Advertisement
ನಗರದ ಹೊರವಲಯದ ಕುಂದುವಾಡ ರಸ್ತೆಯ ಕೆಎಚ್‌ಬಿ ಕಾಲೋನಿಯಲ್ಲಿ ಶನಿವಾರ ನಡೆದ ಉದ್ದೇಶಿತ ನ್ಯಾಯಾಲಯಗಳ ಸಂಕೀರ್ಣದ ಶಂಕುಸ್ಥಾಪನೆ, ಮಕ್ಕಳಸ್ನೇಹಿ ನ್ಯಾಯಾಲಯ ಉದ್ಘಾಟನೆ ಹಾಗೂ ಚನ್ನಗಿರಿ ನ್ಯಾಯಾಲಯದ ಎರಡನೇ ಮಹಡಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ವೋತ್ಛ ನ್ಯಾಯಾಲಯದ ಸಮಿತಿ ಇತ್ತೀಚೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ಸಭೆಯಲ್ಲಿಯೂ ನ್ಯಾಯಾಲಯಗಳಲ್ಲಿ ಯಾವುದೇ ಮೂಲ ಸೌಕರ್ಯ ಕೊರತೆಯಾಗದಂತೆ ಕ್ರಮ ವಹಿಸಲು ಸೂಚಿಸಿದೆ. ಅಂತೆಯೇ ಸರ್ಕಾರಗಳು ನ್ಯಾಯಾಂಗ ವ್ಯವಸ್ಥೆಯಲ್ಲಿನ ಸೌಕರ್ಯ ಬಲಪಡಿಸುವತ್ತ ಗಮನಹರಿಸಬೇಕು ಎಂದರು.
Related Articles
Advertisement
ಉಚ್ಚ ನ್ಯಾಯಾಲಯದ ಇನ್ನೋರ್ವ ನ್ಯಾಯಮೂರ್ತಿ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಕೆ. ನಟರಾಜನ್ ಮಾತನಾಡಿ, ನ್ಯಾಯಾಲಯಗಳ ಸಂಕೀರ್ಣ ಮಂಜೂರಾತಿಗಾಗಿ ಬಹುದಿನಗಳಿಂದ ಪ್ರಯತ್ನ ಪಡಲಾಗಿತ್ತು. ಎಲ್ಲರ ನಿರಂತರ ಪ್ರಯತ್ನದ ಫಲವಾಗಿ ಇಂದು ನ್ಯಾಯಾಲಯ ಸಂಕೀರ್ಣಕ್ಕೆ ಅನುಮೋದನೆ ದೊರತಿದೆ ಎಂದರು.
ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮಾತನಾಡಿ, ನ್ಯಾಯಾಲಯ ಸಂಕೀರ್ಣ ಬಹು ವರ್ಷಗಳ ಹಿಂದೆಯೇ ನಿರ್ಮಾಣವಾಗಬೇಕಿತ್ತು. ದಾವಣಗೆರೆ ಜಿಲ್ಲೆ ಘೋಷಣೆಯಾದ ಬಳಿಕ ಹಂತ ಹಂತವಾಗಿ ಜಿಲ್ಲಾಡಳಿತ ಭವನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸೇರಿದಂತೆ ಎಲ್ಲವನ್ನೂ ನಿರ್ಮಾಣ ಮಾಡಲಾಯಿತು. ಆದರೆ ನ್ಯಾಯಾಲಯ ಸಂಕೀರ್ಣವೊಂದು ಬಾಕಿ ಇತ್ತು. ಅದೂ ಸಹ ಈಗ ನಿರ್ಮಾಣ ಆಗುತ್ತಿರುವುದು ಸಂತಸದ ಸಂಗತಿ. ನ್ಯಾಯಾಲಯ ಸಂಕೀರ್ಣ ಕಟ್ಟಡ ಜಿಲ್ಲೆಗೆ ಕಿರೀಟ ಆಗುವ ರೀತಿಯಲ್ಲಿ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜ್, ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತ ಬಿ.ಟಿ. ಕಾಂತರಾಜ್ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಸ್ತುತ ರಾಜ್ಯದ ನ್ಯಾಯಾಲಯಗಳಲ್ಲಿನ ಮೂಲ ಸೌಕರ್ಯ ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ದಾಖಲೆಗಳ ಡಿಜಿಲೀಕರಣ, ಗಣಕೀಕರಣ, ನ್ಯಾಯಾಲಯಗಳ ಉನ್ನತೀಕರಣದ ಜತೆಗೆ ಅಂಗವಿಕಲರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ದಾವಣಗೆರೆ ಸೇರಿದಂತೆ ರಾಜ್ಯದ 24 ಕಡೆಗಳಲ್ಲಿ ಶಿಶು ಸ್ನೇಹಿ ನ್ಯಾಯಾಲಯಗಳಿದ್ದು ಅಲ್ಲಿ ಮಕ್ಕಳ ಮನಸ್ಸು ಆಕರ್ಷಿಸುವ ವಿನ್ಯಾಸ, ಗ್ರಂಥಾಲಯ, ವಿಶ್ರಾಂತಿಗೃಹ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸಲಾಗಿದೆ. – ರಿತುರಾಜ್ ಅವಸ್ಥಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ