ಗದಗ: ಗಾಂಧಿ ವೇಷ ಧರಿಸಿ ಸಾಮಾಜಿಕ ಸಮಸ್ಯೆಗಳು ಹಾಗೂ ಗ್ರಂಥ ಜೋಳಿಗೆ ಅಭಿಯಾನದ ಮೂಲಕ ಗಮನ ಸೆಳೆದಿರುವ ರೋಣ ತಾಲೂಕಿನ ಕರಕೀಕಟ್ಟಿ ಗ್ರಾಮದ ಮುತ್ತಣ್ಣ ತಿರ್ಲಾಪುರ ಗಾಂಧಿ ಜಯಂತಿ ನಿಮಿತ್ತ “ಗ್ರಂಥ ಜೋಳಿಗೆ-ಮೋದಿ ಬಳಿಗೆ’ ಎಂಬ ಘೋಷಣೆಯೊಂದಿಗೆ ಪಾದಯಾತ್ರೆಯಲ್ಲಿ ದೆಹಲಿ ತಲುಪಿದ್ದಾರೆ. ಈ ನಡುವೆ ಸುಮಾರು 45ಕ್ಕೂ ಹೆಚ್ಚು ಗ್ರಾಮಗಳಲ್ಲಿ ಗ್ರಂಥಾಲಯಗಳ ಸ್ಥಾಪನೆಗೆ ಪ್ರೇರಣೆಯಾಗಿದ್ದಾರೆ.
ಹೌದು. 51 ವರ್ಷದ ಮುತ್ತಣ್ಣ ತಿರ್ಲಾಪುರ ಶಾಲೆಯನ್ನೇ ಕಾಣದಿದ್ದರೂ ಸಾಮಾಜಿಕ ಸಮಸ್ಯೆಗಳು ಹಾಗೂ ಶಿಕ್ಷಣ ಪರ ಜಾಗೃತಿಗೆ ಎತ್ತಿದ ಕೈ. ಜಿಲ್ಲೆಯ ಕಪ್ಪತ್ತಗುಡ್ಡ ಮತ್ತು ಮಹದಾಯಿ ವಿಚಾರಗಳ ಕುರಿತು ಜನರು ಹೋರಾಟಕ್ಕಿಳಿಯುತ್ತಿದ್ದರೆ, ಗಾಂಧಿ ವೇಷ ಧರಿಸಿ, ಕೈಯಲ್ಲಿ ಕೋಲು ಹಿಡಿದು ಮುತ್ತಣ್ಣ ಪ್ರತ್ಯಕ್ಷವಾಗುತ್ತಿದ್ದರು. ಅದರಂತೆ ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಕೋವಿಡ್ ತಡೆಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆ ನಿಷೇಧ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ಕುರಿತು ಗಾಂಧಿ ವೇಷ ಧರಿಸಿ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದರು. ಇದೀಗ ಗ್ರಂಥ ಜೋಳಿಗೆ ಮೋದಿ ಬಳಿಗೆ ಎಂಬ ಘೋಷವಾಕ್ಯದೊಂದಿಗೆ ದೆಹಲಿಗೆ ಪಾದಯಾತ್ರೆ ಬೆಳೆಸಿದ್ದಾರೆ. ಸುಮಾರು 1,900 ಕಿ.ಮೀ. ದೂರವನ್ನು ಕೇವಲ ಒಂದು ತಿಂಗಳ ಅವ ಧಿಯಲ್ಲಿ ಕ್ರಮಿಸಿದ್ದು, ಕೆಲವೆಡೆ ಟ್ರಕ್ ಚಾಲಕರು ಹಾಗೂ ಖಾಸಗಿ ವಾಹನಗಳ ಸವಾರರು ನೆರವಾಗಿದ್ದಾರೆ.
ಏನಿದು “ಗ್ರಂಥ ಜೋಳಿಗೆ’? : ವೃತ್ತಿಯಲ್ಲಿ ಕೃಷಿ ಕಾರ್ಮಿಕ ಹಾಗೂ ಚಿಕ್ಕದೊಂದು ಹೋಟೆಲ್ ಹೊಂದಿರುವ ಮುತ್ತಣ್ಣ, ಭಿಕ್ಷೆ ರೂಪದಲ್ಲಿ ಬಂದಿರುವ ಪುಸ್ತಕಗಳನ್ನೇ ಮನೆಯಲ್ಲಿ ಅಚ್ಚುಕಟ್ಟಾಗಿ ಹೊಂದಿಸಿ, ಪುಟ್ಟದೊಂದು ಗ್ರಂಥಾಲಯವನ್ನಾಗಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ “ಗ್ರಂಥ ಜೋಳಿಗೆ-ಮೋದಿಯ ಬಳಿಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಮಹಾತ್ಮ ಗಾಂಧಿ ವೇಷಧಾರಿಯಾಗಿ ಪಾದಯಾತ್ರೆ ಬೆಳೆಸಿರುವ ಮುತ್ತಣ್ಣ, ಪ್ರತಿನಿತ್ಯ ಗರಿಷ್ಠ 50 ಕಿ.ಮೀ. ಗಳಂತೆ ಕ್ರಮಿಸಿದ್ದಾರೆ. ಈ ನಡುವೆ ರಾತ್ರಿ ವಾಸ್ತವ್ಯ ಮಾಡುವ ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಆರಂಭಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಹಳೆಯ ಪುಸ್ತಕಗಳನ್ನು ಗ್ರಾಮದ ಯಾವುದಾದರೊಂದು ದೇವಸ್ಥಾನ ಹಾಗೂ ಸಮುದಾಯ ಭವನಗಳಲ್ಲಿ ಸಂಗ್ರಹಿಸಿ, ಗ್ರಂಥಾಲಯ ಆರಂಭಿಸಲು ಮುಂದೆ ಬಂದಿದ್ದಾರೆ. ಇದರಿಂದ ಮಕ್ಕಳು ಹಾಗೂ ಜನರ ಜ್ಞಾನಾರ್ಜನೆಗೆ ನೆರವಾಗುತ್ತದೆ ಎಂಬ ಪ್ರೇರಣಾದಾಯಕ ಮಾತುಗಳೊಂದಿಗೆ ಜನರಲ್ಲಿ ಸಾಕ್ಷರತೆಯ ಪ್ರಜ್ಞೆ ಮೂಡಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರದ ಗಿರಯಾಲಕೆಬಿ, ಎಂ.ಕೆ.ಹುಬ್ಬಳ್ಳಿ, ಕಿತ್ತೂರು, ಗೋಕಾಕ, ಕೊಳವಿ, ಉಪ್ಪಾರಟ್ಟಿ, ಬೆಡಕಿಹಾಳ, ಚಿಕ್ಕಬಾಗೇವಾಡಿ, ಹಿರೇಬಾಗೇವಾಡಿ, ಬೆಣಚಿನಮರಡಿ, ಅನಂತಪುರ, ಮಾಲಾಬಾದ, ಪಾರ್ತನಹಳ್ಳಿ, ಮಹಾರಾಷ್ಟ್ರದ ಹಿತ್ತಲಕಾರಂಜಿ ಸೇರಿದಂತೆ ಸುಮಾರು 45 ಗ್ರಾಮಗಳಲ್ಲಿ ಗ್ರಂಥಾಲಯಗಳು ಬಾಗಿಲು ತೆರೆದಿವೆ ಎನ್ನಲಾಗಿದೆ.
ಅ. 2 ರಂದು ದೆಹಲಿಯ ರಾಜಘಾಟ್ ನಲ್ಲಿರುವ ಬಾಪೂಜಿ ಸಮಾಧಿಯ ದರ್ಶನ ಪಡೆಯಬೇಕು. ಅವಕಾಶ ಸಿಕ್ಕರೆ, ಪ್ರಧಾನಮಂತ್ರಿಗಳನ್ನು ಕಂಡು, ಪುಸ್ತಕ ನೀಡಬೇಕೆಂಬ ಆಸೆಯಿತ್ತು. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಅದ್ಯಾವುದಕ್ಕೂ ಅನುತಿ ದೊರೆಯುವುದಿಲ್ಲ ಎಂಬುದು ಖಾತ್ರಿಯಾಗಿದ್ದರಿಂದ ಯಾರಿಗೂ ಮನವಿ ಸಲ್ಲಿಸಿಲ್ಲ. ಆದರೆ, ಪಾದಯಾತ್ರೆ ವೇಳೆ ಭಾಷೆ ತಡಕಾದರೂ, ಸಾರ್ವಜನಿಕರು ಪ್ರೀತಿಯಿಂದ ಅನ್ನ, ಆಶ್ರಯ ಕಲ್ಪಿಸಿದರು. ಗ್ರಂಥಾಲಯ ಸ್ಥಾಪನೆಯೊಂದಿಗೆ ಗ್ರಾಮಕ್ಕೊಂದು ಲಕ್ಷ ವೃಕ್ಷ ಕಲ್ಪನೆ ಮೂಲಕ ಹಸಿರೀಕರಣ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಭವಿಷ್ಯದಲ್ಲಿ ಶಿಕ್ಷಣ ಮತ್ತು ಹಸಿರ ಸಿರಿಯಿಂದ ಸಮೃದ್ಧವಾಗಬೇಕು. –
ಮುತ್ತಣ್ಣ ಚನಬಸ್ಸಪ್ಪ ತಿರ್ಲಾಪೂರ, ಗಾಂಧಿ ವೇಷಧಾರಿ