Advertisement

ಕ್ರೀಡಾ ಚಟುವಟಿಕೆಗೆ ಅನುದಾನ ನೀಡಿ: ಕಂದಕೂರು

05:54 PM Aug 25, 2022 | Team Udayavani |

ಯಾದಗಿರಿ: ಪ್ರಸಕ್ತ ದಿನಗಳಲ್ಲಿ ರಾಜ್ಯ ಸರ್ಕಾರ ಕ್ರೀಡಾ ಚಟುವಟಿಕೆಗಳಿಗೆ ಸೂಕ್ತ ಅನುದಾನ ನೀಡದಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ, ಸರ್ಕಾರ ತನ್ನ ನೀತಿ ಬದಲಾಯಿಸಿಕೊಳ್ಳಬೇಕು ಅಂದಾಗ ಮಾತ್ರ ಯುವ ಪ್ರತಿಭೆಗಳು ಹೊರ ಹೊಮ್ಮಲು ಸಹಕಾರಿಯಾಗುತ್ತದೆ ಎಂದು ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರು ಹೇಳಿದರು.

Advertisement

ತಾಲೂಕಿನ ಲಿಂಗೇರಿ ಸ್ಟೇಷನ್‌ ಪ್ರೌಢಶಾಲೆ ಆವರಣದಲ್ಲಿ ಜಿಪಂ, ಬಿಇಒ ಕಾರ್ಯಲಯ ಹಾಗೂ ಸರಕಾರಿ ಪ್ರೌಢಶಾಲೆ ಲಿಂಗೇರಿ ಸ್ಟೇಷನ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸೈದಾಪುರ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವವಿದೆ. ಕೇರಳದ ಖ್ಯಾತ ಅಥ್ಲೆಟಿಕ್‌ ಪಟು ಪಿ.ಟಿ. ಉಷಾ ಅವರು ದೇಶದಲ್ಲಿ ಹಾಗೂ ವಿಶ್ವದಲ್ಲಿ ಗಮನ ಸೆಳೆದರು. ಅವರ ಸಾಧನೆ ಗಮನಿಸಿ, ಅವರನ್ನು ರಾಜ್ಯಸಭಾ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿರುವುದು ಕ್ರೀಡಾ ಕ್ಷೇತ್ರಕ್ಕೆ ಮೆರಗು ತಂದಿದೆ. ಈ ಭಾಗದಲ್ಲಿ ಕೂಡ ಸಕ್ರೆಪ್ಪ ಎಂಬ ಯುವಕ ಅಥ್ಲಿಟ್‌ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿರುವುದು ಯುವ ಕ್ರೀಡಾ ಪಟುಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.

ಶರಣಪ್ಪ ದಳಪತಿ ಶೆಟ್ಟಿಗೇರಾ ಮಾತನಾಡಿ, ಈ ಪ್ರೌಢಶಾಲೆಯಲ್ಲಿ 660 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ, ವಿಶಾಲವಾದ ಶಾಲಾ ಕೊಠಡಿ ನಿರ್ಮಾಣ ಅಗತ್ಯವಿದೆ. ಶಿಕ್ಷಕರ ನೇಮಕ ಮಾಡುವುದು ಅವಶ್ಯಕವಾಗಿದೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕಾಗಿದೆ ಎಂದು ಶಾಸಕರಲ್ಲಿ ಮನವಿ ಮಾಡಿದರು.

ಶಾಲಾ ಮುಖ್ಯಗುರುಗಳಾದ ಶ್ಯಾಮು ರಾಠೊಡ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಖ್ಯಾತ ಅಥ್ಲಿಟ್‌ ಸಕ್ರೆಪ್ಪ ಮಲ್ಹಾರ ತಾಂಡಾ ಅವರನ್ನು ಶಾಸಕರು ಸನ್ಮಾನಿಸಿ, ಗೌರವಿಸಿದರು. ತಾಪಂ ಮಾಜಿ ಸದಸ್ಯ ಶರಣಪ್ಪಗೌಡ ಕೌಳೂರ, ಮಲ್ಲಣಗೌಡ ಹಳಿಮನಿ, ಚನ್ನಾರೆಡ್ಡಿ ಪಾಟೀಲ್‌, ಮಲ್ಲಪ್ಪ ಜಿನಕೇರಾ, ಶರಣಪ್ಪ ಹೊಸಳ್ಳಿ, ಪತ್ರಕರ್ತರಾದ ಮಲ್ಲಿಕಾರ್ಜುನರೆಡ್ಡಿ ಹತ್ತಿಕುಣಿ, ಗ್ರಾಮೀಣ ಪೊಲೀಸ್‌ ಠಾಣೆ ಪಿಎಸ್‌ಐ ರಾಜಕುಮಾರ್‌ ಜಾಮಗೊಂಡ, ಶಿಕ್ಷಣ ಇಲಾಖೆಯ ಶರಣಗೌಡ ಭೀಮನಹಳ್ಳಿ, ಬಸವರಾಜ ಮನಗನಾಳ, ಮಲ್ಲಿಕಾರ್ಜುನ ಕಾವಲಿ, ಬಸಣ್ಣಗೌಡ ಪಾಟೀಲ್‌, ಶಿವಪುತ್ರ ಶೆಟ್ಟಿಗೇರಾ, ಗಡ್ಡೆಪ್ಪ ಪೂಜಾರಿ ಸೇರಿದಂತೆ ಹಲವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next