Advertisement

ದುರಸ್ತಿ ಕಾಮಗಾರಿ ಮಾಡದೇ ಅನುದಾನ ಬಳಕೆ

02:22 PM Jun 15, 2019 | Team Udayavani |

ಹಾನಗಲ್ಲ: ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗಾಗಿ ಲಕ್ಷಾಂತರ ರೂ. ಅನುದಾನ ವ್ಯಯಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಘಟಕಗಳ ದುರಸ್ತಿಯಾಗದೆ ಖರ್ಚು ಹಾಕಲಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಶಿವಬಸಪ್ಪ ಪೂಜಾರ ಕಿಡಿಕಾರಿದರು.

Advertisement

ಶುಕ್ರವಾರ ಪಟ್ಟಣದ ಸಾಮರ್ಥ್ಯ ಸೌಧದ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಅಧಿಕಾರಿ ಆರ್‌.ಎಂ.ಸೊಪ್ಪಿಮಠ ಅವರನ್ನು ತರಾಟೆ ತೆಗೆದುಕೊಂಡ ಅವರು, ತಾಲೂಕಿನಾದ್ಯಂತ ಅನೇಕ ಕುಡಿಯುವ ನೀರಿನ ಘಟಕಗಳು ಕೆಲಸ ಮಾಡುತ್ತಿಲ್ಲ. ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗುತ್ತಿದೆ. ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆಯಾದರೂ ಒಂದು ದಿನವೂ ನೀರು ಬರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಯಂತ್ರ ದುರಸ್ತಿಗಾಗಿ ಜಿಪಂ ಅಧಿಕಾರಿಗಳು 1.24 ಲಕ್ಷ ರೂ. ಖರ್ಚು ಹಾಕಿದ್ದಾರೆ. ಆದರೆ, ಯಂತ್ರ ದುರಸ್ತಿಯೂ ಆಗಲಿಲ್ಲ, ಇನ್ನೂ ನೀರೂ ಬಂದಿಲ್ಲ. ಇದಲ್ಲದೇ ಡೊಳ್ಳೇಶ್ವರ ಗ್ರಾಮದಲ್ಲೂ 84 ಸಾವಿರ ವೆಚ್ಚದಲ್ಲಿ ದುರಸ್ತಿಗೊಳಿಸಿದ್ದರೂ ಕಾರ್ಯ ನಿರ್ವಹಿಸುತ್ತಿಲ್ಲ. ಉಪ್ಪು ನೀರು ಸಿಹಿ ನೀರಾಗಿ ಪರಿವರ್ತನೆಯಾಗುತ್ತಿಲ್ಲ. ದುರಸ್ತಿಗೆ ಖರ್ಚು ಮಾಡಿದ ಹಣಕ್ಕೆ ಸ್ವಲ್ಪ ಹೆಚ್ಚು ಹಣ ವಿನಿಯೋಗಿಸಿದ್ದರೆ ಹೊಸ ಯಂತ್ರವೇ ಬರುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ ಮಾತನಾಡಿ, ಲ್ಯಾಂಡ್‌ಆರ್ಮಿ, ಕೆಆರ್‌ಐಡಿಎಲ್, ಜಿಪಂ, ಸಹಕಾರ ಇಲಾಖೆಗಳು ಸೇರಿ ಒಟ್ಟು 129 ಘಟಕಗಳನ್ನು ಸ್ಥಾಪಿಸಿವೆ. ಅದರಲ್ಲಿ ಅರ್ಧದಷ್ಟು ಕೆಟ್ಟು ನಿಂತಿವೆ. ಪ್ರತಿ ಘಟಕಕ್ಕೆ 15 ಸಾವಿರ ನಿರ್ವಹಣೆ ಅನುದಾನ ಮಂಜೂರು ಮಾಡಿದ್ದರೂ ತಾಲೂಕಿನಲ್ಲಿ ಯಂತ್ರಗಳು ಕೆಟ್ಟಿರುವುದು ಹಣ ಸದ್ಬಳಕೆಯಾಗುತ್ತಿಲ್ಲ ಎಂಬುದು ತಿಳಿದುಬರುತ್ತದೆ ಎಂದು ಆರೋಪಿಸಿದರು.

ಸದಸ್ಯ ಸಿದ್ದನಗೌಡ ಪಾಟೀಲ ಮಾತನಾಡಿ, ಚಿಕ್ಕಾಂಶಿ ಹೊಸೂರನಲ್ಲಿನ 9.20 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆ 11 ಗ್ರಾಮಗಳಿಗೆ ನೀರೊದಗಿಸಬೇಕಿದ್ದರೂ, ಯಾವುದೇ ಗ್ರಾಮಕ್ಕೂ ನೀರು ಪೂರೈಸಿಲ್ಲ. ಗೊಂದಿ ಗ್ರಾಮದ ಬಳಿ ಎರಡೂವರೆ ವರ್ಷದಿಂದ ವಿದ್ಯುತ್‌ ಕಂಬವೊಂದು ಕೆರೆಯ ದಂಡೆಯಲ್ಲಿ ಮಲಗಿಕೊಂಡಿದ್ದರೂ ಹೆಸ್ಕಾಂ ಅಧಿಕಾರಿಗಳು ಎಚ್ಚರವಾಗಿಲ್ಲ. ಮಳೆ ಬಂದರೆ ಇಡೀ ಕೆರೆಗೆ ವಿದ್ಯುತ್‌ ಹರಿಯುತ್ತದೆ. ಜನ-ಜಾನುವಾರುಗಳು ಪ್ರಾಣಾಪಾಯದ ಭಯದಲ್ಲಿದ್ದಾರೆ, ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿದರು.

ಮಾತೃಪೂರ್ಣ ಯೋಜನೆ ಬಗ್ಗೆ ಸ್ಥಳೀಯವಾಗಿರುವ ಸಮಿತಿಗಳು ನಿಗಾ ವಹಿಸುತ್ತವೆ. ಲೋಪಕ್ಕೆ ಅವಕಾಶ ನೀಡದಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.

Advertisement

ತಾಪಂ ಸದಸ್ಯ ರಾಮಣ್ಣ ಪೂಜಾರ ಮಾತನಾಡಿ, ಮಾತೃಪೂರ್ಣ ಯೋಜನೆಯಡಿ ಹಣ ಪೋಲಾಗುತ್ತಿದೆ. ಬಾಣಂತಿಯರು, ಗರ್ಭಿಣಿಯರ ಸಂಖ್ಯೆ ಕೇವಲ ಹಾಜರಿ ಪುಸ್ತಕದಲ್ಲಿವೆ. ಅವರಾರೂ ಅಂಗನವಾಡಿಗೆ ಬರುವುದಿಲ್ಲ. ಆದರೂ ಹಣ ಖರ್ಚು ಹಾಕಲಾಗುತ್ತದೆ. ತಾಲೂಕಿನ ಬಹಳಷ್ಟು ಕೇಂದ್ರಗಳಲ್ಲಿ ಶೌಚಾಲಯಗಳಿಲ್ಲ ಎಂದು ಆರೋಪಿಸಿದರು.

ತಾಲೂಕಿನ 23 ಪ್ರಾಥಮಿಕ ಶಾಲೆಗಳ ದುರಸ್ತಿಗಾಗಿ 21 ಲಕ್ಷ ರೂ. ಮಂಜೂರಾಗಿದ್ದರೂ ಕಾಮಗಾರಿ ನಡೆದಂತೆ ಕಂಡುಬರುತ್ತಿಲ್ಲ. ಹಣ ಯಾರ ಪಾಲಾಯಿತೆಂಬುದು ತಿಳಿಯುತ್ತಿಲ್ಲ ಎಂದು ಸದಸ್ಯ ಬಸಣ್ಣ ಬೂದಿಹಾಳ ಆರೋಪಿಸಿದರು.

ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿಪಂ ಸದಸ್ಯ ಟಾಕನಗೌಡ ಪಾಟೀಲ, ಉಪಾಧ್ಯಕ್ಷೆ ಸರಳಾ ಜಾಧವ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕ್ರಣ್ಣ ಪ್ಯಾಟಿ, ಕಾರ್ಯನಿರ್ವಾಹಕ ಅಧಿಕಾರಿ ಚನಬಸಪ್ಪ ಹಾವಣಗಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next