕಟ್ಟೆ ಯಿಂದ ಕಂದ್ರಪ್ಪಾಡಿ ಸಂಪರ್ಕಿಸುವ ರಸ್ತೆಯ ದೇವ ಶಾಲಾ ಬಳಿ ರಸ್ತೆಯ ಡಾಮರು ಕಿತ್ತು ಹೋಗಿದ್ದು, ರಸ್ತೆಯಲ್ಲಿ ಜಲ್ಲಿಕಲ್ಲುಗಳೇ ಕಾಣುತ್ತಿವೆ. ವಾಹನಗಳು ಸಂಚರಿಸುವಾಗ ಜಲ್ಲಿಕಲ್ಲುಗಳು ವಾಹನಗಳ ಚಕ್ರಕ್ಕೆ ಸಿಲುಕಿ ಸಿಡಿದು ಪಾದಾಚಾರಿಗಳಿಗೆ ಏಟು ಬೀಳುವ ಸಾಧ್ಯತೆಗಳೂ ನಿಚ್ಚಳವಾಗಿವೆ. ದೇವ ಶಾಲಾ ಬಳಿ ರಸ್ತೆಯ ಸ್ವಲ್ಪ ಭಾಗವನ್ನು ದೇವಚಳ್ಳ ಪಂಚಾಯತ್ ವತಿಯಿಂದ ಕಾಂಕ್ರಿಟ್ ಹಾಕಲಾಗಿದ್ದು ಬಿಟ್ಟರೆ ಸುಮಾರು ಒಂದೂವರೆ ಕಿ.ಮೀ.ನಷ್ಟು ರಸ್ತೆ ಸಂಚಾರ ದುಸ್ತರವಾಗಿದೆ. ಪಡು ಎನ್ನುವಲ್ಲಿ ರಸ್ತೆ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು, ಪ್ರಯಾಣ ಕಷ್ಟವಾಗಿದೆ. ಎಲಿಮಲೆ-ಮಡಪ್ಪಾಡಿ ರಸ್ತೆಯ ಸೇವಾಜೆಯಿಂದ ಕಜೆ ವರೆಗಿನ 4 ಕಿ.ಮೀ. ರಸ್ತೆಯಲ್ಲಿ ಬೃಹತ್ ಹೊಂಡಗಳು ಬಿದ್ದಿದ್ದು, ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಇದು ಮಡಪ್ಪಾಡಿಗೆ ಸಂಪರ್ಕ ಕಲ್ಪಿಸುವ ಅತೀ ಹತ್ತಿರದ ರಸ್ತೆಯಾಗಿದ್ದು, ದಿನಂಪ್ರತಿ ನೂರಾರು ಪ್ರಯಾಣಿಕರು ಓಡಾಡುತ್ತಾರೆ. ಶಾಲಾ ಮಕ್ಕಳು ಹಾಗೂ ಕಚೇರಿ ಕೆಲಸಗಳಿಗೆ ದೂರದೂರಿಗೆ ತೆರಳುವ ಸಾರ್ವಜನಿಕರು ಇದೇ ರಸ್ತೆ ಯನ್ನು ಬಳಸುವುದರಿಂದ ಪ್ರತಿದಿನ ಜನ ಹಿಡಿಶಾಪ ಹಾಕುತ್ತಿದ್ದಾರೆ.
Related Articles
ಗ್ರಾಮೀಣ ಪ್ರದೇಶದ ಈ ರಸ್ತೆಗಳು ಬಹುತೇಕ ಜಿ.ಪಂ. ರಸ್ತೆಗಳಾಗಿದ್ದು ಇವುಗಳ ದುರಸ್ತಿಗೆ ಅನುದಾನದ ಕೊರತೆ ಎದುರಾಗಿದೆ. ಜಿ.ಪಂ.ನಲ್ಲಿ ಈ ರಸ್ತೆಗಳ ದುರಸ್ತಿಗೆ ಬೇಕಾದಷ್ಟು ಅನುದಾನಲ್ಲದಿರುವುದು ಮತ್ತು ಬೇರೆ ಯೋಜನೆಗಳಿಂದ ಹಣ ಹೊಂದಾಣಿಕೆ ಮಾಡಿಕೊಂಡು ಅನುದಾನ ಕ್ರೋಡೀ ಕರಣ ಗೊಳಿಸು ವುದು ಅಧಿಕಾರಿಗಳಿಗೆ ಸವಾಲಾಗಿದೆ. ಶಾಸಕರ ಅನುದಾನ ಮತ್ತು ಪ್ರದೇಶಾಭಿವೃದ್ಧಿ ಯೋಜನೆಗಳ ಅಡಿಯಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಹೊಂದಿಸಿ ಕೊಳ್ಳುವ ಸಾಧ್ಯತೆ ಇದ್ದರೂ ಚುನಾವಣೆ ನೀತಿ ಸಂಹಿತೆ ತೆರವುಗೊಳ್ಳದಿರುವುದರಿಂದ ಈ ಮಳೆಗಾಲದಲ್ಲಿ ಗ್ರಾಮೀಣ ರಸ್ತೆಗಳು ಮತ್ತಷ್ಟು ಹದೆಗೆಡುವುದು ಖಂಡಿತ.
Advertisement
ಅನುದಾನ ಕೊರತೆಜಿ.ಪಂನಲ್ಲಿ ಅನುದಾನದ ಕೊರತೆ ಇದ್ದು, ಬಹುತೇಕ ರಸ್ತೆಗಳ ದುರಸ್ತಿ ಸಾಧ್ಯವಾಗುತ್ತಿಲ್ಲ. ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಥವಾ ವಿಶೇಷ ಅನುದಾನಗಳು ಲಭಿಸಿದರೆ ರಸ್ತೆಗಳನ್ನು ದುರಸ್ತಿಗೊಳಿಸಬಹುದು.
– ಆಶಾ ತಿಮ್ಮಪ್ಪ, ಜಿ.ಪಂ. ಸದಸ್ಯರು, ಗುತ್ತಿಗಾರು ಕ್ಷೇತ್ರ ಕಾಯಕಲ್ಪ ನೀಡಿ
ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗಿದ್ದು, ರಾತ್ರಿ ವೇಳೆ ಬೈಕ್ ಸವಾರರು ಬಿದ್ದಿರುವ ನಿದರ್ಶನಗಳಿವೆ. ಆದಷ್ಟು ಬೇಗ ರಸ್ತೆಗೆ ಕಾಯಕಲ್ಪ ಒದಗಿಸಬೇಕು.
– ಸುಕುಮಾರ ಮಡಪ್ಪಾಡಿ, ಸ್ಥಳೀಯರು - ಕೃಷ್ಣಪ್ರಸಾದ್ ಕೊಲ್ಚಾರ್