Advertisement

ಅತ್ಯಾಧುನಿಕ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು

01:01 PM Feb 13, 2017 | |

ಮೈಸೂರು: ಜನರ ಆರೋಗ್ಯ ರಕ್ಷಣೆಗಾಗಿ ಮೈಸೂರು ನಗರದಲ್ಲಿ ಅಂದಾಜು 700 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಉದ್ದೇಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Advertisement

ಭಾನುವಾರ ವಿದ್ಯಾರಣ್ಯಪುರಂನ ಬೂತಾಳೆ ಮೈದಾನದಲ್ಲಿ ಏರ್ಪಡಿಸಿದ್ದ ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕಾಮಗಾರಿ ಶಂಕುಸ್ಥಾಪನೆ ಹಾಗೂ ವಿವಿಧ ಸವಲತ್ತುಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮೈಸೂರು ನಗರ ಮತ್ತು ಜಿಲ್ಲೆಯ ಜನರ ಆರೋಗ್ಯ ರಕ್ಷಣೆಗಾಗಿ ತಜ್ಞ ಚಿಕಿತ್ಸೆಗಳು ಹಾಗೂ ಪರಿಣಿತ ತಜ್ಞ ವೈದ್ಯರ ಸೇವೆ ದೊರಕುವಂತೆ ಮಾಡಲು ಆಸ್ಪತ್ರೆ ನಿರ್ಮಿಸಲಾಗುವುದು.

ಜತೆಗೆ ಮೈಸೂರಿನಲ್ಲಿ 500 ಹಾಸಿಗೆಗಳ ಸಾಮರ್ಥ್ಯದ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೂ ಸರ್ಕಾರ ಮಂಜೂರಾತಿ ನೀಡಿದ್ದು, 136 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಕಟ್ಟಡ ಕಾಮಗಾರಿ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ.  ಆನಂತರ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳೂ ಮೈಸೂರಿನ ಆಸ್ಪತ್ರೆಯಲ್ಲೇ ದೊರೆಯಲಿದೆ.

ಜತೆಗೆ ಮೇಟಗಳ್ಳಿಯ ಪಿ.ಕೆ.ಸ್ಯಾನಿಟೋರಿಯಂ ಆಸ್ಪತ್ರೆ ಆವರಣದಲ್ಲಿ ಟ್ರಾಮಾ ಕೇರ್‌ ಸೆಂಟರ್‌ ತೆರೆಯಲಾಗುತ್ತಿದೆ ಎಂದರು. ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ ಮುಂತಾದ ಹಲವಾರು ವಿಶೇಷತೆಗಳನ್ನು ಹೊಂದಿರುವ ಮೈಸೂರು ನಗರದ ಸೌಂದರ್ಯ ಹಾಗೂ ಸ್ವತ್ಛತೆ ಕಾಪಾಡಿಕೊಳ್ಳಲು ಹಾಗೂ ಅಗತ್ಯ ಮೂಲ ಸೌಲಭ್ಯಗಳನ್ನು ಮೈಸೂರಿಗೆ ಒದಗಿಸಲು ಕಳೆದ ಮೂರೂವರೆ ವರ್ಷಗಳಲ್ಲಿ ಮೈಸೂರು ಮಹಾ ನಗರಪಾಲಿಕೆಗೆ 350 ಕೋಟಿ ಸೇರಿದಂತೆ 950 ಕೋಟಿ ರೂ.ಗಳನ್ನು ಮೈಸೂರು ನಗರಕ್ಕೆ ನೀಡಿರುವುದಾಗಿ ಹೇಳಿದರು.

ಸುಮಾರು 10 ಸಾವಿರ ವಿದ್ಯಾರ್ಥಿ ನಿಯರು ವಿದ್ಯಾಭ್ಯಾಸ ಮಾಡುತ್ತಿರುವ ಮಹಾರಾಣಿ ಕಾಲೇಜು ಮತ್ತು ವಿದ್ಯಾರ್ಥಿನಿಲಯಕ್ಕೆ ಪಡುವಾರಹಳ್ಳಿಯಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ ಡೌನ್‌ ಕಟ್ಟಡ ಆಧುನೀಕರಣಕ್ಕೆ ಹಾಗೂ ಸುಯೇಜ್‌ ಫಾರಂನಿಂದ ಬರುತ್ತಿರುವ ದುರ್ವಾಸನೆ ನಿವಾರಣೆಗಾಗಿ ಬಜೆಟ್‌ನಲ್ಲಿ ಹಣ ಒದಗಿಸುವುದಾಗಿ ಹೇಳಿದ ಅವರು, ನಗರದ ಇರ್ವಿನ್‌ ರಸ್ತೆ ಅಗಲೀಕರಣಕ್ಕೆ 30 ಕೋಟಿ ಅನುದಾನ ನೀಡಲಾಗುವುದು. ಮೈಸೂರಿಗೆ ಎರಡು ಬಾರಿ ಸ್ವತ್ಛ ನಗರಿ ಗೌರವ ಸಿಗಲು ಜನರ ಸಹಕಾರ ಹಾಗೂ ಪೌರಕಾರ್ಮಿಕರ ಶ್ರಮ ಕಾರಣ ಎಂದರು.

Advertisement

ರಾಜ್ಯದ ಎಲ್ಲ ಪೌರ ಕಾರ್ಮಿಕರನ್ನು ಹಂತ ಹಂತವಾಗಿ ಕಾಯಂ ಮಾಡಲು ತೀರ್ಮಾನಿಸಲಾಗಿದೆ. ಜತೆಗೆ ಮಾಸಿಕ ಏಳು ಸಾವಿರವಿದ್ದ ಪೌರಕಾರ್ಮಿಕರ ಸಂಬಳವನ್ನು 14 ಸಾವಿರ ರೂ. ಗಳಿಗೆ ತಮ್ಮ ಸರ್ಕಾರ ಹೆಚ್ಚಿಸಿದೆ ಎಂದು ಮಾಹಿತಿ ನೀಡಿದರು. ಎಲೆ ತೋಟದ ನಿವಾಸಿಗಳಿಗೆ ಬಹಳ ವರ್ಷಗಳಿಂದ ಹಕ್ಕುಪತ್ರ ಸಿಕ್ಕಿಲ್ಲ. ಇದಕ್ಕಾಗಿ ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿ ಹಾಗೂ ಮಹಾ ನಗರಪಾಲಿಕೆ ಆಯುಕ್ತರು ಜಂಟಿ ಸಮೀಕ್ಷೆ ನಡೆಸಿದ್ದು, ಸ್ವಾಧೀನದಲ್ಲಿ ಇರುವವರಿಗೆ ಹಕ್ಕುಪತ್ರ ನೀಡಲು ಕ್ರಮವಹಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಉಪಸ್ಥಿತರಿದ್ದರು. ಶಾಸಕ ಎಂ.ಕೆ .ಸೋಮಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಮೇಯರ್‌ ಎಂ.ಜೆ.ರವಿಕುಮಾರ್‌, ನಿಗಮ – ಮಂಡಳಿ ಅಧ್ಯಕ್ಷರಾದ ಡಿ. ಧ್ರುವಕುಮಾರ್‌, ಬಿ.ಸಿದ್ದರಾಜು, ಎಚ್‌.ಎ. ವೆಂಕಟೇಶ್‌, ಮಹಾ ನಗರಪಾಲಿಕೆ ಉಪ ಮೇಯರ್‌ ರತ್ನ ಲಕ್ಷಣ್‌, ಜಿಲ್ಲಾಧಿಕಾರಿ ಡಿ. ರಂದೀಪ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next