Advertisement

ಅನುದಾನ ಸಮರ್ಪಕ ಬಳಕೆಗೆ ತಾಕೀತು

11:03 AM Oct 27, 2017 | Team Udayavani |

ಬೆಂಗಳೂರು: ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಕಲ್ಪಿಸಲು ಪ್ರಸಕ್ತ ವರ್ಷ 400 ಕೋಟಿ ರೂ. ಮಂಜೂರಾಗಿದ್ದು, ಶೇ.100ರಷ್ಟು ಅನುದಾನ ಬಳಸಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳದೆ ರೈತರಿಗೆ ಸೌಲಭ್ಯ ಕಲ್ಪಿಸಲು ಗಮನ ಹರಿಸಬೇಕೆಂದು ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸೂಚಿಸಿದರು.

Advertisement

ವಿಕಾಸಸೌಧದಲ್ಲಿ ಗುರುವಾರ ನಡೆದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಸೂಕ್ಷ್ಮ ಹನಿ ನೀರಾವರಿ ಯೋಜನೆಗಳ ಕುರಿತಂತೆ ಕೆಲ ಕೈಪಿಡಿ ಬಿಡುಗಡೆ ಮಾಡಲಾಗಿದ್ದು, ಅದು ಕೈಪಿಡಿಗಳಲ್ಲೇ ಉಳಿಯುವಂತಾಗದೆ ಕಾರ್ಯಗತವಾಗಬೇಕು. ಯೋಜನೆಯ ಪ್ರಯೋಜನ ಬೆಳೆಗಾರರಿಗೆ ತಲುಪುವಂತಾಗಬೇಕೆಂದು ಹೇಳಿದರು.

ಬಹಳಷ್ಟು ಜಂಟಿ ಆಯುಕ್ತರ ವ್ಯಾಪ್ತಿಯಲ್ಲಿ ಕಾರ್ಯಪ್ರಗತಿ ನಿಧಾನಗತಿಯಲ್ಲಿದೆ. ಜಂಟಿ ನಿರ್ದೇಶಕರು ಎಣ್ಣೆ ಹಚ್ಚಿಕೊಂಡವರಂತೆ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ರೈತರಿಗೆ ಸೌಲಭ್ಯ ಕಲ್ಪಿಸಲು ಗಮನ ಹರಿಸಬೇಕು. ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಅದನ್ನು ತಿಳಿಸಿದರೆ ಪರಿಹರಿಸಲಾಗುವುದು. ಅಧಿಕಾರಿಗಳು ತಮ್ಮ ಕಾರ್ಯ ನಿರ್ವಹಣೆಯ ದೈನಂದಿನ ವರದಿ ಸಲ್ಲಿಸಬೇಕು. ತಿಂಗಳಿಗೊಮ್ಮೆ ಆ ವಿವರವನ್ನು ನನಗೆ ನೀಡಬೇಕು ಎಂದು ಸೂಚಿಸಿದರು.

ಶೇ.100ರಷ್ಟು ಗುರಿ ಸಾಧಿಸಲು ಸೂಚನೆ
ರಾಜ್ಯದಲ್ಲಿ 20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಈ ಪೈಕಿ 5.37ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಒಟ್ಟು ನಾಲ್ಕು ಲಕ್ಷಕ್ಕೂ ಹೆಚ್ಚು ಬೆಳೆಗಾರರಿಗೆ 1730 ಕೋಟಿ ರೂ. ಸಹಾಯಧನ ನೀಡಲಾಗಿದೆ. ಮೂರು ವರ್ಷ ಸತತ ಬರ ಬಳಿಕ ಈ ಬಾರಿ ಉತ್ತಮ ಮಳೆಯಾಗಿದೆ. ಇಲಾಖೆಯಡಿ ಸೂಕ್ಷ್ಮ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 400 ಕೋಟಿ ರೂ. ಅನುದಾನ ಮಂಜೂರಾಗಿದೆ.

ಈವರೆಗೆ ಶೇ.30ರಿಂದ ಶೇ.50ರಷ್ಟು ಗುರಿ ಸಾಧನೆಯಾಗುತ್ತಿದ್ದು, ಶೇ.100ರಷ್ಟು ಗುರಿ ಸಾಧಿಸಲು ಎಲ್ಲರೂ ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು. ತೋಟಗಾರಿಕೆ ಬೆಳೆಗಳಿಗೆ ಸಂಬಂಧಪಟ್ಟಂತೆ ಹೊಸ ತಂತ್ರಜ್ಞಾನ, ಬೆಳವಣಿಗೆಗಳನ್ನು ಅಧ್ಯಯನ ಮಾಡುವಂತೆ ಸೂಚಿಸಿದರೂ ಹೆಚ್ಚಿನ ಆಸಕ್ತಿ ಕಾಣುತ್ತಿಲ್ಲ. ಹೈಡ್ರೋಫೋನಿಕ್ಸ್‌ ತಂತ್ರಜ್ಞಾನವು ಚೀನಾ, ಇಸ್ರೇಲ್‌ ಇತರೆಡೆ ಹೆಚ್ಚು ಜನಪ್ರಿಯವಾಗಿದ್ದು, ಇದನ್ನು ಬಳಸಿಕೊಳ್ಳುವತ್ತ ಗಮನ ಹರಿಸಬಹುದಾಗಿದೆ ಎಂದು ಹೇಳಿದರು.

Advertisement

ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಷ್‌ಚಂದ್ರ ರೇ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು 401 ಕೋಟಿ ರೂ. ಅನುದಾನ ಮಂಜೂರಾಗಿದೆ. ಆದರೆ ಈವರೆಗಿನ ಪ್ರಗತಿ ಕಡಿಮೆಯಿದೆ. ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬೆಳೆಗಾರರಿಗೆ ಸೌಲಭ್ಯ ಕಲ್ಪಿಸುವತ್ತ ಗಮನ ಹರಿಸಬೇಕೆಂದು ತಿಳಿಸಿದರು. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಕೃಷ್ಣ ಇತರರು ಉಪಸ್ಥಿತರಿದ್ದರು.

ಜಿಎಸ್‌ಟಿಯಿಂದ ತೆರಿಗೆ ಹೆಚ್ಚಳ
ತೋಟಗಾರಿಕೆ ಬೆಳೆಗಾರರು 1.60 ಲಕ್ಷ ರೂ. ಮೌಲ್ಯದ ಟ್ಯಾಂಕರ್‌ ಖರೀದಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ 50,000 ರೂ. ಸಬ್ಸಿಡಿ ಘೋಷಿಸಿತ್ತು. ಆದರೆ ಜಿಎಸ್‌ಟಿಯಡಿ ಶೇ.28ರಷ್ಟು ತೆರಿಗೆ ವಿಧಿಸಿರುವುದರಿಂದ ಸಬ್ಸಿಡಿಯ ಬಹುತೇಕ ಮೊತ್ತ ತೆರಿಗೆಗೆ ವಿನಿಯೋಗವಾಗಲಿದೆ. ಇದರಿಂದ ರೈತರು ಸೌಲಭ್ಯ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸಬ್ಸಿಡಿ ಹೆಚ್ಚಿಸುವ ಸಂಬಂಧ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಸಚಿವ ಮಲ್ಲಿಕಾರ್ಜುನ್‌ ಹೇಳಿದರು.

ರಾಷ್ಟ್ರಪತಿ ಭವನದಿಂದ ಆಹ್ವಾನ
ರಾಷ್ಟ್ರಪತಿ ಭವನದ ಆವರಣದಲ್ಲಿನ ಹೂದೋಟವನ್ನು ವಿಶೇಷ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸುವಂತೆ ರಾಷ್ಟ್ರಪತಿ ಭವನದ ಕಾರ್ಯದರ್ಶಿಗಳು ರಾಜ್ಯ ತೋಟಗಾರಿಕೆ ಇಲಾಖೆಗೆ ಆಹ್ವಾನ ನೀಡಿದ್ದು, ಹೆಮ್ಮೆಯ ಸಂಗತಿಯಾಗಿದೆ. ಇದು ರಾಜ್ಯಕ್ಕೆ ಕೀರ್ತಿ ತರುವ ವಿಚಾರವಾಗಿದ್ದು, ಆದ್ಯತೆಯ ಮೇರೆಗೆ ಇತ್ತ ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next