Advertisement

ಅಲ್ಪಸಂಖ್ಯಾತರ ಕಲ್ಯಾಣಕ್ಕೂ ಅನುದಾನ: ಸಿಎಂ ಬೊಮ್ಮಾಯಿ 

09:14 PM Dec 20, 2022 | Team Udayavani |

ಸುವರ್ಣ ವಿಧಾನಸೌಧ: ಕೊರೊನಾ ಕಾರಣದಿಂದ ಕೆಲವೊಂದು ವಿಭಾಗಗಳಲ್ಲಿ ಅನುದಾನ ಹಂಚಿಕೆ ಕಡಿಮೆಯಾಗಿತ್ತು. ಈಗ ಎಲ್ಲವನ್ನೂ ಸರಿಪಡಿಸುತ್ತಿದ್ದೇವೆ. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಕಾಂಗ್ರೆಸ್‌ನ ಡಾ|ಯತೀಂದ್ರ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಅಲ್ಪಸಂಖ್ಯಾತರ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ವಕ್ಫ್ ಬೋರ್ಡ್‌ ಅಡಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. 2018-19ರಲ್ಲಿ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೊರೊನಾದಲ್ಲಿ ಸ್ವಲ್ಪ ಸಮಸ್ಯೆಯಾಗಿತ್ತು. ಯತೀಂದ್ರ ಅವರು ನಿರ್ದಿಷ್ಟವಾಗಿ ಹೇಳಿರುವ ವಿಷಯವನ್ನು ಆದಷ್ಟು ಬೇಗ ಮಂಜೂರು ಮಾಡಲಾಗುವುದು ಎಂದರು.

ಡಾ| ಯತೀಂದ್ರ ಮಾತನಾಡಿ, ಬಿಜೆಪಿ ಸರ್ಕಾರ ಬಂದ ನಂತರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡುವ ಅನುದಾನ ಕಡಿತ ಮಾಡಲಾಗಿದೆ. 3.5 ವರ್ಷದಲ್ಲಿ ಯಾವುದೇ ಅನುದಾನ ಬಂದಿಲ್ಲ. ಕ್ಷೇತ್ರದ ಐತಿಹಾಸಿಕ ಚರ್ಚ್‌ನಲ್ಲಿ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ. ನೀಡಲು ಸಾಧ್ಯವಾಗುತ್ತಿಲ್ಲ. ಮಸೀದಿ, ಚರ್ಚ್‌ ಅಭಿವೃದ್ಧಿಗೆ ಅನುದಾನ ನೀಡಬೇಕೆಂದು ಕೋರಿಕೊಂಡರು.

ಸಣ್ಣ ಗುತ್ತಿಗೆದಾರರ ಬಿಲ್‌ ಪಾವತಿಗೆ ಆಗ್ರಹ
ಸುವರ್ಣ ವಿಧಾನಸೌಧ: ವಿವಿಧ ಕಾಮಗಾರಿಗಳನ್ನು 5-10 ಲಕ್ಷ ರೂ.ಗಳಲ್ಲಿ ಮುಗಿಸಿರುವ ಗುತ್ತಿಗೆದಾರರಿಗೆ 2-3 ವರ್ಷಗಳಿಂದ ಸರಿಯಾಗಿ ಬಿಲ್‌ ಪಾವತಿಯಾಗುತ್ತಿಲ್ಲ. ಇದರಿಂದ ಸಣ್ಣ ಗುತ್ತಿಗೆದಾರರಿಗೆ ಸಮಸ್ಯೆಯಾಗುತ್ತಿದ್ದು, ಕೂಡಲೇ ಬಿಲ್‌ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಎಚ್‌.ಎಂ.ರೇವಣ್ಣ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಸಿ.ಸಿ.ಪಾಟೀಲ್‌, ಹಣಕಾಸಿನ ಲಭ್ಯತೆಯ ಆಧಾರದಲ್ಲಿ ಆದಷ್ಟು ಬೇಗ ಸಣ್ಣ ಗುತ್ತಿಗೆದಾರರ ಬಿಲ್‌ ಪಾವತಿಸಲಾಗುವುದು. ಹಾಸನ ಮತ್ತು ಚನ್ನರಾಯಪಟ್ಟಣಕ್ಕೆ ಸಂಬಂಧಿಸಿದಂತೆ ಈಗಾಗಲೇ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 9.50 ಕೋಟಿ ರೂ. ಬಾಕಿಯಿದ್ದು, ಆದ್ಯತೆ ಮೇರೆಗೆ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದರು.

Advertisement

ರೇವಣ್ಣ ಮಾತನಾಡಿ, ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗದಿಂದ ಆಗಿರುವ ಕಾಮಗಾರಿಗಳಿಗೆ ಬಿಲ್‌ ಪಾವತಿ ವಿಳಂಬವಾಗುತ್ತಿದೆ. ಇದರಿಂದ ಗುತ್ತಿಗೆದಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ರಾಜ್ಯಾದ್ಯಂತ ಈ ಸಮಸ್ಯೆಯಿದ್ದು ಕೂಡಲೇ ಬಗೆಹರಿಸಬೇಕು ಎಂದರು. ಇದಕ್ಕೆ ಉಳಿದ ಸದಸ್ಯರು ಧ್ವನಿಗೂಡಿಸಿದರು.

ನರೇಗಾದಡಿ ಬೇರೆ ಇಲಾಖೆಯಿಂದ ಕಾಮಗಾರಿ ಆಗುತ್ತಿಲ್ಲ
ಸುವರ್ಣ ವಿಧಾನಸೌಧ: ನರೇಗಾ ಯೋಜನೆಯಡಿ ಅರಣ್ಯ, ಕೃಷಿ, ತೋಟಗಾರಿಕೆ ಮೊದಲಾದ ಇಲಾಖೆಯಡಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಕೆಲವು ಇಲಾಖೆಗಳು ಜೆಸಿಬಿ ಮೊದಲಾದ ಯಂತ್ರಗಳನ್ನು ಬಳಸಿ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿವೆ ಎಂದು ಕಾಂಗ್ರೆಸ್‌ನ ಡಾ| ಅಂಜಲಿ ಹೇಮಂತ್‌ ನಿಂಬಾಳ್ಕರ್‌ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ನರೇಗಾ ಅಡಿಯಲ್ಲಿ ಜಿ.ಪಂ., ತಾ.ಪಂ., ಗ್ರಾ.ಪಂ.ಗಳಿಂದ ವಿವಿಧ ಕಾಮಗಾರಿ ನಡೆಯುತ್ತಿದೆ. ಇದರ ಜತೆಗೆ ಕೃಷಿ, ಅರಣ್ಯ, ತೋಟಗಾರಿಕೆ ಮೊದಲಾದ ಇಲಾಖೆಗಳಿಗೂ ನಿರ್ದಿಷ್ಟ ಗುರಿ ನಿಗದಿ ಮಾಡಲಾಗಿದೆ. ಅರಣ್ಯ ಇಲಾಖೆಗಳು ನರೇಗಾದಡಿ ಕಾಮಗಾರಿ ಮಾಡದೇ ಇರುವ ಬಗ್ಗೆ ಪರಿಶೀಲಿಸಲಾಗುವುದು. ಸಿಇಒ ಕರೆಸಿ ಈ ಸಂಬಂಧ ಮಾತುಕತೆ ನಡೆಸಲಿದ್ದೇವೆ ಎಂದರು.

ಅಂಜಲಿ ನಿಂಬಾಳ್ಕರ್‌ ಮಾತನಾಡಿ, ಅವೈಜ್ಞಾನಿಕವಾಗಿ ನರೇಗಾದಡಿ ಕಾಮಗಾರಿ ನಡೆಸಲಾಗುತ್ತಿದೆ. ಅರಣ್ಯ ಭಾಗದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಕೆರೆ ಹೂಳೆತ್ತುವ ಸಂದರ್ಭದಲ್ಲಿ ಯಂತ್ರಗಳನ್ನು ಬಳಸುತ್ತಿರುವುರಿಂದ ಅಂತರ್ಜಲಕ್ಕೂ ಸಮಸ್ಯೆಯಾಗುತ್ತಿದೆ. ಈ ಬಗ್ಗೆಯೂ ಎಚ್ಚರ ವಹಿಸಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next