ವಿಧಾನಪರಿಷತ್ತು: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವುದರ ಜೊತೆಗೆ ನಿಗಮಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಜೆಡಿಎಸ್ ಸದಸ್ಯ ಬಿ.ಎಂ. ಫಾರೂಕ್ ಸರ್ಕಾರವನ್ನು ಒತ್ತಾಯಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯದ ಬಗ್ಗೆ ಪ್ರಶ್ನೆ ಕೇಳಿ ಮಾತನಾಡಿದ ಅವರು, ಮುಸ್ಲಿಮರು, ಕ್ರೈಸ್ತರು, ಜೈನರು, ಫಾರ್ಸಿಗಳು ಮತ್ತು ಬೌದ್ಧ ಧರ್ಮದ ಬಡವರ ಏಳಿಗಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಾದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದುಸ್ಥಿತಿಯಲ್ಲಿದೆ.
ಹುದ್ದೆಗಳೂ ಇಲ್ಲ. ಅನುದಾನವೂ ಇಲ್ಲ. ನಿಗಮದ ಈಗಿನ ಸ್ಥಿತಿ ನೋಡಿದರೆ ಸರ್ಕಾರ ನಿಗಮವನ್ನು ಮುಚ್ಚಲು ನಿರ್ಧರಿಸಿದೆಯೇ ಎಂಬ ಅನುಮಾನ ಮೂಡುತ್ತದೆ ಎಂದರು.
2016ರಿಂದ ಈ ಸಂಸ್ಥೆಗೆ ಸರ್ಕಾರ ಕೊಡುತ್ತಿರುವ ಅನುದಾನವನ್ನು ನೋಡಿದರೆ ಮತ್ತು ಇಲ್ಲಿ ತೀವ್ರವಾಗಿ ಕಡಿಮೆ ಮಾಡುತ್ತಿರುವ ಸಿಬ್ಬಂದಿ ಸಂಖ್ಯೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಜಿಲ್ಲಾ ಕಚೇರಿಗಳಲ್ಲೂ ಹೀಗೆಯೇ ಆಗಿದೆ. ಸಿಬ್ಬಂದಿ ಇಲ್ಲ. ಬಡವರು ಅಲ್ಲಿಗೆ ಹೋದರೆ ಕೇಳುವವರಿಲ್ಲ. ಕೆಲವು ಜಿಲ್ಲಾ ಕಚೇರಿಗಳಲ್ಲಿ ಕಸ ಗುಡಿಸಲೂ ನೌಕರರಿಲ್ಲ. ಬಡವರು ಸಾಲಕ್ಕಾಗಿ ಅರ್ಜಿ ಹಿಡಿದು ವಾರಗಟ್ಟಲೆ ಕಚೇರಿಗೆ ಸುತ್ತಾಡಬೇಕು. ಮಂಜೂರಾದ ಹುದ್ದೆಗಳು 48. ಆದರೆ, ಖಾಯಂ ಹುದ್ದೆಗಳು 3 ಮಾತ್ರ. 15 ಜನರನ್ನು ನಿಯೋಜನೆ ಮೇಲೆ ತೆಗೆದುಕೊಂಡಿದ್ದರೆ, 30 ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಅಧಿವೇಶನದ ಬಳಿಕ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ
2016-17 ರಲ್ಲಿ ಸರ್ಕಾರ ಈ ನಿಗಮಕ್ಕೆ 235.97 ಕೋಟಿ ರೂಪಾಯಿ ಖರ್ಚು ಮಾಡಿತ್ತು. 2017-18 ರಲ್ಲಿ ಇದನ್ನು 274 ಕೋಟಿ ರೂಪಾಯಿಗೆ ಏರಿಸಲಾಗಿತ್ತು. ಆದರೆ ಬಳಿಕ ಇದನ್ನು ಪ್ರತಿ ವರ್ಷ ಕಡಿಮೆ ಮಾಡುತ್ತಾ ಬರಲಾಗಿದೆ. 2018-19 ರಲ್ಲಿ 250 ಕೋಟಿಗೆ ಇಳಿಸಲಾಯಿತು. 2019-20 ರಲ್ಲಿ 197 ಕೋಟಿಗೆ ಇಳಿಕೆ ಮಾಡಲಾಯಿತು. 2020-21 ರಲ್ಲಿ ಸರ್ಕಾರ ಕೊಡುವ ಹಣವನ್ನು ತೀರಾ ಕಡಿಮೆ ಅಂದರೆ, ಕೇವಲ 54.72 ಕೋಟಿಗೆ ಇಳಿಸಲಾಗಿದೆ. ಇದರ ಅರ್ಥ ಏನು? ಮುಂದಿನ ವರ್ಷ ಪೂರ್ತಿ ನಿಲ್ಲಿಸಿ ಅಂಗಡಿ ಬಂದ್ ಮಾಡುವ ಆಲೋಚನೆ ಇದೆಯಾ ಎಂದು ಪ್ರಶ್ನಿಸಿದರು.
ನಿಗಮದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ವರ್ಷಕ್ಕೆ ಕನಿಷ್ಠ 300 ಕೋಟಿ ರೂ. ಅನುದಾನ ಒದಗಿಸಬೇಕು ಒದಗಿಸಬೇಕು ಎಂದು ಇದೇ ವೇಳೆ ಫಾರೂಕ್ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಜೆ.ಸಿ ಮಾಧುಸ್ವಾಮಿ, ಹಿಂದಿನ ಕೆಲ ವರ್ಷಗಳಲ್ಲಿ ನಿಗಮಕ್ಕೆ ನಿಗದಿಪಡಿಸಲಾಗಿದ್ದ ಅನುದಾನ ಹೆಚ್ಚಿಗೆ ಖರ್ಚಾಗಿಲ್ಲ. ಆ ಆಧಾರದಲ್ಲಿ ಅನುದಾನ ಹಂಚಿಕೆ ಮಾಡುವಾಗ ಕಡಿಮೆ ಆಗಿರಬಹುದು. 2019-20ರಲ್ಲಿ 149 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರೆ ಅದಕ್ಕಿಂತ ಹೆಚ್ಚಾಗಿ 197 ಕೋಟಿ ರೂ. ಖರ್ಚು ಮಾಡಲಾಗಿದೆ. ಮಂಜೂರಾದ ಹುದ್ದೆಗಳಲ್ಲಿ ಖಾಲಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ನಿಗಮದ ಕೆಲಸಗಳನ್ನು ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.