Advertisement

ಅನುದಾನ ವಾಪಸ್‌; ತಾಪಂ ಸದಸ್ಯರ ಆಕ್ರೋಶ

11:18 AM Sep 13, 2019 | Team Udayavani |

ಹಾವೇರಿ: ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಬಂದ ಅನುದಾನ ಮರಳಿ ಹೋಗಿರುವ ಬಗ್ಗೆ ಗುರುವಾರ ತಾಪಂ ಸಭಾಭವನದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಭಾರೀ ಆಕ್ರೋಶ ವ್ಯಕ್ತವಾಯಿತು.

Advertisement

ಸಭೆ ಆರಂಭಗೊಳ್ಳುತ್ತಿದ್ದಂತೆ ತಾಪಂ ಸದಸ್ಯ ಮಾಲತೇಶ ಬನ್ನಿಮಟ್ಟಿ ಮಾತನಾಡಿ, ತಾಲೂಕಿನ ಅಂಗನವಾಡಿಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಸಂಬಂಧಿಸಿ ಸರಿಯಾಗಿ ಕ್ರಿಯಾ ಯೋಜನೆ ತಯಾರಿಸದ ಇರುವುದರಿಂದ ಬಂದಿರುವ ಅನುದಾನ ಹಿಂದಕ್ಕೆ ಹೋಗಿದೆ. ಇದಕ್ಕೆ ಯಾರು ಹೊಣೆ? ಎಂದು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅನುದಾನ ಸದ್ಬಳಕೆಯಾಗಲಿಲ್ಲ ಎಂದು ದೂರಿದರು.

ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿ, ಶೌಚಾಲಯ ನಿರ್ಮಾಣ ಹಾಗೂ ದುರಸ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಇಲಾಖಾಧಿಕಾರಿಗಳಿಗೆ ನೀಡಲಾಗಿತ್ತು. ಹೊಸ ಶೌಚಾಲಯಕ್ಕೆ 15,000 ರೂ., ರಿಪೇರಿಗೆ 12,000 ರೂ. ಅನುದಾನ ನೀಡಲಾಗಿತ್ತು. 15,000 ರೂ.ಗಳಲ್ಲಿ ಶೌಚಾಲಯ ನಿರ್ಮಿಸಲು ಸಾಧ್ಯವಿಲ್ಲವೆಂದು ಮೇಲಧಿಕಾರಿಗಳು ಹೇಳಿದ್ದರಿಂದ ಶೌಚಾಲಯ ಕಾಮಗಾರಿ ಕೈಗೊಂಡಿಲ್ಲ. ತಾಲೂಕಿನಲ್ಲಿ 57 ಅಂಗನವಾಡಿ ಕೇಂದ್ರಗಳು ಸೋರುತ್ತಿದ್ದು, ಅವುಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಾಲೂಕು ತೋಟಗಾರಿಕೆ ಇಲಾಖಾಧಿಕಾರಿ ಮಾತನಾಡಿ, ನೆರೆ ಪ್ರವಾಹದಿಂದಾಗಿ ತಾಲೂಕಿನಲ್ಲಿ 4690.33 ಹೆಕ್ಟೇರ್‌ ತೋಟಗಾರಿಕಾ ಬೆಳೆ ನಾಶಗೊಂಡಿದ್ದು, ಪರಿಹಾರಕ್ಕಾಗಿ 4190 ರೈತರಿಂದ ಅರ್ಜಿ ಬಂದಿವೆ. ಇನ್ನೂ ಎರಡ್ಮೂರು ದಿನಗಳಲ್ಲಿ ಸಮೀಕ್ಷೆ ಕಾರ್ಯ ಮುಗಿಯಲಿದೆ ಎಂದು ಸಭೆಗೆ ತಿಳಿಸಿದರು.

ತಾಲೂಕು ಕೃಷಿ ಅಧಿಕಾರಿ ಮಾತನಾಡಿ, ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ ಅಂದಾಜು 25-30 ಸಾವಿರ ಹೆಕ್ಟೇರ್‌ ಕೃಷಿ ಭೂಮಿ ಹಾನಿಯಾಗಿದ್ದು, ಮರು ಸಮೀಕ್ಷೆಯಲ್ಲಿ ಹಾನಿಯ ಪ್ರಮಾಣ ಹೆಚ್ಚಾಗಬಹುದು. ಇನ್ನೂ ಮೂರ್‍ನಾಲ್ಕು ದಿನಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದೆ. ರೈತರ ಮಾಹಿತಿಯನ್ನು ಪರಿಹಾರ ಸಾಫ್ಟವೇರ್‌ಗೆ ಅಳವಡಿಸಲಾಗುವುದು. ತಾಲೂಕಿನಲ್ಲಿ ಸಮರ್ಪಕವಾಗಿ ಯೂರಿಯಾ ಗೊಬ್ಬರ ವಿತರಿಸಲಾಗಿದ್ದು, ಯಾವುದೇ ಸಮಸ್ಯೆಯಿಲ್ಲ ಎಂದು ಸಭೆಗೆ ತಿಳಿಸಿದರು.

Advertisement

ಶುದ್ಧ ನೀರಿನ ಘಟಕ ದುರಸ್ತಿ ಮಾಡಿ:

ಗ್ರಾಮೀಣ ಪ್ರದೇಶದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಬಂದ್‌ ಆಗಿವೆ. ಅವುಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಹಳ್ಳಳ್ಳಿ, ತೆರದಳ್ಳಿ ಗ್ರಾಮಗಳಲ್ಲಿ ನೀರಿನ ಘಟಕಗಳನ್ನು ನಿರ್ಮಿಸಿದ್ದರೂ ಅವು ಇನ್ನೂ ಆರಂಭಗೊಂಡಿಲ್ಲ. ಕೂಡಲೇ ಶುದ್ಧನೀರಿನ ಘಟಕಗಳನ್ನು ದುರಸ್ತಿಗೊಳಿಸಬೇಕು ಎಂದು ಸದಸ್ಯ ಮಾಲತೇಶ ಬನ್ನಿಮಟ್ಟಿ ಆಗ್ರಹಿಸಿದರು.

ತಾಪಂ ಇಒ ಅನ್ನಪೂರ್ಣ ಮುದಕಮ್ಮನವರ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಜನರಿಗೆ ಸಮಸ್ಯೆಯಾದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಬಸ್‌ ಸೌಲಭ್ಯ ಕಲ್ಪಿಸಿ: ಸದಸ್ಯೆ ನಾಗಮ್ಮ ಬಂಕಾಪುರ ಮಾತನಾಡಿ, ಗಣಜೂರ ಗ್ರಾಮಕ್ಕೆ ಬಸ್‌ ಸೌಲಭ್ಯ ಕಲ್ಪಿಸದೇ ಇರುವುದರಿಂದ ಗ್ರಾಮದ 50-60 ವಿದ್ಯಾರ್ಥಿಗಳಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಾರಿಗೆ ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ ಬಸ್‌ ಸೌಲಭ್ಯ ಕಲ್ಪಿಸಿಲ್ಲ. ಮೊದಲೇ ನಮಗೆ ಬಸ್‌ ಬಿಡುವುದಿಲ್ಲ ಎಂದು ಹೇಳಿದ್ದರೆ ವಿದ್ಯಾರ್ಥಿಗಳು ಬಸ್‌ ಪಾಸ್‌ ಮಾಡಿಸುತ್ತಿರಲಿಲ್ಲ. ಈಗ ವಿದ್ಯಾರ್ಥಿಗಳು ಬಸ್‌ ಸೌಲಭ್ಯ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಂಸ್ಥೆ ಅಧಿಕಾರಿ, ದೇವಗಿರಿ, ಕೋಳೂರು ಗ್ರಾಮಕ್ಕೆ ಸಂಚರಿಸುವ ಬಸ್‌ನ್ನು ನಾಳೆಯಿಂದಲೇ ಗಣಜೂರು ಮಾರ್ಗವಾಗಿ ಸಂಚಾರಕ್ಕೆ ಸೂಚಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಪಂ ಅಧ್ಯಕ್ಷ ಕರಿಯಪ್ಪ ಉಂಡಿ, ಉಪಾಧ್ಯಕ್ಷೆ ಸಾವಿತ್ರಿ ಮರಡೂರು, ಸ್ಥಾಯಿ ಸಮಿತಿ ಅಧ್ಯಕ್ಷೆ ಶಿಲ್ಪಾ ಗೊರವರ, ತಾಪಂ ಇಒ ಅನ್ನಪೂರ್ಣ ಮುದಕಣ್ಣನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next