ಸಕಲೇಶಪುರ: ಬಾಳ್ಳುಪೇಟೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ 3 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನವನ್ನು ಅಭಿವೃದ್ಧಿಗಾಗಿ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ಶುಕ್ರವಾರ ತಾಲೂಕಿನ ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ನಗರ, ಮೆಣಸಮಕ್ಕಿ ಹಾಗೂ ಅರಸು ನಗರದ ಅಂಗನವಾಡಿ ಕಟ್ಟಡ, ರಾಜೇಂದ್ರಪುರ ಗ್ರಾಮದ ಬಸ್ ತಂಗುದಾಣ,ಬಾಳ್ಳುಪೇಟೆ ವೃತ್ತದಲ್ಲಿ ಹೈಟೆಕ್ ಶೌಚಾಲಯ, ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ 26 ಗ್ರಾಪಂಗಳ ಪೈಕಿ ಬಾಳ್ಳುಪೇಟೆ ಪಂಚಾಯಿತಿ ದೊಡ್ಡದಾಗಿದೆ.
ಇಲ್ಲಿ ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಬಾಳ್ಳುಪೇಟೆ ಗ್ರಾಮದ ಬಹು ಬೇಡಿಕೆಯ ಸಾರ್ವಜನಿಕ ಶೌಚಾಲಯ ಕಾಮಗಾರಿ 6 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡು ಇಂದಿನಿಂದ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದರು.
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ 19 ವೈರಸ್ ತಡೆಗಟ್ಟಲು ಸಹಕರಿಸಬೇಕು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲಾ ಕುಮಾರಸ್ವಾಮಿ ಮಾತನಾಡಿ, ಬಾಳ್ಳುಪೇಟೆಯ ಸರ್ಕಾರಿ ಆಸ್ಪತ್ರೆಗೆ ಕಾಂಪೌಂಡ್ ನಿರ್ಮಿಸಲಾಗಿದೆ. ಆಸ್ಪತ್ರೆಯ ಒಳಭಾಗದಲ್ಲಿ ಶೌಚಾಲಯ, ಜನರೇಟರ್ ರೂಮ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶಿಲ್ಪಾ, ಉಪಾಧ್ಯಕ್ಷ ಎಚ್.ಎಂ.ಸ್ವಾಮಿ, ತಾಪಂ ಇಒ ಜಿ.ಆರ್. ಹರೀಶ್, ಸಮಾಜ ಸೇವಕ ಬಾಳ್ಳುಗೋಪಾಲ್, ತಾಪಂ ಸಹಾಯಕ ನಿರ್ದೇಶಕ ಎಚ್.ಎ.ಆದಿತ್ಯ, ಜಿಪಂ ಎಇಇ ಸಾಗರ್, ಪಿಡಿಒ ಆರ್.ಪ್ರಭ, ಕಾರ್ಯದರ್ಶಿ ಎಚ್. ಜಿ. ಶೇಖರ್ ಸೇರಿದಂತೆ ಗ್ರಾಮ ಪಂಚಾಯಿತಿ ಯ ಎಲ್ಲ ಚುನಾಯಿತ ಸದಸ್ಯರು ಇದ್ದರು.